ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಉಳಿವಿಗೆ ಸಂವಿಧಾನ ತಿದ್ದುಪಡಿ ಅಗತ್ಯ: ಟಿ.ಎಸ್‌.ನಾಗಾಭರಣ ಪ್ರತಿಪಾದನೆ

Last Updated 1 ನವೆಂಬರ್ 2021, 10:47 IST
ಅಕ್ಷರ ಗಾತ್ರ

ಮೈಸೂರು: ‘ಒಕ್ಕೂಟ ವ್ಯವಸ್ಥೆಯ ಎಲ್ಲ ಭಾಷೆಗಳ ಬೆಳವಣಿಗೆಗೆ ಸಂವಿಧಾನದ 343ರಿಂದ 351ರವರೆಗಿನ ವಿಧಿಗಳನ್ನು ತಿದ್ದುಪಡಿ ಮಾಡಲೇಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು.

ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರವು ಸೋಮವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶಾಸ್ತ್ರೀಯ ಕನ್ನಡ ಮಾನ್ಯತಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ತಿದ್ದುಪಡಿಯಿಂದ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳೂ ಸೇರಿದಂತೆ ದೇಶದ ಎಲ್ಲ ನುಡಿಗಳಿಗೂ ಸಾಂವಿಧಾನಿಕ ಮಾನ್ಯತೆ ಸಿಗುತ್ತದೆ. ಇದರಿಂದ ಅಳಿಯುತ್ತಿರುವ ಭಾಷೆಗಳನ್ನು ಉಳಿಸಿಕೊಳ್ಳಬಹುದು’ ಎಂದು ಪ್ರತಿಪಾದಿಸಿದರು.

‘ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ಸಿಗದಂತೆ ಭಾಷಾ ಸಂಕುಚಿತ ಮನಸ್ಥಿತಿಯವರು ಹುನ್ನಾರ ನಡೆಸಿದ್ದಾರೆ. ಸಿಬಿಎಸ್‌ಸಿ, ಐಸಿಎಸ್‌ಸಿಯಲ್ಲಿ ಕನ್ನಡ ಕಡ್ಡಾಯ ಏಕೆ ಎಂದು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಇವರಿಗೆಲ್ಲ ಪಾಠ ಕಲಿಸಬೇಕು’ ಎಂದು ಹೇಳಿದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮಾತೃಭಾಷೆಗೆ ಪ್ರಾಧಾನ್ಯತೆ ನೀಡಿದ್ದರೂ ಕಡ್ಡಾಯ ಎಂಬ ಅಂಶವೇ ಇಲ್ಲ. ಸಾಧ್ಯವಾದರೆ, ಬಹುದು ಎಂಬ ಪದಗಳಿವೆ. ಪ್ರಾದೇಶಿಕ ಭಾಷೆಗಳ ಬಗ್ಗೆ ಆಳುವವರಿಗೆ, ಅನ್ಯ ಭಾಷಿಕರಿಗೆ ತಾತ್ಸಾರವಿದೆ. ಅನ್ಯ ಭಾಷಿಕರು ಕನ್ನಡ ಕಲಿಯುವಂಥ ಅನಿವಾರ್ಯತೆಯನ್ನು ಕನ್ನಡಿಗರು ಸೃಷ್ಟಿಸಬೇಕು. ಅದು ಕಾನೂನಾತ್ಮಕವಾದರೂ ಸರಿ’ ಎಂದರು.

‘ಪಂಪನಿಂದ ಕುವೆಂಪು ವಿಶ್ವಮಾನವ ತತ್ವವನ್ನು ಹೇಳಿದ ಭಾಷೆಯಿದು. ಎಲ್ಲರನ್ನೂ ಪ್ರೀತಿಯಿಂದಲೇ ಕಂಡಿದ್ದೇವೆ. ಆದರೆ, ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ವ್ಯವಹರಿಸಿ ಎಂದರೆ ಸಿಬ್ಬಂದಿ ಪೊಲೀಸರನ್ನು ಕರೆಯುತ್ತಾರೆ. ಭಾಷೆಯನ್ನಷ್ಟೇ ಅಲ್ಲ ಭಾಷಿಕರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇಂಥ ನಿರ್ಲಕ್ಷ್ಯವನ್ನು ಕೊನೆಗಾಣಿಸಲು ಒಗ್ಗಟ್ಟಾಗಬೇಕು’ ಎಂದು ಸಲಹೆ ನೀಡಿದರು.

ವಿಮರ್ಶಕರಾದ ಪ್ರೊ.ಎಚ್‌.ಎಸ್‌.ರಾಘವೇಂದ್ರರಾವ್‌, ಬಸವರಾಜ ಕಲ್ಗುಡಿ, ಪ್ರೊ.ಟಿ.ಎಸ್‌.ಸತ್ಯನಾಥ್‌, ಪ್ರೊ.ಎನ್‌.ಎಂ.ತಳವಾರ್‌, ಪ್ರೊ.ಎನ್‌.ಎಸ್‌.ರಂಗರಾಜು ಮಾತನಾಡಿದರು.

ಸಂಸ್ಥೆಯ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್‌, ಉಪ ನಿರ್ದೇಶಕ ಪ್ರೊ.ಸಿ.ವಿ.ಶಿವರಾಮಕೃಷ್ಣ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮಶೆಟ್ಟಿ ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಕನ್ನಡ ಧ್ವಜಾರೋಹಣ ನಡೆಯಿತು. ಸಿದ್ಧಾರ್ಥ, ರವಿಕುಮಾರ್‌ ಅವರ ವೀರಭದ್ರ ಕುಣಿತ, ಸುಂದರೇಶ್‌ ಮತ್ತು ತಂಡವು ಪೂಜಾ ಕುಣಿತ, ಸಿದ್ಧರಾಜ್ ಮತ್ತು ತಂಡ ಡೊಳ್ಳು ಕುಣಿತ ಗಮನ ಸೆಳೆದವು.

‘ಶಾಸ್ತ್ರೀಯ ಕನ್ನಡ ಎಂದು ಕರೆಯದಿರಿ’: ‘ಶಾಸ್ತ್ರೀಯ ಕನ್ನಡ ಎನ್ನುವ ಬದಲು ಅಭಿಜಾತ ಕನ್ನಡ ಎಂದು ಕರೆಯಬೇಕು. ತಮಿಳರು ಚೆಮ್ಮೊಳಿ ಎನ್ನುವಂತೆ ಕನ್ನಡ ನಲ್ನುಡಿ, ಚೆನ್ನುಡಿ ಏಕೆ ಆಗಬಾರದು’ ಎಂದು ಪ್ರಶ್ನಿಸಿದ ನಾಗಾಭರಣ ಅವರು. ‌‘ಕೇಶಿರಾಜ, ನಾಗವರ್ಮನ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಡಬೇಕು’ ಎಂದು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸಲಹೆ ನೀಡಿದರು.

‘2008ರಲ್ಲಿಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದರೂ ಅಧ್ಯಯನ ಕೇಂದ್ರಕ್ಕೆ ಸ್ವಂತ ಭೂಮಿ ಸಿಕ್ಕಿಲ್ಲ. 4 ಎಕರೆ ಭೂಮಿ ನೀಡುವಂತೆ ಮೈಸೂರು ವಿಶ್ವವಿದ್ಯಾಲಯದ ಜೊತೆ ಮಾತುಕತೆ ನಡೆದಿದೆ. ಒಪ್ಪಂದಕ್ಕೆ ಸಹಿ ಬಾಕಿ ಉಳಿದಿದೆ’ ಎಂದರು.

‘ಹಲ್ಮಿಡಿಗಿಂತಲೂ ಪೂರ್ವ ಶಾಸನಗಳ ಅಧ್ಯಯನ, ಕ್ಷೇತ್ರಕಾರ್ಯ ನಡೆಯಬೇಕು. ಸಾಕ್ಷ್ಯಚಿತ್ರಗಳು ತಯಾರಾಗಬೇಕು. ಕನ್ನಡದ ಆನ್‌ಲೈನ್‌ ಕಲಿಕೆಯನ್ನು ಆರಂಭಿಸಬೇಕು. ಕನ್ನಡ ಪ್ರದರ್ಶಕ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT