ಶುಕ್ರವಾರ, ಸೆಪ್ಟೆಂಬರ್ 17, 2021
25 °C
ಬಸವ ಜಯಂತಿ ಕಾರ್ಯಕ್ರಮದಲ್ಲಿ ಇತಿಹಾಸತಜ್ಞ ಷ.ಶೆಟ್ಟರ್ ಅಭಿಪ್ರಾಯ

ಬಸವಣ್ಣ ಬಗ್ಗೆ ಸಂಶೋಧಕರಿಂದ ಗೊಂದಲ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಸವಣ್ಣನವರಿಗೆ ಭಕ್ತರಿಂದ ಮಾತ್ರವಲ್ಲ, ಸಂಶೋಧಕರಿಂದಲೂ ಅನ್ಯಾಯ ಆಗಿದೆ. ಆ ಅನ್ಯಾಯವನ್ನು ಸರಿಪಡಿಸುವ ಕರ್ತವ್ಯ ನಮ್ಮ ಮುಂದಿದೆ’ ಎಂದು ಇತಿಹಾಸತಜ್ಞ ಡಾ.ಷ.ಶೆಟ್ಟರ್‌ ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೇ ಒಂದು ವಿಷಯದ ಬಗ್ಗೆ ಸಂಶೋಧಕರಲ್ಲಿ ಒಮ್ಮತ ಮೂಡಲು ಸಾಧ್ಯವೇ ಇಲ್ಲ. ಒಮ್ಮತ ಬರಬೇಕು ಎಂಬುದು ನನ್ನ ಆಸೆಯಲ್ಲ. ಆದರೆ ಅರ್ಥಪೂರ್ಣವಾದ ಭಿನ್ನಾಭಿಪ್ರಾಯ ಇದ್ದರೆ ಅದಕ್ಕೆ ಗೌರವವಿರುತ್ತದೆ. ಅರ್ಥವಿಲ್ಲದ, ಹಟಮಾರಿತನದಿಂದ ಬೆಳೆಸಿಕೊಂಡು ಬರುವ ಭಿನ್ನಾಭಿಪ್ರಾಯಗಳಿಗೆ ಗೌರವ ಇರುವುದಿಲ್ಲ’ ಎಂದರು.

ಸಂಶೋಧಕರು ಬಸವಣ್ಣನವರ ಬಗ್ಗೆ ಗೋಜಲು, ಗೊಂದಲ ಉಂಟುಮಾಡಿದ್ದಾರೆ. ಸಂಶೋಧನೆಯು ದ್ವಂದ್ವಗಳನ್ನು ಸೃಷ್ಟಿಮಾಡುತ್ತದೆ. ಇಂದಿನ ಪೀಳಿಗೆಯ ಮಂದಿ ಮತ್ತು ಮುಂದೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಕಳಕಳಿ ಹೊಂದಿರುವವರು ಈ ಗೊಂದಲ ನಿವಾರಿಸಬೇಕು. ಸಂಶೋಧನೆಯಲ್ಲಿ ಸೇರಿರುವ ಕಸ ಸ್ವಚ್ಛಗೊಳಿಸಬೇಕು. ಈ ಹೊಣೆಗಾರಿಕೆಯನ್ನು ಕಡೆಗಣಿಸುವಂತಿಲ್ಲ ಎಂದು ಹೇಳಿದರು.

ಯಾವುದೇ ಧರ್ಮದ ಸಂಸ್ಥಾಪಕರು ಕೊಟ್ಟಿರದೇ ಇರುವ ವಿಶೇಷವಾದ ತತ್ವಗಳನ್ನು ಬಸವಣ್ಣನವರು ಕೊಟ್ಟಿದ್ದಾರೆ. ಬುದ್ಧ ಪ್ರತಿಪಾದಿಸದೇ ಇರುವ ಹಲವು ತತ್ವಗಳನ್ನು ಬಸವಣ್ಣ ಪ್ರತಿಪಾದಿಸಿದ್ದಾರೆ. ಸ್ತೀಯರ ಬಗ್ಗೆ ಬುದ್ಧನಿಗೆ ಮುಕ್ತ ಮನಸ್ಸು ಇರಲಿಲ್ಲ. ಆದರೆ ಸ್ತ್ರೀಯರಿಗೆ ಮುಕ್ತಿಯನ್ನು ದಯಪಾಲಿಸಿದ ಮೊಟ್ಟಮೊದಲ ಧರ್ಮಗುರು ಬಸವಣ್ಣ ಎಂದರು.

ಧರ್ಮವನ್ನು ಪ್ರಸಾರ ಮಾಡಿರುವವರು ಆದರ್ಶ ವ್ಯಕ್ತಿಗಳು. ಅವರಲ್ಲಿ ಕುಂದುಕೊರತೆಗಳು ಇರಲು ಸಾಧ್ಯವಿಲ್ಲ. ಆದರೆ ಅವರ ಅನುಯಾಯಿಗಳು ಅನೇಕ ಬಾರಿ ತತ್ವಗಳನ್ನು ತಿರುಚಿ ಹೊಸ ಸಿದ್ಧಾಂತ ಸೃಷ್ಟಿಮಾಡಿದರು. ಇದರಿಂದ ಮುಖ್ಯವಾದ ವಿಚಾರಗಳು ತೆರೆಮರೆಗೆ ಸರಿದು, ಮುಖ್ಯವಲ್ಲದ್ದು ಮುನ್ನೆಲೆಗೆ ಬಂದವು ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲ ಸಮಸ್ಯೆಗಳಿಗೆ ಪರಿಹಾರ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎಂ.ಎನ್‌.ವೆಂಕಟಾಚಲಯ್ಯ, ಇಂದು ಎಲ್ಲ ಧರ್ಮಗಳು ಪರಸ್ಪರ ಕಚ್ಚಾಡುತ್ತಿವೆ. ವಿಶ್ವದೆಲ್ಲೆಡೆ ಧರ್ಮದ ಹೆಸರಿನಲ್ಲಿ ಜಗಳ ನಡೆಯುತ್ತಿದೆ. ಬಸವಣ್ಣ ಅವರು ಪ್ರತಿಪಾದಿಸಿದ ಧರ್ಮದ ಕಲ್ಪನೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅವರು ನೀಡಿರುವ ಮಾನವಧರ್ಮದ ಸಂದೇಶ ಎಲ್ಲಕ್ಕಿಂತಲೂ ಮಿಗಿಲಾದುದು ಎಂದು ಬಣ್ಣಿಸಿದರು.

ಎಲ್ಲ ಧರ್ಮಗಳು ಒಂದೊಂದು ಘೋಷಣೆ ಹೊರಡಿಸುತ್ತವೆ. ತನ್ನ ಧರ್ಮವೇ ಶ್ರೇಷ್ಠ ಎಂಬ ಭಾವನೆಯನ್ನು ಜನರಲ್ಲಿ ಬಿತ್ತಲಾಗುತ್ತಿದೆ. ಇಂತಹ ಘೋಷಣೆಗಳು ಧರ್ಮಗಳ ನಡುವೆ ದ್ವೇಷಭಾವನೆ ಕೆರಳಿಸುತ್ತವೆ. ಬಸವೇಶ್ವರ ಅವರು ಧರ್ಮದ ಬಗ್ಗೆ ನೀಡಿರುವ ಸಂದೇಶವನ್ನು ಯಾರಿಗೂ ಟೀಕಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಭೂಮಿಯಲ್ಲಿ ಮನುಷ್ಯರು, ಪ್ರಾಣಿಗಳು ಮತ್ತು ಗಿಡಮರಗಳು ಒಂದನ್ನೊಂದು ಅವಲಂಬಿಸಿವೆ. ‘ಹಿಡನ್ ಲೈಫ್‌ ಆಫ್ ಟ್ರೀಸ್‌’ ಎಂಬ ಪುಸ್ತಕದಲ್ಲಿ ಒಂದು ವಿಷಯದ ಪ್ರಸ್ತಾಪ ಇದೆ. ಜಿರಾಫೆಯೊಂದು ಅಕೇಷಿಯಾ ಮರದ ಎಲೆಯನ್ನು ತಿನ್ನುತ್ತದೆ. ತಕ್ಷಣವೇ ಆ ಮರ ಸಮೀಪದ ಮರಕ್ಕೆ ‘ನನ್ನ ಎಲೆಯನ್ನು ಜಿರಾಫೆ ತಿನ್ನುತ್ತಿದೆ, ನೀನು ಹುಷಾರಾಗಿರು’ ಎಂಬ ಸಂದೇಶವನ್ನು ಕಳುಹಿಸುತ್ತದೆ. ಸಂದೇಶ ಪಡೆದ ಮರ ತನ್ನ ಎಲೆಗಳಿಗೆ ವಿಷಯುಕ್ತ ಪದಾರ್ಥಗಳನ್ನು ಕಳುಹಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದೇ ರೀತಿ ಹುಳ ಎಲೆಯನ್ನು ತಿನ್ನಲು ಬಂದಾಗ ಆ ಮರವು ಪಕ್ಷಿಗೆ ಸಂದೇಶ ಕಳುಹಿಸಿ ಹುಳವನ್ನು ತಿನ್ನುವಂತೆ ಮಾಡುತ್ತದೆ. ಈ ರೀತಿ ವಿಶ್ವದಲ್ಲಿರುವ ಜೀವಿಗಳು, ಮರಗಿಡಗಳು ಒಂದನ್ನೊಂದು ಅವಲಂಬಿಸಿಕೊಂಡಿವೆ ಎಂದರು.

ಜೆಎಸ್‌ಎಸ್‌ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಂಸ್ಥೆಯ ಯಶಸ್ಸಿಗೆ ಕಾರಣ ಎಂದು ಶ್ಲಾಘಿಸಿದರು.

ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಮೇಲಣ ಗವಿಮಠ, ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಮಹಾಸಭಾ ಅಧ್ಯಕ್ಷ ಎಸ್‌.ಶಿವಮೂರ್ತಿ ಕಾನ್ಯ, ಒಕ್ಕೂಟದ ಅಧ್ಯಕ್ಷೆ ಜಯಾಗೌಡ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಸ್‌.ಎಂ.ಜಂಬುಕೇಶ್ವರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು