ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಅವರ ‘ಅಚ್ಛೇ ದಿನ್’ ಬಂದಿದೆ: ಎಂ.ಕೆ.ಸೋಮಶೇಖರ್‌ ವ್ಯಂಗ್ಯ

Last Updated 16 ಫೆಬ್ರುವರಿ 2021, 3:38 IST
ಅಕ್ಷರ ಗಾತ್ರ

ಮೈಸೂರು: ಬೆಲೆ ಏರಿಕೆ ವಿರುದ್ಧ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಆರ್‌ಟಿಒ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸ್ಕೂಟರ್‌ನ್ನು ತಲೆಕೆಳಗಾಗಿ ನಿಲ್ಲಿಸುವ ಮೂಲಕ ಇಂಧನ ದರ ಏರಿಕೆಯಿಂದ ವಾಹನ ಸಂಚಾರ ತಲೆಕೆಳಗಾಗಿದೆ. ಬಡವರ ಬದುಕೂ ಇದೇ ರೀತಿಯಾಗಿದೆ ಎಂದು ವ್ಯಂಗ್ಯಭರಿತ ಶೈಲಿಯಲ್ಲಿ ಪ್ರತಿಭಟಿಸಲಾಯಿತು.

ಈ ವೇಳೆ ಮಾತನಾಡಿದ ಎಂ.ಕೆ.ಸೋಮಶೇಖರ್, ‘ಯುಪಿಎ ಸರ್ಕಾರವಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್‌ಗೆ 110ರಿಂದ 120 ಡಾಲರ್‌ ದರ ಇತ್ತು. ಆಗ ಇಲ್ಲಿ ₹65ಕ್ಕೆ ಒಂದು ಲೀಟರ್ ಪೆಟ್ರೋಲ್‌ ನೀಡಲಾಗುತ್ತಿತ್ತು. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್‌ ಬೆಲೆ 45 ಡಾಲರ್‌ಗೆ ಇಳಿಕೆಯಾಗಿದೆ. ಆದರೂ, ಬಿಜೆಪಿ ಸರ್ಕಾರ ಒಂದು ಲೀಟರ್ ಪೆಟ್ರೋಲ್‌ ಬೆಲೆಯನ್ನು ₹92ಕ್ಕೆ ಹೆಚ್ಚಿಸಿದೆ’ ಎಂದು ಹರಿಹಾಯ್ದರು.

ಮತ್ತೆ ಸೋಮವಾರ ‍ಪೆಟ್ರೋಲ್ ದರ ಲೀಟರ್‌ಗೆ 25 ಪೈಸೆ, ಡೀಸೆಲ್ ದರ 35 ‍ಪೈಸೆಯಷ್ಟು ಏರಿಕೆ ಕಂಡಿದೆ. ನಿತ್ಯ ದರ ಏರಿಕೆಯಾಗುತ್ತಿದ್ದರೆ ಜನಸಾಮಾನ್ಯರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಅಡುಗೆ ಅನಿಲ ದರ ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ಸಿಲಿಂಡರ್‌ಗೆ ₹350 ಇದ್ದದ್ದು ಈಗ ₹774ಕ್ಕೆ ತಲುಪಿದೆ. ಪ್ರತಿ ತಿಂಗಳು ₹400ರಷ್ಟು ಹೆಚ್ಚು ಖರ್ಚು ಬರುತ್ತಿದೆ. ಇದರಿಂದ ಜನಸಾಮಾನ್ಯರ ಪರಿಸ್ಥಿತಿ ಅಯೋಮಯವಾಗಿದೆ ಎಂದರು.

ಒಟ್ಟಾರೆ ಬೆಲೆ ಏರಿಕೆಯಿಂದ ತಿಂಗಳಿಗೆ ₹2 ಸಾವಿರದಿಂದ ₹3 ಸಾವಿರ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಕೋವಿಡ್‌ನಂತಹ ಸ್ಥಿತಿಯಲ್ಲಿ ಈ ಪರಿ ಹೆಚ್ಚುವರಿ ಹೊರೆ ಹಾಕಿದ್ದು ಬಡ ಜನರ ವಿರೋಧಿ ಕ್ರಮ. ನರೇಂದ್ರ ಮೋದಿ ಅವರು ಹೇಳಿದ ಅಚ್ಛೇ ದಿನ್‌ ಇದೆನಾ ಎಂದು ಅವರು ವ್ಯಂಗ್ಯವಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಪಾಲಿಕೆ ಸದಸ್ಯರಾದ ಶೋಭಾ ಸುನಿಲ್, ಗೋಪಿ, ಮುಖಂಡರಾದ ವೀಣಾ, ಧರ್ಮೇಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT