ಮಂಗಳವಾರ, ಮಾರ್ಚ್ 28, 2023
30 °C

ಎಂಎಸ್‌ಎಂಇಗಳಿಗೆ ಭರವಸೆ ಮೂಡಿಸಿರುವ ಆತ್ಮನಿರ್ಭರ ಯೋಜನೆ: ಅರಸಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸುಮಾರು ನಾಲ್ಕು ಸಾವಿರ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳು (ಎಂಎಸ್‌ಎಂಇ) ಮೈಸೂರು ಜಿಲ್ಲೆಗೆ ಬರಲು ಸಿದ್ಧವಾಗಿವೆ. ಅವುಗಳಿಗೆ ತ್ವರಿತಗತಿಯಲ್ಲಿ ಅನುಮತಿ ದೊರೆಯಲು ಕ್ರಮವಹಿಸಬೇಕು ಎಂದು ‘ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ’ದ (ಕಾಸಿಯಾ) ಅಧ್ಯಕ್ಷ ಕೆ.ಬಿ.ಅರಸಪ್ಪ ಹೇಳಿದರು.

‘ಕೈಗಾರಿಕೆ ಆರಂಭಿಸಲು ಹಲವು ಮಂದಿ ಅರ್ಜಿ ಸಲ್ಲಿಸಿ ಅನುಮತಿಗಾಗಿ ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹೊಸ ಕೈಗಾರಿಕೆಗಳಿಗೆ ಅನುವು ಮಾಡಿಕೊಡಲು ಮೈಸೂರು ಮಾತ್ರವಲ್ಲ, ರಾಜ್ಯದ ವಿವಿಧೆಡೆ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಬೇಕು’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಣ್ಣ ಕೈಗಾರಿಕೆಗಳಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ. ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಯು ಎಂಎಸ್‌ಎಂಇಗಳಿಗೆ ಭರವಸೆ ಮೂಡಿಸಿದೆ ಎಂದು ತಿಳಿಸಿದರು.

ಕೋವಿಡ್‌ನಿಂದ ಎಂಎಸ್‌ಎಂಇ ಒಳಗೊಂಡಂತೆ ಎಲ್ಲ ಉದ್ದಿಮೆಗಳಿಗೆ ತೊಂದರೆ ಉಂಟಾಗಿದೆ. ಲಾಕ್‌ಡೌನ್‌ ತೆರವಾದ ಬಳಿಕ ಒಂದೆರಡು ತಿಂಗಳು ಶೇ 20ರಷ್ಟು ಕಾರ್ಮಿಕರು ಮಾತ್ರ ಮರಳಿದ್ದರು. ಈಗ ಶೇ 50ರಿಂದ 60ರಷ್ಟು ಕಾರ್ಮಿಕರು ಮರಳಿದ್ದಾರೆ. ಶೇ 20ರಷ್ಟು ಕೈಗಾರಿಕೆಗಳು ಇನ್ನೂ ಪುನರಾರಂಭ ಆಗಿಲ್ಲ ಎಂದರು.

ಬಡ್ಡಿ ದರ ಇಳಿಸಲಿ: ಎಂಎಸ್‌ಎಂಇಗಳಿಗೆ ಶೇ 12ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಕೊರೊನಾ ಕಷ್ಟಕಾಲ ಕೊನೆಗೊಳ್ಳುವವರೆಗೂ ಬಡ್ಡಿ ದರವನ್ನು ಶೇ 6ಕ್ಕೆ ಇಳಿಸುವಂತೆ ಆಗ್ರಹಿಸಿದರು.

‘ಕೆಲವರಿಗೆ ಶೇ 18, ಇನ್ನೂ ಕೆಲವರಿಗೆ ಶೇ 28ರಷ್ಟು ಜಿಎಸ್‌ಟಿ ಇದೆ. ಈಗಿನ ಪರಿಸ್ಥಿತಿಯಲ್ಲಿ ಶೇ 18ರಷ್ಟು ಜಿಎಸ್‌ಟಿಯನ್ನೇ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೇ 12ಕ್ಕೆ ಇಳಿಸಬೇಕು’ ಎಂದು ಮನವಿ ಮಾಡಿದರು.

ಕಾರ್ಯದರ್ಶಿ ಎನ್‌.ಆರ್‌.ಜಗದೀಶ್, ಜಂಟಿ ಕಾರ್ಯದರ್ಶಿ ಪಿ.ಎನ್‌. ಜೈಕುಮಾರ್, ಚನ್ನಬಸಪ್ಪ ಸಿ.ಹೊಂಡಕಟ್ಟಿ, ಖಜಾಂಚಿ ಎಸ್‌.ಶಂಕರನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.