ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ರಕ್ಷಿಸುವವರನ್ನು ಬೆಂಬಲಿಸಿ: ಮೈಸೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಕರೆ

‘ಸಿದ್ದರಾಮಯ್ಯ ಆಡಳಿತ: ನೀತಿ-ನಿರ್ಧಾರ’ ಕೃತಿ ಬಿಡುಗಡೆ
Last Updated 23 ಜುಲೈ 2022, 11:33 IST
ಅಕ್ಷರ ಗಾತ್ರ

ಮೈಸೂರು: ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಿಸುವವರನ್ನು ಬೆಂಬಲಿಸಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ‌ಖರ್ಗೆ ಹೇಳಿದರು.

ಬೆಂಗಳೂರಿನ ಜನಮನ ಪ್ರತಿಷ್ಠಾನದಿಂದ ಇಲ್ಲಿನ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಸಿದ್ದರಾಮಯ್ಯ ಆಡಳಿತ: ನೀತಿ-ನಿರ್ಧಾರ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸಂವಿಧಾನಕ್ಕೆ ವಿರುದ್ಧ ಇರುವವರನ್ನು ಜನರು ಬೆಂಬಲಿಸಬಾರದು. ತತ್ವ-ಸಿದ್ಧಾಂತದ ಮೇಲೆ ರಾಜಕಾರಣ ಮಾಡುವ ಸಿದ್ದರಾಮಯ್ಯ ಅವರಂತಹ ನಾಯಕರನ್ನು ಬೆಂಬಲಿಸಬೇಕು’ ಎಂದರು.

‘ಜಾರಿ ನಿರ್ದೇಶನಾಲಯದವರು (ಇಡಿ) ನಮ್ಮ ನಾಯಕಿ ಸೋನಿಯಾ ಗಾಂಧಿ ಅವರಿಗೆ ಕಿರುಕುಳ‌ ಕೊಡುತ್ತಿದ್ದಾರೆ. ತೊಂದರೆ ಕೊಡುತ್ತಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಅವರ ಜೊತೆ ಇರಬೇಕೆಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಹೀಗಿರುವಾಗ, ಸಿದ್ದರಾಮಯ್ಯ ಅವರನ್ನು ಮೆಚ್ಚಿಸಬೇಕೆಂದು ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಅವರು ಉತ್ತಮ ಆಡಳಿತ ನೀಡಿದ್ದಕ್ಕಾಗಿ ಬಂದಿದ್ದೇನೆ. ಅವರ ಆಡಳಿತವನ್ನು ನೆನಪಿಸಿಕೊಳ್ಳಬೇಕು. ಅವರು ರೂಪಿಸಿದ ಯೋಜನೆಗಳೇ ಹಾಗಿದ್ದವು’ ಎಂದರು.

‘ಸಿದ್ದರಾಮಯ್ಯ ರಾಜ್ಯದಲ್ಲಿ ರೂಪಿಸಿದ ಅನ್ನಭಾಗ್ಯ ಯೋಜನೆಗೆ ನಮ್ಮ ಕೇಂದ್ರ ಸರ್ಕಾರದ ಕೊಡುಗೆಯೂ ಇದೆ. ಜನಪರ ಕಾರ್ಯಕ್ರಮಗಳನ್ನು ಸಮಾಜದ ಏಳಿಗೆಯ ಬದ್ಧತೆ ಇರುವವರಷ್ಟೆ ಮಾಡಲು ಸಾಧ್ಯ. ಅದನ್ನು ಸಿದ್ದರಾಮಯ್ಯ ಮಾಡಿದರು. ಬೇರೆಯವರಿಗೆ ಎಷ್ಟೇ ಅಧಿಕಾರ ಕೊಟ್ಟರೂ ಸುಮ್ಮನೆ ನಡೆದುಕೊಂಡು ಹೋಗುತ್ತದೆ. ಆದರೆ ಸಿದ್ದರಾಮಯ್ಯ ಅಭಿವೃದ್ಧಿ ಪರ ಗಮನ ಕೊಟ್ಟರು; ಅದು ಒಳ್ಳೆ ಆಡಳಿತ. ಪಕ್ಷ, ಶಾಸಕರು ಹಾಗೂ ಜನ ಹಿಂದೆ ನಿಂತಿದ್ದರಿಂದ ಅವರಿಗೆ ಜನಪರ ಕಾರ್ಯಕ್ರಮಗಳನ್ನು ಮಾಡುವ ಧೈರ್ಯ ಬಂತು’ ಎಂದು ವಿಶ್ಲೇಷಿಸಿದರು.

‘ದಲಿತರಿಗೆ ಅನೇಕ ಯೋಜನೆ ರೂಪಿಸಿದರು. ಈಗ ಇರುವ ಸರ್ಕಾರವಂತೂ ಇಂತಹ ಕೆಲಸಗಳನ್ನು ಮಾಡುವುದಿಲ್ಲ. ಎಸ್‌ಸಿಪಿ ಅನುದಾನ ಒದಗಿಸಿದರು. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತಿದೆ. ಅಧಿಕಾರ ಇದ್ದಾಗ ಒಳ್ಳೆಯ ಕೆಲಸ ಮಾಡಬೇಕು. ಅದನ್ನು ಸಿದ್ದರಾಮಯ್ಯ ನಿರ್ವಹಿಸಿದ್ದಾರೆ’ ಎಂದರು.

ಮನಸ್ಸಿದ್ದರೆ ಜನರಿಗಾಗಿ ಏನು ಬೇಕಾದರೂ ಮಾಡಬಹುದು. ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಪಕ್ಷ ಬೆಂಬಲ ನೀಡಿದೆ. ಸಂವಿಧಾನದ ಪ್ರಕಾರ ನಡೆದರು. ಪ್ರಜಾಪ್ರಭುತ್ವ ‌ವಿರೋಧಿ ಅಥವಾ ಸಂವಿಧಾನವಿರುದ್ಧವಾಗಿ ನಡೆದುಕೊಳ್ಳಲಿಲ್ಲ. ಹೀಗಾಗಿ ಅವರನ್ನು ಮೆಚ್ಚುತ್ತೇವೆ ಎಂದು ಖರ್ಗೆ ಹೇಳಿದರು.

ಪ್ರಜಾಪ್ರಭುತ್ವ ಉಳಿದರೆ ಯಾರು ಬೇಕಾದರೂ ಪ್ರಧಾನಿ, ಮುಖ್ಯಮಂತ್ರಿ, ರಾಷ್ಟ್ರಪತಿ ಆಗಬಹುದು. ಇಲ್ಲದಿದ್ದರೆ ಯಾರೂ ಏನೂ ಆಗಲಾಗುತ್ತಿರಲಿಲ್ಲ. ನಾವು ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಿದ್ದಕ್ಕಾಗಿ ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ ಎಂದು ಹೇಳಿದರು.

ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಾತ್ಯತೀತ, ಸಮಾಜವಾದ ಅಗತ್ಯವಿದೆ. ಕೆಲವೇ ಕೆಲವರ ಕೈಯಲ್ಲಿ ಅಂದರೆ 140 ಮಂದಿ ಬಳಿ ಶೇ 70ರಷ್ಟು ಸಂಪತ್ತಿದೆ. ಉಳಿದವರು ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸಿದ ನೆಹರೂ ತತ್ವ ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕೋರಿದರು.

ನಾವು ರಾಜಕಾರಣ ಮಾಡುತ್ತಿದ್ದೇವೆಯೇ ಹೊರತು ಧರ್ಮ ಪ್ರಚಾರ ಮಾಡುತ್ತಿಲ್ಲ. ದೇಶದ ಎಲ್ಲ ಜನರ ಕಲ್ಯಾಣ ಆಗುವ ತತ್ವದ ಬಗ್ಗೆ ನಮ್ಮ ಗಮನವಿರಬೇಕು; ಬೆಂಬಲ ಕೊಡಬೇಕು ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು, ಮಹಾರಾಜರ ಓಡಿಸಬೇಕು ಎಂದು ನಾವು ಹೇಳುತ್ತಿದ್ದೇವೆ. ಆದರೆ ಬೀದಿಗಳಲ್ಲಿ ರಾಜರ ಪೋಟೊ ಇಟ್ಟುಕೊಂಡು ಪೂಜಿಸುವುದು ಹೋಗಿಲ್ಲ. ಜಮೀನ್ದಾರ್, ಜಹಗೀರ್‌ದಾರ್ ಪಕ್ಕ ಕೂರುತ್ತಿದ್ದೀರಿ ಎಂದು ‌ವಿಷಾದ ವ್ಯಕ್ತಪಡಿಸಿದರು.

‘ಮೈಸೂರಿನವರು ಬುದ್ಧಿವಂತರು. ಸುಶಿಕ್ಷಿತರು. ಆದರೂ ಬಿಜೆಪಿ ಗೆಲ್ಲಿಸುತ್ತೀರಿ.‌ ಸಿದ್ಧಾಂತ ಆಧರಿಸಿ ಹೋರಾಟ ಮಾಡುವವರಿಗೆ ಪೆಟ್ಟು ಕೊಡುತ್ತೀರಿ. ಅಲ್ಲಿ ನನ್ನನ್ನು ಸೋಲಿಸಿದಿರಿ, ಮೈಸೂರಿನಲ್ಲಿ ಸಿದ್ದರಾಮಯ್ಯ ಸೋಲಿಸಿದಿರಿ. ಮುಂದೆಯಾದರೂ ಸಿದ್ಧಾಂತದ ಮೇಲೆ ನಡೆಯುವವರಿಗೆ ಪ್ರೋತ್ಸಾಹ ‌ಕೊಡಬೇಕು’ ಎಂದು ಕೋರಿದರು.

ದೇಶದಲ್ಲಿ 26 ಲಕ್ಷ ಹುದ್ದೆಗಳು ಖಾಲಿ ಇವೆ. ಭರ್ತಿ ಮಾಡಿದರೆ ಎಷ್ಟು ಮಂದಿಗೆ ಲಾಭ ಆಗುತ್ತದೆ. ಯಾರೂ ಕೇಳುತ್ತಿಲ್ಲವೇಕೆ? ಸಿದ್ದರಾಮಯ್ಯ ಅಂಥವರು ಅಧಿಕಾರಕ್ಕೆ ಬಂದರೆ ಪ್ರಶ್ನೆಯನ್ನಾದರೂ ಮಾಡಬಹುದು. ಆರ್‌ಎದ್‌ಎಸ್‌ನವರನ್ನು ಕೇಳಲಾಗುತ್ತದೆಯೇ? ಅಲ್ಲಿಗೆ ನಿಮಗೆ ಪ್ರವೇಶವೇ ಇರುವುದಿಲ್ಲ. ಎಚ್ಚರ ವಹಿಸದಿದ್ದರೆ ಕೆಟ್ಟ ದಿನಗಳು ಬರಲಿವೆ ಎಂದು ಎಚ್ಚರಿಸಿದರು.

ತುಳಿದವರ ಬೆನ್ನು ಹತ್ತಿ ಹೋಗುವುದು ಸರಿಯಲ್ಲ. ಆರ್‌ಎೆಸ್‌ಎಸ್, ಬಿಜೆಪಿ ತತ್ವವನ್ನು ಬಲವಾಗಿ ವಿರೋಧಿಸಬೇಕು ಎಂದು ಅವರು ಕರೆ ನೀಡಿದರು.

ಸಿದ್ದರಾಮಯ್ಯ ಕಾಲದಲ್ಲಿ ಹಣವಿಲ್ಲ ಎಂಬ ಸ್ಥಿತಿ ಇರಲಿಲ್ಲ. ಈಗ ಲಕ್ಷ್ಮಿ ಓಡಿ, ಓಡಿ ಹೋಗುತ್ತಿದ್ದಾಳೆ ಎಂದು ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT