ಬುಧವಾರ, ಸೆಪ್ಟೆಂಬರ್ 28, 2022
27 °C

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮೈಸೂರಿನ ಯುವಜನೋತ್ಸವದಲ್ಲಿ ಸಿಎಂ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಯುವಜನರು ಮನಸ್ಸು ಮಾಡಿದರೆ, ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಏನನ್ನು ಬೇಕಾದರೂ ಸಾಧಿಸಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ‘ಯುವಜನ ಮಹೋತ್ಸವ’, ವಿಶ್ವವಿದ್ಯಾಲಯ ಎಂಜಿನಿಯರಿಂಗ್ ಕಾಲೇಜು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಕ–ಯುವತಿಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಸ್ವಾಮಿ ವಿವೇಕಾನಂದ ಅವರಂಥವರನ್ನು ಯುವಜನರು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಛಲದೊಂದಿಗೆ ನಿಮ್ಮ ಕ್ಷೇತ್ರದಲ್ಲಿ ಮುನ್ನುಗ್ಗಿದರೆ ಯಶಸ್ಸು ಖಂಡಿತವಾಗಿಯೂ ಮನೆ ಬಾಗಿಲಿಗೆ ಬರುತ್ತದೆ. ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಹುದು. ಈ ನಿಟ್ಟಿನಲ್ಲಿ ಚಲನಚತ್ರ ನಟ ಯಶ್ ಯುವಕರ ಐಕಾನ್ ಆಗಿದ್ದಾರೆ’ ಎಂದು ತಿಳಿಸಿದರು.

ಶಕ್ತಿ ಇಮ್ಮಡಿಯಾಗಿದೆ

‘ಮಾನಸಗಂಗೋತ್ರಿಯ ಯುವಶಕ್ತಿಯನ್ನು ನೋಡಿ ನನ್ನ ಸಂತಹ ಮತ್ತು ಶಕ್ತಿ ಇಮ್ಮಡಿಯಾಗಿದೆ. ಇಲ್ಲಿರುವ ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ 25 ವರ್ಷಗಳಲ್ಲಿ ಭಾರತವನ್ನು ವಿಶ್ವದಲ್ಲಿಯೇ ನಂ.1 ಆಗಿಸಬಹುದು. ಇದಕ್ಕಾಗಿ ನೀವು ಶಕ್ತಿ ತುಂಬುತ್ತೀರೆಂಬ ಭರವಸೆ ಇದೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಬಹಳ ಜನರ ಪ್ರಾಣ ತ್ಯಾಗದಿಂದ ಸಿಕ್ಕಿದೆ. ಲಕ್ಷಾಂತರ ಮಂದಿ ಅನಾಮಧೇಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಹೆಸರು ದಾಖಲಾಗಿಲ್ಲ. ಕೆಲವರ ಹೆಸರಷ್ಟೆ ಕೇಳಿಬರುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯನ್ನು ಆ ಅನಾಮಧೇಯ ಹೋರಾಟಗಾರರಿಗೆ ಅರ್ಪಿಸುತ್ತೇನೆ’ ಎಂದರು.

‘ಈ ಭಾಗವು, ಮೈಸೂರು ಮಹಾರಾಜರ ಕಾಲದಲ್ಲಿ ಅಭಿವೃದ್ಧಿಯ ಪರ್ವವನ್ನು ಕಂಡಿದ್ದೇವೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಅಭಿವೃದ್ಧಿ ಆಗಬೇಕಿದೆ. ಅದಕ್ಕೆ ಕಂಕಣಬದ್ಧರಾಗಿದ್ದೇವೆ. ನವ ಕರ್ನಾಟಕದ ಮೂಲಕ ನವ ಭಾರತದ ನಿರ್ಮಾಣ ನಮ್ಮ ಸಂಕಲ್ಪವಾಗಿದೆ’ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ: 

‘ವಿಶೇಷ ಕೈಗಾರಿಕೆಗಳು ಮೈಸೂರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಮಹತ್ವದ ಕೇಂದ್ರ ಇದಾಗಲಿದೆ. ಟೂರಿಸಂ ಸರ್ಕೀಟ್‌ಗಾಗಿ ಅನುದಾನ ನೀಡಲಾಗುವುದು. ಮೈಸೂರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಷೋಕೇಸ್ ಮಾಡಲಾಗುವುದು. ರೇಷ್ಮೆ, ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಿಸಲಾಗುವುದು. ಮಹಾರಾಜ ಹಾಗೂ ಮಹಾರಾಣಿ ಕಾಲೇಜುಗಳ ಸಮಗ್ರ ಅಭಿವೃದ್ಧಿಯನ್ನು ಇದೇ ವರ್ಷ ಪ್ರಾರಂಭಿಸಲಾಗುವುದು. ಮಾನಸ ಗಂಗೋತ್ರಿಯಲ್ಲಿ ಸಾವಿರ ವಿದ್ಯಾರ್ಥಿನಿಯರ ಹಾಸ್ಟೆಲ್‌ ನಿರ್ಮಾಣವೂ ಈ ವರ್ಷವೇ ಶುರುವಾಗಲಿದೆ’ ಎಂದು ಭರವಸೆ ನೀಡಿದರು.

‘ಕಾರ್ಯಕ್ರಮದಲ್ಲಿ ನೀಡಿರುವ ತ್ರಿವರ್ಣ ಧ್ವಜವನ್ನು ಮನೆ, ಹಾಸ್ಟೆಲ್‌, ಕೊಠಡಿಗಳ ಮೇಲೆ ಹಾರಿಸಬೇಕು’ ಎಂದು ವಿದ್ಯಾರ್ಥಿಗಳನ್ನು ಕೋರಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಮಹಾರಾಣಿ ಕಾಲೇಜನ್ನು ಸಂಪೂರ್ಣವಾಗಿ ನವೀಕರಿಸಿ ಹಿಂದಿನ ವೈಭವ ಮರುಕಳಿಸುವಂತೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟ ಯಶ್, ಸಂಸದ ಪ್ರತಾಪ ಸಿಂಹ, ನಿರಂಜನ್, ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್, ಮೇಯರ್‌ ಸುನಂದಾ ಫಾಲನೇತ್ರ, ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.

ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಸ್ವಾಗತಿಸಿದರು. ಶಂಕರ್‌ ಪ್ರಕಾಶ್, ಪ್ರೊ.ಸಿ.ನಾಗಣ್ಣ ನಿರೂಪಿಸಿದರು.

ಇದಕ್ಕೂ ಮುನ್ನ, ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವಿವಿಧ ರಾಜ್ಯಗಳ ಸಂಸ್ಕೃತಿ ಪರಿಚಯಿಸುವ ನೃತ್ಯ ಗಮನಸೆಳೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು