ಸೋಮವಾರ, ಮಾರ್ಚ್ 20, 2023
30 °C
ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ; ಇಂಧನ ಬೆಲೆ ಏರಿಕೆಗೆ ಖಂಡನೆ

ರಾಜ್ಯ ಉಳಿಯಬೇಕಾದರೆ ಬಿಜೆಪಿ ತೊಲಗಬೇಕು: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಾಜ್ಯದ ಜನರ ಸಂಕಷ್ಟ ದೂರವಾಗಬೇಕಾದರೆ ಬಿಜೆಪಿ ಆಡಳಿತ ತೊಲಗಬೇಕು. ನಾವು ಅಧಿಕಾರಕ್ಕೆ ಬರುವುದು ಮುಖ್ಯವಲ್ಲ. ರಾಜ್ಯ ಉಳಿಯಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮೈಸೂರು ನಗರ ಹಾಗೂ ಗ್ರಾಮಾಂತರ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಾಯ ಹಸ್ತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅತ್ಯಂತ ಕೆಟ್ಟ ಸರ್ಕಾರ ಇದೆ. ಕೋವಿಡ್‌ನಿಂದ ಸಂಕಷ್ಟ ಎದುರಿಸುತ್ತಿರುವವರಿಗೆ ನೆರವಾಗಲು ಸರ್ಕಾರ ವಿಫಲವಾಗಿದೆ. ಆದ್ದರಿಂದ ಕಾಂಗ್ರೆಸ್‌ ಪಕ್ಷ ಸಹಾಯ ಹಸ್ತ ಕಾರ್ಯಕ್ರಮದ ಮೂಲಕ ಜನರ ನೋವಿಗೆ ಸ್ಪಂದಿಸಲು ಮುಂದಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಲಿದೆ ಎಂದರು.

ಒಂದೂವರೆ ವರ್ಷದಿಂದ ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಜನರು ನಲುಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಸರ್ಕಾರ ಸುಳ್ಳು ಲೆಕ್ಕ ಕೊಟ್ಟಿದೆ. ಇದುವರೆಗೆ 30 ಸಾವಿರ ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಿದೆ. ಆದರೆ ಈ ರೋಗಕ್ಕೆ ರಾಜ್ಯದಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

‘ನಮ್ಮ ಸರ್ಕಾರ ಈಗ ಅಧಿಕಾರದಲ್ಲಿ ಇದ್ದಿದ್ದರೆ ಬಿಪಿಎಲ್ ಕುಟುಂಬಕ್ಕೆ ₹ 10 ಸಾವಿರ ಸಹಾಯಧನ ಹಾಗೂ ಪ್ರತಿ ತಿಂಗಳು ತಲಾ 10 ಕೆ.ಜಿ. ಅಕ್ಕಿ ವಿತರಿಸುತ್ತಿದ್ದೆವು. ಆದರೆ ನಮ್ಮ ಸರ್ಕಾರ ಕೊಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು, 2 ಕೆ.ಜಿಗೆ ಇಳಿಸಿರುವ ಯಡಿಯೂರಪ್ಪ ಸರ್ಕಾರಕ್ಕೆ ಮಾನವೀಯತೆ ಇಲ್ಲ’ ಎಂದು ಕಿಡಿಕಾರಿದರು.

‘ನನ್ನ ಆಡಳಿತದ ಅವಧಿಯಲ್ಲಿ ಒಟ್ಟು ₹ 1.25 ಲಕ್ಷ ಕೋಟಿ ಸಾಲ ಮಾಡಲಾಗಿತ್ತು. ಯಡಿಯೂರಪ್ಪ ಅವರು ಕೇವಲ ಎರಡು ವರ್ಷದಲ್ಲಿ ₹ 1.50 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜನರಿಗೆ ಒಳ್ಳೆಯದಾಗಬೇಕಾದರೆ ಈ ಸರ್ಕಾರ ತೊಲಗಬೇಕು’ ಎಂದು ಕಿಡಿಕಾರಿದರು.

ನೂಕುನುಗ್ಗಲು, ತಳ್ಳಾಟ: ವೇದಿಕೆ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ವೇದಿಕೆಯಿಂದ ಕೆಳಗಿಳಿಯುವಂತೆ ಮುಖಂಡರು ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ನೂಕುನುಗ್ಗಲು, ತಳ್ಳಾಟ ಕಂಡುಬಂತು. ಈ ವೇಳೆ ಸಿದ್ದರಾಮಯ್ಯ ಅವರು ವೇದಿಕೆ ಮೇಲಿದ್ದವರನ್ನು ಕೆಳಗಿಳಿಸಿದರು. ಅಲ್ಪ ಸಮಯದ ಬಳಿಕ ಎಲ್ಲರೂ ಮತ್ತೆ ವೇದಿಕೆ ಮೇಲೆ ಕಾಣಿಸಿಕೊಂಡರು. ಇದರಿಂದ ಗರಂ ಆದ ಅವರು ಎದ್ದುಹೋಗಿ ಎಲ್ಲರನ್ನೂ ಕೆಳಗೆ ತಳ್ಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮುಖಂಡರಾದ ರಮಾನಾಥ ರೈ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಎಚ್.ಪಿ.ಮಂಜುನಾಥ್, ಸಿ.ಅನಿಲ್ ಕುಮಾರ್, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಪುಷ್ಪಾ ಅಮರನಾಥ್, ಯುವ ಕಾಂಗ್ರೆಸ್‌ ಅಧ್ಯಕ್ಷ ರಕ್ಷಾ ರಾಮಯ್ಯ, ಮುಖಂಡರಾದ ವಾಸು, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಡಿ.ರವಿಶಂಕರ್, ಹಂಗಾಮಿ ಮೇಯರ್ ಅನ್ವರ್ ಬೇಗ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಮೈಸೂರು ನಗರ ಅಧ್ಯಕ್ಷ ಆರ್.ಮೂರ್ತಿ, ಮೈಸೂರು ನಗರ ಹಾಗೂ ಜಿಲ್ಲೆಯ ಕೆಪಿಸಿಸಿ ಉಸ್ತುವಾರಿಗಳು, ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಪಾಲ್ಗೊಂಡರು. ಶಾಸಕ ತನ್ವೀರ್‌ ಸೇಠ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.

‘ಪದೇಪದೇ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಲ್ಲ’: ‘ನಮ್ಮ ಪಕ್ಷಕ್ಕೆ ಯಾರೇ ಸೇರಿಕೊಳ್ಳುವುದಾದರೂ ಅಭ್ಯಂತರವಿಲ್ಲ. ಆದರೆ ಪದೇ ಪದೇ ಪಕ್ಷಕ್ಕೆ ದ್ರೋಹ ಮಾಡುವವರನ್ನು ಯಾವುದೇ ಕಾರಣಕ್ಕೂ ಸೇರಿಸಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

’ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಲ್ಲದವರನ್ನು ಸೇರಿಸಬಾರದು. ಅಧಿಕಾರದ ಆಸೆಯಿಂದ ಯಾರೂ ಕಾಂಗ್ರೆಸ್‌ಗೆ ಬರಬೇಡಿ. ಅಧಿಕಾರ ಸಿಕ್ಕಾಗ ಪಡೆದುಕೊಳ್ಳಬೇಕೇ ಹೊರತು, ಅಧಿಕಾರವೇ ಮುಖ್ಯ ಎಂಬ ಮನೋಭಾವ ಇಟ್ಟುಕೊಳ್ಳಬಾರದು’ ಎಂದರು.

‘ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ ಎಂದು ಅರ್ಜಿ ಹಾಕಿದ್ದೇವೆಯೇ?’: ‘ನಮ್ಮನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ ಎಂದು ಅರ್ಜಿ ಹಾಕಿದ್ದೇವೆಯೇ?’ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರೇ ಜೆಡಿಎಸ್‌ನಲ್ಲಿ ಅಧಿಕಾರ ಅನುಭವಿಸಿ ಕಾಂಗ್ರೆಸ್‌ಗೆ ಬಂದ ಗಿರಾಕಿ. ಡಿ.ಕೆ.ಶಿವಕುಮಾರ್‌ ಹಾಗೂ ಅವರ ನಡುವಿನ ಸಂಬಂಧ ಸರಿ ಇಲ್ಲ. ಅದನ್ನು ಮುಚ್ಚಿಕೊಳ್ಳಲು ನಮ್ಮ ಬಗ್ಗೆ ಪದೇಪದೇ ಪ್ರಸ್ತಾಪ ಮಾಡುತ್ತಿದ್ದಾರೆ. ಇಬ್ಬರೂ ಹೊಸ ಆಟವಾಡುತ್ತಿದ್ದಾರೆ’ ಎಂದರು.

‘ಕಾಂಗ್ರೆಸ್‌ ಸೇರಿದವರಿಗೆ ಸ್ವಾಗತ’: ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಸ್ಥಳೀಯ ಮುಖಂಡರು, ಪಾಲಿಕೆಯ ಮಾಜಿ ಸದಸ್ಯರು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

‘ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಪ್ರದೀಪ್‌ ಕುಮಾರ್, ಆಲನಹಳ್ಳಿ ಪುಟ್ಟಸ್ವಾಮಿ, ಬಸವರಾಜು, ಸುರೇಶ್‌ ಬಾಬು, ಷಡಕ್ಷರಿ, ಶಶಿಕುಮಾರ್‌, ಪ್ರವೀಣ್‌ ಒಳಗೊಂತೆ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿದ್ದ ಹಲವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಪಕ್ಷದ ವತಿಯಿಂದ ಅವರನ್ನು ಸ್ವಾಗತಿಸುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು