ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ– ಕೆ.ಆರ್‌.ಕ್ಷೇತ್ರದ ಪಾರಮ್ಯ; ಆಕ್ರೋಶ

ಗದ್ದಲ, ವಾಗ್ವಾದಗಳಲ್ಲಿ ಮುಳುಗಿದ ಪಾಲಿಕೆ ಕೌನ್ಸಿಲ್‌ ಸಭೆ
Last Updated 4 ಆಗಸ್ಟ್ 2021, 3:20 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌ ಲಸಿಕೆ ನೀಡುವಿಕೆಯಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ. ಬಹುಪಾಲು ಲಸಿಕೆ ಕೆ.ಆರ್.ಕ್ಷೇತ್ರದ ಪಾಲಾಗುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಸದಸ್ಯರು ನಗರದಲ್ಲಿ ಮಂಗಳವಾರ ನಡೆದ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಲಸಿಕೆ ನೀಡುವಿಕೆಗೂ ಮುನ್ನ ನೀಡುವ ಟೋಕನ್‌ನಲ್ಲಿ ರಾಜಕೀಯ ಪಕ್ಷದ ಚಿಹ್ನೆ ಇರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ ಸದಸ್ಯರು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸಭೆಗೆ ಕರೆಸಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ, ಮೇಯರ್ ಚುನಾವಣೆ ಮುಂದೂಡಿಕೆ ವಿಷಯವೂ ಪ್ರಧಾನವಾಗಿ ಸಭೆಯು ಗದ್ದಲದಲ್ಲಿ ಮುಳುಗಿತು.

ಈ ಹಂತದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಸದಸ್ಯರ ನಡುವಿನ ವಾಗ್ವಾದಗಳು ತಾರಕಕ್ಕೇರಿದಾಗ ಮಧ್ಯಪ್ರವೇಶಿಸಿದ ಪ್ರಭಾರ ಮೇಯರ್ ಅನ್ವರ್‌ಬೇಗ್, ‘ಇದು ನನ್ನ ಮೊದಲ ಸಭೆ. ಸಾಂಗವಾಗಿ ನಡೆಯಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ಉದಯಗಿರಿ ವಾರ್ಡ್‌ 13ರ ಕಾಂಗ್ರೆಸ್ ಸದಸ್ಯ ಅಯೂಬ್‌ಖಾನ್ ಮಾತನಾಡಿ, ‘ಕೋವಿಡ್ ಲಸಿಕೆ ಶಾಸಕರ ಮನೆಯ ಆಸ್ತಿಯೇ’ ಎಂದು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.‌

‘ಚರಕ ಆಸ್ಪತ್ರೆಯಲ್ಲಿ 500 ಮಂದಿಗೆ ಟೋಕನ್‌ ನೀಡಿ, ಕೇವಲ 100 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಸಮರ್ಪಕವಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ’ ಎಂದು ಗೋಕುಲಂನ ವಾರ್ಡ್‌ 6ರ ಜೆಡಿಎಸ್ ಸದಸ್ಯ ಎಸ್‌ಬಿಎಂ ಮಂಜು ಕಿಡಿಕಾರಿದರು.

ಸುಭಾಷನಗರದ ವಾರ್ಡ್ ಸಂಖ್ಯೆ 16ರ ಆರಿಫ್ ಹುಸೇನ್, ‘ಲಸಿಕೆ ಪಡೆಯಲು ಒಂದು ದಿನದ ಕೂಲಿಯನ್ನು ನಷ್ಟ ಮಾಡಿಕೊಂಡು ಸಾಲಿನಲ್ಲಿ ನಿಂತು ಲಸಿಕೆ ತೆಗೆದುಕೊಳ್ಳುವ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಪಗಳಿಗೆ ಪ್ರತಿಕ್ರಿಯಿಸಿದ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ‘ಬರುವ ಲಸಿಕೆಗಳನ್ನೆಲ್ಲ ಜುಲೈ ತಿಂಗಳಿನಿಂದ ವಿಧಾನಸಭಾ ಕ್ಷೇತ್ರವಾರು ಸಮನಾಗಿ ಹಂಚಿಕೆ ಮಾಡಲಾಗುತ್ತಿದೆ. ಸದಸ್ಯರ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು’ ಎಂದು ಹೇಳಿದ ಬಳಿಕೆ ಗದ್ದಲ ಕಡಿಮೆಯಾಯಿತು.

ಮಹಿಳಾ ಸದಸ್ಯರ ತರಾಟೆ: ಮೇಯರ್ ಚುನಾವಣೆ ಮುಂದೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷಭೇದ ಮರೆತು ಮಹಿಳಾ ಸದಸ್ಯರು ವಾಕ್‌ಪ್ರಹಾರ ನಡೆಸಿದರು.

ವಾರ್ಡ್‌ ಸಂಖ್ಯೆ 2ರ ಮಂಚೇಗೌಡನಕೊಪ್ಪಲಿನ ಜೆಡಿಎಸ್‌ ಸದಸ್ಯೆ ಪ್ರೇಮಾ ವಿಷಯ ಪ್ರಸ್ತಾಪಿಸಿ, ‘ಮೀಸಲಾತಿ ಇದ್ದರೂ ಮೇಯರ್ ಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ಮಾಡಿಕೊಡದಿರುವುದರಿಂದ ಹಕ್ಕುಚ್ಯುತಿಯಾಗಿದೆ’ ಎಂದರು.

‘ಮೇಯರ್ ಚುನಾವಣೆಗೆ ಅಡ್ಡಿ ಬರುವ ಕೋವಿಡ್, ಮುಖ್ಯಮಂತ್ರಿ ಬದಲಾವಣೆಗೆ ಅಡ್ಡಿ ಬರುವುದಿಲ್ಲವಂತೆ ಎಂದು ಆರಿಫ್‌ ಹುಸೇನ್ ವ್ಯಂಗ್ಯವಾಡಿದರು.

ವಾರ್ಡ್‌ ಸಂಖ್ಯೆ 32ರ ಗೌಸಿಯಾನಗರದ ಎಚ್.ಎಂ.ಶಾಂತಕುಮಾರಿ, ‘ಖಾಲಿ ಸ್ಥಾನಗಳನ್ನು ತುಂಬುವ ವಿಚಾರದಲ್ಲಿ ನಿಯಮಗಳು ಉಲ್ಲಂಘನೆಯಾಗಿವೆ’ ಎಂದು ದೂರಿದರು.

ಮೇಯರ್ ಚುನಾವಣೆಗೆ ನ್ಯಾಯಾಲದಿಂದ ತಡೆಯಾಜ್ಞೆ ತಂದವರು ಕಾಂಗ್ರೆಸ್‌ ಸದಸ್ಯರೇ ಆಗಿದ್ದಾರೆ ಎಂದು ವಿಜಯನಗರದ ವಾರ್ಡ್ ಸಂಖ್ಯೆ 20ರ ಬಿಜೆಪಿ ಸದಸ್ಯ ಯು.ಎಂ.ಸುಬ್ಬಯ್ಯ ಸೇರಿ ಬಿಜೆಪಿ ಸದಸ್ಯರು ತಿರುಗೇಟು ನೀಡಿದರು.

‘ಮೇಯರ್‌ ಚುನಾವಣೆ ನಡೆಸಬೇಕು’ ಎಂದು ನಿರ್ಣಯ ಕೈಗೊಂಡ ಸಭೆಯು ಈ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿತು.

ಇತ್ತೀಚೆಗೆ ನಿಧನರಾದ ಜಿ.ಮಾದೇಗೌಡ, ಸಂಚಾರಿ ವಿಜಯ್ ಅವರಿಗೆ ‌ಸಭೆಯ ಆರಂಭದಲ್ಲಿ ಎಲ್ಲರೂ ಸಂತಾಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT