ಭಾನುವಾರ, ಅಕ್ಟೋಬರ್ 2, 2022
19 °C

‘ದೇಶದ ಸಮಸ್ಯೆಗಳಿಗೆ ಕವಿ ಉತ್ತರವಾಗಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ದೇಶವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಕವಿಗಳು ತಮ್ಮ ರಚನೆಗಳ ಮೂಲಕ ಉತ್ತರವಾಗಬೇಕು’ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಕೀರ್ತಿ ಯುವತಿ ಮಹಿಳಾ ಮಂಡಳಿ ಮತ್ತು ಜಿಲ್ಲಾ ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಕುವೆಂಪು ನಗರದ 2ನೇ ಹಂತದಲ್ಲಿರುವ ನಿಮಿಷಾಂಬ ನಗರದ ಹಿರಿಯ ನಾಗರಿಕರ ಹಗಲು ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಕವಿ ಸುರೇಶ್ ಮಲ್ಲಾಡದ ಹಾವೇರಿ ಅವರ ‘ಮಾತು ಮರೆತ ಮೌನ ಹಕ್ಕಿ’ ಕವನಸಂಕಲನ ಬಿಡುಗಡೆ, ಶ್ರಾವಣ ಕವಿಗೋಷ್ಠಿ ಹಾಗೂ ‘ಶ್ರಾವಣ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಖಡ್ಗವಾಗಲಿ ಕಾವ್ಯ ಎಂಬ ಮಾತಿಗೆ ಅನ್ವರ್ಥವಾಗಿ ಕವಿಗಳು, ಸಾಹಿತಿಗಳು ತಮ್ಮ ಬರವಣಿಗೆ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು’ ಎಂದರು.

ಕೃತಿ ಬಿಡುಗಡೆ ಮಾಡಿದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ಶ್ರಾವಣ ಎಂದರೆ ಸಂತಸ ಸಂಭ್ರಮದ ಸಂಕೇತ. ಶ್ರಾವಣ ಮಾಸದಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬಗಳು ಬರುತ್ತವೆ. ಇದಕ್ಕೆ ಪೂರಕವಾಗಿ ಪ್ರಕೃತಿ ಮಾತೆ ಹಸಿರು ಸಿರಿಯಿಂದ ಕಂಗೊಳಿಸುತ್ತಾಳೆ’ ಎಂದು ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ ಕೃತಿ ಪರಿಚಯಿಸಿದರು.

ವಿವಿಧ ಕ್ಷೇತ್ರದ ಸಾಧಕರಾದ ಡಾ.ಕಿರಣ್ ಸಿಡ್ಲೆಹಳ್ಳಿ, ಯಶೋಧಾ ರಾಮಕೃಷ್ಣ, ರತ್ನಾ ಚಂದ್ರಶೇಖರ್, ಸುರೇಶ್ ಮಲ್ಲಾಡದ, ಗುರು ಗೌತಮ್ ಹಳೆಪುರ, ಕೆ.ಲಕ್ಷ್ಮೀ, ಮಮತಾ ಪ್ರವೀಣ್, ಬಿಲ್ವ ಗುರುಮಲ್ಲಪ್ಪ, ಎಚ್.ಬಿ.ವಿಷ್ಣು ಪ್ರಸಾದ್, ಸುಧಾ ಆರಾಧ್ಯ, ಬಸವರಾಜು, ಕೆ.ಪಿ.ಪ್ರೇಮಕುಮಾರಿ ಅವರಿಗೆ ‘ಶ್ರಾವಣ ಸಿರಿ ಪ್ರಶಸ್ತಿ’ ನೀಡಲಾಯಿತು.

ಅನಂತ ದೀಕ್ಷಿತ್, ಕವಿತಾ ಕಿರಣ್, ಗೋಪಿನಾಥ್, ನವೀನ್ ಕುಮಾರ್, ನಾಗಮ್ಮ, ರಾಮಗೋಪಾಲ್ ಸೇರಿದಂತೆ 20 ಮಂದಿ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕವಿ ಮುತ್ತುಸ್ವಾಮಿ, ‘ಗ್ರೀನ್’ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಪ್ರಭುಸ್ವಾಮಿ, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ್ ಮಹದೇವು ಉಪಸ್ಥಿತರಿದ್ದರು.

ಕೀರ್ತಿ ಯುವತಿ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳಾ ರಮೇಶ್ ಸ್ವಾಗತಿಸಿದರು. ಶಿಕ್ಷಕಿ ಕೆ.ಟಿ.ಶ್ರೀಮತಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು