ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ವಾರ್ಡ್‌ ತೆರೆಯಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ

ಕೊರೊನಾ ಸೋಂಕು ಶಂಕಿತರು ಜಿಲ್ಲೆಯಲ್ಲಿ ಇಲ್ಲ– ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್
Last Updated 12 ಮಾರ್ಚ್ 2020, 10:30 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಿಶೇಷ ವಾರ್ಡ್‌ನ್ನು ಸಿದ್ಧಪಡಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ‘ಕೊಲಂಬಿಯಾ, ಅಪೊಲೊ ಹಾಗೂ ಜೆಎಸ್ಎಸ್ ಆಸ್ಪತ್ರೆಗಳಿಗೆ ವಿಶೇಷ ವಾರ್ಡ್‌ ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಸದ್ಯ, ಜಿಲ್ಲೆಯಲ್ಲಿ ಕೊರೊನಾ ಸೋಂಕು ಶಂಕಿತರು ಯಾರೂ ಇಲ್ಲ. ಸಾರ್ವಜನಿಕರು ಊಹಾಪೋಹಾಗಳನ್ನು ನಂಬಬಾರದು’ ಎಂದು ಹೇಳಿದ್ದಾರೆ.

ಕೆ.ಆರ್.ಆಸ್ಪತ್ರೆಯಲ್ಲೂ ಕೊರೊನಾ ಸೋಂಕು ಶಂಕಿತರು ದಾಖಲಾಗಿಲ್ಲ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.

ಔಷಧ ಅಂಗಡಿಗಳ ಮೇಲೆ ದಾಳಿ

ಪಾಲಿಕೆ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಮಿತಿ ತಂಡವು ನಗರದ ಹಲವು ಔಷಧ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಸ್ಕ್‌ನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಕುರಿತು ಪರಿಶೀಲನೆ ನಡೆಸಿತು. ಮಾಸ್ಕ್‌ ಖರೀದಿ ಬೆಲೆಯನ್ನು ಫಲಕದಲ್ಲಿ ನಮೂದಿಸಬೇಕು. ಅವುಗಳ ಸಗಟು ಖರೀದಿ ಬೆಲೆಯ ರಸೀತಿಯನ್ನು ಅಂಗಡಿಯಲ್ಲಿ ಇಟ್ಟುಕೊಂಡಿರಬೇಕು ಎಂದು ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಅವರು ಸೂಚನೆ ನೀಡಿದರು. ಜತೆಗೆ, ಅಧಿಕ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ವಿಚಾರ ಸಂಕಿರಣ ರದ್ದು

ಯುವರಾಜ ಕಾಲೇಜಿನಲ್ಲಿ ಮಾರ್ಚ್ 16ರಂದು ನಡೆಯಬೇಕಿದ್ದ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ‘ಅಡಾಪ್ಟಿಂಗ್ ಟು ಎಜುಕೇಷನ್ 4.0’ವನ್ನು ರದ್ದುಪಡಿಸಲಾಗಿದೆ.

ದೇವರಿಗೆ ವಿಶೇಷ ಪೂಜೆ

ಇಲ್ಲಿನ ಬೋಗಾದಿ–ಗದ್ದಿಗೆ ರಸ್ತೆಯಲ್ಲಿನ ಕಣ್ಣಯ್ಯನಹುಂಡಿಗೇಟ್ ಸಮೀಪದ ಅರ್ಕಧಾಮ ದೇಗುಲದಲ್ಲಿ ಕೊರೊನಾ ವೈರಸ್‌ ವಿರುದ್ಧ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಯಶಸ್ವಿಯಾಗಲಿ ಹಾಗೂ ಕೋವಿಡ್–19 ರೋಗವು ನಿಯಂತ್ರಣಕ್ಕೆ ಬರಲಿ ಎಂದು ಕೋರಿ ವಿಶೇಷ ಪೂಜೆಯನ್ನು ಮಾರ್ಚ್ 12ರಂದು ಬೆಳಿಗ್ಗೆ 8 ಗಂಟೆಗೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT