ವರುಣಾ: ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮದ ಕೆರೆ ಹಕ್ಕಿಗಳ ಆಕರ್ಷಣೆ ಕೇಂದ್ರ. ದಸರೆ ನಂತರ ಇಲ್ಲಿ ವಿದೇಶಿ ಹಕ್ಕಿಗಳ ಕಲರವ ಆವರಿಸುತ್ತದೆ.
ಆರು ಶತಮಾನದ ಇತಿಹಾಸವುಳ್ಳ ಕೆರೆಯು 300 ಎಕರೆ ವಿಸ್ತೀರ್ಣ ಹೊಂದಿತ್ತು ಎಂದು ಹಿರಿಯರು ಹೇಳುತ್ತಾರೆ. ಆದರೆ, ಸರ್ಕಾರಿ ದಾಖಲೆಗಳಲ್ಲಿ 198 ಎಕರೆ ಎಂದಿದೆ. 50 ಎಕರೆಗಿಂತ ಹೆಚ್ಚು ಪ್ರದೇಶ ಒತ್ತುವರಿಯಾಗಿದೆ ಎಂಬುದು ಗ್ರಾಮಸ್ಥರ ಆರೋಪ.
ಮಳೆ ನೀರನ್ನೇ ಆಶ್ರಯಿಸಿದ್ದ ಕೆರೆಗೆ ವರುಣಾ ನಾಲೆಯ ನೀರನ್ನು ಹರಿಸುವುದರಿಂದ ಸದಾ ತುಂಬಿರುತ್ತದೆ. ಕೃಷಿಗೆ ವರುಣಾ ಹಾಗೂ ರಾಂಪುರ ನಾಲೆಯ ನೀರನ್ನು ಹರಿಸಲಾಗುತ್ತದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಯೂ ನಡೆಯಬೇಕಾಗಿದೆ.
ಕಾಂಗ್ರೆಸ್ ಮುಖಂಡ ಎಚ್.ಸಿ.ಮಹದೇವಪ್ಪ ಅವರ ಊರೂ ಇದೇ ಆಗಿರುವುದರಿಂದ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಕೆರೆ ಅಭಿವೃದ್ಧಿಗೆ ₹ 3 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಕಾಯಕಲ್ಪ ನೀಡಿದ್ದರು.
‘ಮೀನುಗಾರಿಕೆ ಇಲಾಖೆಯಿಂದ ಮೀನು ಹಿಡಿಯಲು ನೂರಾರು ಜನರಿಗೆ ಅವಕಾಶ ನೀಡಿರುವುದು ಸರಿಯಲ್ಲ. ಚಟುವಟಿಕೆಗಳು ಹೆಚ್ಚಾದರೆ ಪಕ್ಷಿಗಳು ಇಲ್ಲಿಂದ ಬೇರೆಡೆ ತೆರಳುವ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ಪಕ್ಷಿ ತಜ್ಞರಾದ ಮೈಸೂರಿನ ಶಿವಪ್ರಕಾಶ್ ಹಾಗೂ ನಂಜನಗೂಡಿನ ಕಿರಣ್ ಬಗಾಡೆ.
‘ಕೆರೆಯ ಸುತ್ತಳತೆ 4ರಿಂದ 5 ಕಿ.ಮೀ. ಉದ್ದ ಹೊಂದಿದ್ದು, ಶೇ 25ರಷ್ಟು ಭಾಗಕ್ಕೆ ಮಾತ್ರ ತಂತಿಬೇಲಿ ಅಳವಡಿಸಲಾಗಿದೆ. ಉಳಿದ ಕಡೆಗಳಲ್ಲೂ ಬೇಲಿ ಅಳವಡಿಸಬೇಕು’ ಎಂದು ರೋಟರಿ ಕಾರ್ಯದರ್ಶಿ ಆನಂದ ಆಗ್ರಹಿಸಿದ್ದಾರೆ.
‘ಯದುವಂಶದ ಪಾಳೆಗಾರರಾದ ಯದುರಾಯ ಹಾಗೂ ಕೃಷ್ಣರಾಯ ಈ ಹದಿನಾಡಲ್ಲಿ ರಾಜ್ಯವನ್ನು ಕಟ್ಟಿದ್ದರು’ ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಕುದುರೆ ಹಾಗೂ ಇನ್ನಿತರ ಪ್ರಾಣಿಗಳನ್ನು ಸಾಕಲು ಈ ಜಾಗವನ್ನು ಮೀಸಲಿಟ್ಟಿದ್ದರು ಎಂದು ಗ್ರಾಮದ ಮುಖಂಡರು
ಹೇಳುತ್ತಾರೆ.
ಎಚ್‌ಎನ್ಎಫ್, ರೋಟರಿ ನೆರವು
ಹದಿನಾರು ನೇಚರ್ ಫೌಂಡೇಷನ್ (ಎಚ್‌ಎನ್ಎಫ್) ಹಾಗೂ ರೋಟರಿ ಸಂಸ್ಥೆಯು ಕೆರೆಯ ಸುತ್ತಲೂ ಸ್ವಚ್ಛತೆ ಹಾಗೂ ಕೆರೆ ಪರಿಸರ ಕುರಿತಂತೆ ಪಕ್ಷಿ ತಜ್ಞರ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುತ್ತದೆ.
‘ಕೆರೆಯ ಸ್ವಚ್ಛತೆ ಹಾಗೂ ನಿರ್ವಹಣೆಗೆ ಮತ್ತಷ್ಟು ಒತ್ತು ಕೊಡಬೇಕು’ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಸಂತೋಷಕುಮಾರ ಎಚ್.ಎಂ. ತಿಳಿಸಿದರು.
ಸಾವಿರಾರು ಹಕ್ಕಿಗಳ ಆಗಮನ
ಆಹಾರ ಅರಸಿ ಹದಿನಾರು ಕೆರೆಗೆ ದೇಶದ ವಿವಿಧ ಭಾಗ ಸೇರಿದಂತೆ ಆಸ್ಟ್ರೇಲಿಯಾ, ಮಂಗೋಲಿಯಾ, ಆಫ್ರಿಕಾ ದೇಶದಿಂದ 230ಕ್ಕೂ ಹೆಚ್ಚು ಪ್ರಭೇದದ ಸಾವಿರಾರು ಹಕ್ಕಿಗಳು ಇಲ್ಲಿಗೆ ಬರುತ್ತಿವೆ. ಮಂಗೋಲಿಯಾದ ಬಾರ್ ಹೆಡ್ಡೆಡ್ ಗೂಸ್ (ಪಟ್ಟೆ ಬಾತು) ಪ್ರತಿವರ್ಷ ಬರುತ್ತವೆ. ಬಾಬ್ಲೆರ್, ಇಂಡಿಯನ್, ರೋಲರ್, ಹೆಬ್ಬಾತು, ಡಕ್, ಕಾಜಾಣ ಹಕ್ಕಿಗಳೂ ಬರುತ್ತವೆ.
‘ಮಂಗೋಲಿಯದಿಂದ ಅನೇಕ ಹಕ್ಕಿಗಳು ಆಹಾರ ಅರಸಿ ಬಂದು ಮೂರು ತಿಂಗಳ ನಂತರ ತಾಯ್ನಾಡಿಗೆ ಹೋಗುತ್ತವೆ’ ಎಂದು ಚಿಕ್ಕಯ್ಯನಛತ್ರ ಉಪ ತಹಶೀಲ್ದಾರ್ ಬಾಲಸುಬ್ರಹ್ಮಣ್ಯಂ ತಿಳಿಸಿದರು.
****
ಹದಿನಾರು ಕೆರೆಯನ್ನು ಇನ್ನೊಮ್ಮೆ ಸರ್ವೆ ನಡೆಸಿ, ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. –ಮೋಹನಕುಮಾರಿ, ತಹಶೀಲ್ದಾರ್, ನಂಜನಗೂಡು
ಹದಿನಾರು ಕೆರೆ ಪಕ್ಷಿಗಳ ಸಂತಾನೋತ್ಪತ್ತಿಗೆ ಹೆಸರು ವಾಸಿಯಾಗಿದೆ. ಇದರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು.
–ಅಭಿ ಎಚ್.ಬಿ, ಗ್ರಾ.ಪಂ ಅಧ್ಯಕ್ಷ, ಹದಿನಾರು
***
ಈ ಕೆರೆ ನಿರ್ವಹಣೆ ನಮಗೆ ಬರುವುದಿಲ್ಲ. ಆದರೂ, ನರೇಗಾ ಯೋಜನೆಯಡಿ ಹೂಳೆತ್ತಲು ಗ್ರಾ.ಪಂ ಸಭೆಯಲ್ಲಿ ತೀರ್ಮಾನಿಸಲಾಗುವುದು
–ಸಿಜೇಶ್ ಕುಮಾರ್, ಪಿಡಿಒ, ಹದಿನಾರು ಗ್ರಾ.ಪಂ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.