ಬುಧವಾರ, ಮೇ 25, 2022
22 °C
ಕುಸಿಯುವ ಭೀತಿಯಲ್ಲಿ ಹಳೆಯ ಕಟ್ಟಡಗಳು; ದಶಕಗಳಿಂದಲೂ ಆಗದ ದರ ಪರಿಷ್ಕರಣೆ

ಮೈಸೂರು: ಕಾಯಕಲ್ಪದ ನಿರೀಕ್ಷೆಯಲ್ಲಿ ವಾಣಿಜ್ಯ ಮಳಿಗೆಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳಲ್ಲಿ ವಾಣಿಜ್ಯ ಮಳಿಗೆಗಳ ಬಾಡಿಗೆ ಸಂಗ್ರಹ ಪ್ರಮುಖವಾದುದು. ಐದು ದಶಕಗಳಿಗೂ ಹಳೆಯದಾದ ಮಳಿಗೆಗಳು ಕಾಯಕಲ್ಪದ ನಿರೀಕ್ಷೆಯಲ್ಲಿದ್ದರೆ; ಬಾಡಿಗೆ ಪರಿಷ್ಕರಣೆ ಹಾಗೂ ವಸೂಲಾತಿಯೇ ದೊಡ್ಡ ಸವಾಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,941 ವಾಣಿಜ್ಯ ಮಳಿಗೆಗಳಿದ್ದು, ಬಹುತೇಕ ನಗರದ ಹೃದಯ ಭಾಗದಲ್ಲೇ ಇವೆ. ಹಲವು ಮಳಿಗೆಗಳ ಬಾಡಿಗೆ ದರ ಮಾಸಿಕ ₹ 5 ಸಾವಿರ ದಾಟದು. ವ್ಯಾಪಾರ–ವಹಿವಾಟು ಹೆಚ್ಚಿದ್ದರೂ ಬಾಡಿಗೆ ದರ ಪರಿಷ್ಕರಣೆಯಾಗಿಲ್ಲ. ಹುಣಸೂರು ನಗರಸಭೆಯ ಮಳಿಗೆಗಳ ವಾರ್ಷಿಕ ಬಾಡಿಗೆ ₹ 1.34 ಕೋಟಿಯಿದ್ದರೆ, ಪಾಲಿಕೆಯ ವಾರ್ಷಿಕ ಸಂಗ್ರಹ ₹ 1.65 ಕೋಟಿ!

ಅಗ್ರಹಾರದಲ್ಲಿರುವ ವಾಣಿವಿಲಾಸ ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದೆ. ಮಳಿಗೆಗಳ ಸೂರು ಕಳಚುತ್ತಿದೆ. ಪ್ರವೇಶದ್ವಾರ ಬೀಳುವ ಹಂತದಲ್ಲಿದ್ದ ರಿಂದ ಎರಡು ಕಡೆ ಮುಚ್ಚಲಾಗಿದೆ. ಬಾಡಿಗೆದಾರರು ಜೀವ ಭಯದಲ್ಲಿಯೇ ವ್ಯಾಪಾರ ನಡೆಸಬೇಕಿದೆ. ದೇವರಾಜ ಮಾರುಕಟ್ಟೆಯ ಉತ್ತರ ದ್ವಾರ 2016 ರಲ್ಲಿಯೇ ಬಿದ್ದಿದ್ದರೂ ಅದರ ಮರು ನಿರ್ಮಾಣವಾಗಿಲ್ಲ. ಲ್ಯಾನ್ಸ್‌ಡೌನ್‌ ಕಟ್ಟಡ ಮರು ನಿರ್ಮಾಣ ದಶಕದಿಂದಲೂ ನನೆಗುದಿಗೆ ಬಿದ್ದಿದೆ. ಆದಾಯ ಮೂಲ ಒಂದೊಂದಾಗಿ ಕಳಚುತ್ತಿದ್ದಂತೆಯೇ ಕುಸಿಯುವ ಭೀತಿಯಲ್ಲಿ ಮಳಿಗೆಗಳು ಒಂದೊಂದಾಗಿ ಮುಚ್ಚುತ್ತಿವೆ.

ಬಾಡಿಗೆದಾರರೇ ಹೆಂಚು, ಟಾರ್ಪಲ್‌ ಬಳಸಿಕೊಂಡು ಮಳೆ–ಬಿಸಿಲಿನಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ಮಂಡಿ ಮಾರುಕಟ್ಟೆಯ ಸ್ಥಿತಿಯೂ ಭಿನ್ನವಾಗಿಲ್ಲ. ವಿಶ್ವೇಶ್ವರಯ್ಯ ಭವನ, ಧನ್ವಂತರಿ ರಸ್ತೆ, ಕಾಳಿದಾಸ ರಸ್ತೆಯ ಮಳಿಗೆಗಳು ಹೆಚ್ಚು ಆದಾಯವನ್ನು ಪಾಲಿಕೆಗೆ ತಂದುಕೊಡುತ್ತಿವೆ. ಆದರೆ, ಮಳಿಗೆ ಬಾಡಿಗೆ ಪಡೆದವರು ಉಪ ಬಾಡಿಗೆ ನೀಡುತ್ತಿದ್ದಾರೆ. ಇದರಿಂದ ಆದಾಯ ಸೋರಿಕೆಯಾಗುತ್ತಿದೆ. ಹೊಸ ಹರಾಜು ಪ್ರಕ್ರಿಯೆ ಹಲವು ವರ್ಷಗಳಿಂದ ನಡೆದಿಲ್ಲ. ಇದಕ್ಕೆ ಕಟ್ಟಡಗಳು ಹಳೆಯದಾಗಿರುವುದು, ಸೌಲಭ್ಯ ಇಲ್ಲದಿರುವುದು ಕಾರಣವಾಗಿದೆ.

‘ಮಕ್ಕಾಜಿ ಚೌಕದಲ್ಲಿ ಹೊಸದಾಗಿ ನಿರ್ಮಿಸಿದ ಮಳಿಗೆಗಳನ್ನು 2015–16ರಲ್ಲಿ ಬಾಡಿಗೆ ನೀಡಲಾಗಿದೆ. ಹಲವು ಮಳಿಗೆಗಳು ಕಮಿಷನರ್‌ ಕೋರ್ಟ್‌ನಲ್ಲಿವೆ. ಸರ್ಕಾರದ ಕಾಯ್ದೆ ಪ್ರಕಾರ ಬಾಡಿಗೆದಾರರನ್ನು ಒಮ್ಮಿಂದೊಮ್ಮೆಗೆ ಖಾಲಿ ಮಾಡಿಸಲು ಆಗದು. ಪಾಲಿಕೆಯ ಮಳಿಗೆಗಳ ಬಾಡಿಗೆ ದರ ₹ 115ರಿಂದ ₹ 15 ಸಾವಿರದವರೆಗೂ ಇದೆ. ಖಾಲಿ ಇರುವ ಮಳಿಗೆಗಳ ಹರಾಜು ನಡೆಸಿ ಆದಾಯ ಹೆಚ್ಚಿಸಲು ಪಾಲಿಕೆ ಕ್ರಮ ಕೈಗೊಂಡಿದೆ’ ಎಂದು ಪಾಲಿಕೆ ಕಂದಾಯ ಅಧಿಕಾರಿ ಅರಸು ಕುಮಾರಿ ತಿಳಿಸಿದರು.

ದಾಖಲೆ ಪ್ರಮಾಣಕ್ಕೆ ಮಳಿಗೆ ಹರಾಜು: ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ 116 ಮಳಿಗೆಗಳು ಆರ್ಥಿಕ ಸದೃಢತೆಗೆ ಕಾರಣವಾಗಿವೆ. ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣಕ್ಕೆ ಹರಾಜಾಗಿವೆ. ಫೆ.22ರಂದು ನಡೆದ ಹರಾಜಿನಲ್ಲಿ ₹ 1.34 ಕೋಟಿ ವಾರ್ಷಿಕ ಬಾಡಿಗೆ ಸಂಗ್ರಹವಾಯಿತು. ಈ ಹಿಂದೆ ವಾರ್ಷಿಕ ಬಾಡಿಗೆ ಸಂಗ್ರಹವಿದ್ದದ್ದು ₹ 6.47 ಲಕ್ಷ!

‘ಜೆಎಲ್‌ಬಿ ರಸ್ತೆಯಲ್ಲಿ 12 ವಾಣಿಜ್ಯ ಮಳಿಗೆ ಶಿಥಿಲಗೊಂಡಿದ್ದು, ದುರಸ್ತಿ ಆಗಬೇಕಿದೆ. ಮಳಿಗೆಗಳ ವಾರ್ಷಿಕ ನಿರ್ವಹಣೆಗೆ ಹಣವನ್ನು ಕಾಯ್ದಿರಿಸಲಾಗಿದೆ’ ಎಂದು ಪೌರಾಯುಕ್ತ ರವಿಕುಮಾರ್‌ ಹೇಳಿದರು. 

ಮೂಲಸೌಕರ್ಯವಿಲ್ಲ: ತಿ.ನರಸೀಪುರ ಪುರಸಭಾ ವ್ಯಾಪ್ತಿಯಲ್ಲಿ 140 ವಾಣಿಜ್ಯ ಮಳಿಗೆಗಳಿದ್ದು, ಇವುಗಳ ಬಾಡಿಗೆ ಸಂಗ್ರಹ ₹ 33 ಲಕ್ಷ. ಆದರೆ, ಬಾಡಿಗೆದಾರರು ನಿಯಮಿತವಾಗಿ ಪಾವತಿಸುತ್ತಿಲ್ಲ. ಪುರಸಭೆ ನೋಟಿಸ್‌ ನೀಡಿದರೂ ಲಕ್ಷಾಂತರ ಬಾಡಿಗೆ ಬಾಕಿ ಉಳಿಸಿಕೊಂಡಿರುವ ದೂರುಗಳಿವೆ.

‘ಮಳಿಗೆಗಳ ಬಾಡಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪಾಲಿಸಲಾಗುತ್ತಿದೆ. ಸಮರ್ಪಕವಾಗಿ ಬಾಡಿಗೆ ವಸೂಲು ಮಾಡಲಾಗುತ್ತಿದೆ. ಉಪ ಬಾಡಿಗೆ ನೀಡಿರುವುದು ಗಮನಕ್ಕೆ ತಂದರೆ, ಬಾಡಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜು ಹೇಳಿದರು. 

ಪಿರಿಯಾಪಟ್ಟಣ ಪುರಸಭೆಯಲ್ಲಿ 44 ಮಳಿಗೆಗಳಿದ್ದು, ₹ 23.64 ಲಕ್ಷ ಬಾಡಿಗೆ ಸಂಗ್ರಹವಾಗುತ್ತಿದೆ. ಹಲವು ವರ್ಷಗಳಿಂದ ಬಾಡಿಗೆ ಪಾವತಿ ಆಗುತ್ತಿಲ್ಲ. ದರ ಪರಿಷ್ಕರಣೆ, ಮರು ಹರಾಜು ಆಗಿಲ್ಲ. 20 ವರ್ಷದ ಹಿಂದೆ ಬಾಡಿಗೆ ಪಡೆದವರು ಅದೇ ದರದಲ್ಲಿ ಪಾವತಿ ಮಾಡುತ್ತಿದ್ದಾರೆ. 

ಎಲ್ಲಾ ಬಾಡಿಗೆದಾರರನ್ನು ಖಾಲಿ ಮಾಡಿಸಿ ಮರು ಹರಾಜು ಮಾಡಬೇಕು. ಪರಿಶಿಷ್ಟ ಸಮುದಾಯಕ್ಕೆ ಇಂತಿಷ್ಟು ಮಳಿಗೆ ನಿಗದಿಪಡಿಸಬೇಕು ಎಂದು 2018ರಲ್ಲೇ ಜಿಲ್ಲಾಧಿಕಾರಿ ಆದೇಶಿಸಿದ್ದರೂ ಕಾರ್ಯಗತವಾಗಿಲ್ಲ.

ಉಪ ಬಾಡಿಗೆ ಹಾವಳಿ: ಕೆ.ಆರ್‌.ನಗರ ಪುರಸಭೆಯಲ್ಲಿ 172 ವಾಣಿಜ್ಯ ಮಳಿಗೆಗಳು ಇದ್ದು, 12 ವರ್ಷದ ಅವಧಿವರೆಗೂ ಬಾಡಿಗೆ ನೀಡಲಾಗಿದೆ. ವಾರ್ಷಿಕ ಸಂಗ್ರಹ ₹ 1.18 ಕೋಟಿ. ₹ 75 ಲಕ್ಷ ಬಾಡಿಗೆ ಇನ್ನೂ ವಸೂಲಾಗಬೇಕಿದೆ. ಪ್ರತಿ ಮೂರು ವರ್ಷಕ್ಕೆ ಶೇ 5ರವರೆಗೂ ದರ ಪರಿಷ್ಕರಣೆ ಮಾಡಲಾಗುತ್ತಿದೆ. ₹ 1.10 ಕೋಟಿ ಬಾಡಿಗೆ ಉಳಿಸಿಕೊಂಡವರ ಆಸ್ತಿ ಮುಟ್ಟುಗೋಲಿಗಾಗಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.

‘ಹರಾಜಿನಲ್ಲಿ ಮಳಿಗೆ ಪಡೆಯುವವರು ಬಹುತೇಕರು ಆರ್ಥಿಕವಾಗಿ ಸದೃಢವಾಗಿರುವವರು. ಇದರಿಂದ ಅಗತ್ಯವಿದ್ದವರಿಗೆ ಮಳಿಗೆ ಸಿಗುತ್ತಿಲ್ಲ’ ಎಂದು ಪುರಸಭೆ ಸದಸ್ಯ ಕೆ.ಎಲ್.ಜಗದೀಶ್ ಹೇಳಿದರು.

ಎಚ್.ಡಿ.ಕೋಟೆ ಪುರಸಭೆಯಲ್ಲಿ 5 ವಾಣಿಜ್ಯ ಮಳಿಗೆಗಳಿದ್ದು, ₹ 5.81 ಲಕ್ಷ ಬಾಡಿಗೆ ಸಂಗ್ರಹವಾಗುತ್ತಿದೆ. ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿಯೇ ನಂಜನಗೂಡು ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ವಾಣಿಜ್ಯ ಮಳಿಗೆಗಳಿವೆ. 14 ವಾಣಿಜ್ಯ ಮಳಿಗೆಗಳಲ್ಲಿ ಹರಾಜು ಅವಧಿ ಮುಗಿದ 6 ಮಳಿಗೆ ಖಾಲಿ ಮಾಡಿಸಲಾಗಿದ್ದು, ಬಹಿರಂಗ ಹರಾಜು ಮುಂದಿನ ತಿಂಗಳು ನಡೆಯಲಿದೆ. 

ಯಾರು ಏನಂತಾರೆ?

ಆರು ವರ್ಷವಾದರೂ ಮಳಿಗೆಯಿಲ್ಲ

ಮಾರುಕಟ್ಟೆಯ ಉತ್ತರದ್ವಾರದ ಮಳಿಗೆಗಳನ್ನು ಕೆಡವಲಾಯ್ತು. ಅಂದಿನಿಂದಲೂ ಮಳಿಗೆ ಮತ್ತೆ ಸಿಕ್ಕಿಲ್ಲ. ದಿನದ ಸುಂಕ ನೀಡಿ ವಹಿವಾಟು ನಡೆಸಿದ್ದೇವೆ. ಮಳಿಗೆ ಮರು ನಿರ್ಮಾಣ ಮಾಡಲು ಅಧಿಕಾರಸ್ಥರು ಮುಂದಾಗಿಲ್ಲ. ಆರು ವರ್ಷವಾಯ್ತು.

-ಆನಂದ, ತರಕಾರಿ ವ್ಯಾಪಾರಿ, ದೇವರಾಜ ಮಾರುಕಟ್ಟೆ

ದುರಸ್ತಿ ಹಣವೂ ಪೋಲು

ಮಾರುಕಟ್ಟೆಯ ಒಂದೊಂದೇ ಮಳಿಗೆಗಳು ಕುಸಿಯುತ್ತಿವೆ. ದುರಸ್ತಿಯೂ ಆಗುತ್ತಿಲ್ಲ. ಶೌಚಾಲಯವಿದ್ದರೂ, ಹೊಸದಾಗಿ ಮತ್ತೊಂದು ಶೌಚಗೃಹ ನಿರ್ಮಿಸಲಾಗಿದೆ. ದುರಸ್ತಿ ಹಣವನ್ನು ಪೋಲು ಮಾಡಲಾಗುತ್ತಿದೆ

-ಲೋಕೇಶ್‌ ಗೌಡ, ತೆಂಗಿನಕಾಯಿ ವ್ಯಾಪಾರಿ, ವಾಣಿವಿಲಾಸ ಮಾರುಕಟ್ಟೆ

ಕಡಿಮೆ ಬಾಡಿಗೆ

ವ್ಯಾಪಾರ ಹೆಚ್ಚು ಆಗುವುದಿಲ್ಲ. ಬಾಡಿಗೆ ಕಡಿಮೆಯಿದೆ. ದಿನಕ್ಕೆ ₹ 100 ಇದೆ. ಹೀಗಾಗಿ ಜೀವನಕ್ಕೆ ತೊಂದರೆಯಿಲ್ಲ. ವಿದ್ಯುತ್ ಬಿಲ್‌ ಕಟ್ಟಬೇಕು. ಹೆಂಚುಗಳು ಹಳೆಯದಾಗಿವೆ. ಇನ್ನೊಂದೈದು ವರ್ಷ ಈ ಮಳಿಗೆಗಳಿಗೆ ತೊಂದರೆಯಿಲ್ಲ

-ಗೌರಮ್ಮ, ವ್ಯಾಪಾರಿ, ಮಂಡಿ ಮಾರುಕಟ್ಟೆ

ಸ್ವಂತ ಹಣದಲ್ಲಿ ದುರಸ್ತಿ

ನಗರಸಭೆಯಿಂದ ಹರಾಜು ಪಡೆದು ನಿಯಮಿತವಾಗಿ ಬಾಡಿಗೆ ಕಟ್ಟುತ್ತಿದ್ದೇವೆ. ಮಳಿಗೆ ಶಿಥಿಲವಾಗಿದ್ದರೂ ದುರಸ್ತಿಗೊಳಿಸಿಲ್ಲ. ಸ್ವಂತ ಹಣದಲ್ಲಿ ದುರಸ್ತಿ ಮಾಡಿಕೊಂಡು ವಹಿವಾಟು ನಡೆಸಿದ್ದೇವೆ

-ರಾಜು, ವ್ಯಾಪಾರಿ, ಹುಣಸೂರು

ಮೂಲಸೌಕರ್ಯ ಒದಗಿಸಿ

ಮಳಿಗೆಗಳ ಬಾಡಿಗೆ ಹೆಚ್ಚಿಸಿದಂತೆ ಮೂಲಸೌಕರ್ಯವನ್ನೂ ನೀಡಬೇಕು. ಮಳೆಗೆ ಸಾಕಷ್ಟು ಮಳಿಗೆಗಳು ಸೋರುತ್ತಿವೆ. ದುರಸ್ತಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಮಳೆಗಾಲ ಬಂತೆಂದರೆ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ.

-ರಾಮಚಂದ್ರ, ವ್ಯಾಪಾರಿ, ಕೆ.ಆರ್‌.ನಗರ

ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌

ಬಾಡಿಗೆ ಬಾಕಿ ಉಳಿಸಿಕೊಂಡಿರುವ ಬಾಡಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಬಾಡಿಗೆ ಬಾಕಿ ಉಳಿಸಿಕೊಂಡಿರುವ ಮಳಿಗೆಗಳಿಗೆ ಶೀಘ್ರದಲ್ಲಿ ಸೆಸ್ಕ್‌ಗೆ ಪತ್ರ ಬರೆದು ವಿದ್ಯುತ್ ಕಡಿತಗೊಳಿಸಲಾಗುವುದು. ನಂತರ ಮಳಿಗೆ ಖಾಲಿ ಮಾಡಿಸಲಾಗುವುದು

-ಎ.ಟಿ.ಪ್ರಸನ್ನ, ಮುಖ್ಯಾಧಿಕಾರಿ, ಪಿರಿಯಾಪಟ್ಟಣ ಪುರಸಭೆ

ಶೀಘ್ರ ಹರಾಜು ಪ್ರಕ್ರಿಯೆ

ಅವಧಿ ಮುಗಿದ 6 ಮಳಿಗೆಗಳನ್ನು ಖಾಲಿ ಮಾಡಿಸ
ಲಾಗಿದೆ. ಜಿಲ್ಲಾಧಿಕಾರಿಗೆ ಈ ಬಗ್ಗೆ ವರದಿ ನೀಡಲಾಗಿದೆ. ಹರಾಜು ಪ್ರಕ್ರಿಯೆಗೆ ಅನುಮತಿ ದೊರೆಯುತ್ತಿದ್ದಂತೆಯೇ ಮುಂದಿನ ತಿಂಗಳಲ್ಲಿ 12 ವರ್ಷದ ಅವಧಿಗೆ ಶೇ 10
ಬಾಡಿಗೆ ಹೆಚ್ಚಳದೊಂದಿಗೆ ಹರಾಜು ಪ್ರಕ್ರಿಯೆ ನಡೆಸಲಾಗುವುದು

-ರಾಜಣ್ಣ, ನಗರಸಭೆ ಆಯುಕ್ತ, ನಂಜನಗೂಡು

****

ನಿರ್ವಹಣೆ: ಮೋಹನ್‌ ಕುಮಾರ ಸಿ.

ಪೂರಕ ಮಾಹಿತಿ: ಎಚ್‌.ಎಸ್‌.ಸಚ್ಚಿತ್‌, ಎಂ.ಮಹದೇವ್‌, ಬಿ.ಆರ್.ಗಣೇಶ್‌, ಪಂಡಿತ ನಾಟೀಕರ, ಸತೀಶ್ ಬಿ.ಆರಾಧ್ಯ, ಎಂ.ಪ್ರಕಾಶ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು