ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಸೈಕಲ್‌ ಜಾಥಾ, ಎತ್ತಿನ ಗಾಡಿ ಮೆರವಣಿಗೆ

ತೈಲ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Last Updated 14 ಜುಲೈ 2021, 3:57 IST
ಅಕ್ಷರ ಗಾತ್ರ

ನಂಜನಗೂಡು: ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮಂಗಳವಾರ ಕಾಂಗ್ರೆಸ್ ವತಿಯಿಂದ ಮಂಗಳವಾರ ಸೈಕಲ್ ಜಾಥಾ ಹಾಗೂ ಎತ್ತಿನಗಾಡಿಗಳ ಬೃಹತ್ ಮೆರವಣಿಗೆ ನಡೆಸಲಾಯಿತು.

ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಮಾವೇಶಗೊಂಡಿದ್ದ ನಂಜನಗೂಡು ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ ಸಾವಿರಾರು ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆಗೆ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಚಾಲನೆ ನೀಡಿದರು.

ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಆರ್.ಧ್ರುವನಾರಾಯಣ ಮಾತನಾಡಿ, ‘ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ಅಚ್ಛೆ ದಿನ ಆಯೇಗಾ ಅಂತ ಹೇಳುತ್ತಿದ್ದರು. ಜನಸಾಮಾನ್ಯರ ಮೇಲೆ ತೆರಿಗೆ ಹೇರಿಕೆ ಮಾಡಿ ಹಸಿವು ಹಾಗೂ ಸಂಕಷ್ಟದಿಂದ ಬಳಲುವಂತೆ ಮಾಡುವುದೇ ಅಚ್ಛೇ ದಿನ್ ಎಂದು ಮೋದಿ ಭಾವಿಸಿರುವಂತಿದೆ’ ಎಂದು ಟೀಕಿಸಿದರು.

‘ಕಳೆದ 7 ವರ್ಷಗಳಲ್ಲಿ ತೈಲದ ಮೇಲೆ ₹ 20 ಲಕ್ಷ ಕೋಟಿ ತೆರಿಗೆ ವಿಧಿಸಿದೆ. ತೈಲ ಬೆಲೆ ಏರಿಕೆಯಿಂದಾಗಿ ದಿನ ಬಳಕೆಯ ದಿನಸಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ’ ಎಂದರು.

‘ಕೊರೊನಾ ಸಂಕಷ್ಟ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಫೂರ್ಣ ವಿಫಲವಾಗಿವೆ, ರಾಜ್ಯದಲ್ಲಿ ಕೋವಿಡ್‍ಗೆ 3.5 ಲಕ್ಷ ಜನ ಬಲಿಯಾಗಿದ್ದಾರೆ. ಆದರೆ ಸರ್ಕಾರ 50 ಸಾವಿರ ಮಂದಿ ಮಾತ್ರ ಬಲಿಯಾಗಿರುವುದಾಗಿ ಜನರನ್ನು ದಾರಿ ತಪ್ಪಿಸುತ್ತಿದೆ. ಚಾಮರಾಜನಗರದಲ್ಲಿ ನಡೆದ ಆಮ್ಲಜನಕ ದುರಂತದಲ್ಲಿ 36 ಜನ ಮೃತಪಟ್ಟಿರುವುದನ್ನು ವೈದ್ಯರು ಅಧಿಕೃತವಾಗಿ ದೃಢೀಕರಿಸಿದ್ದರೂ ಆರೋಗ್ಯ ಸಚಿವ ಡಾ.ಸುಧಾಕರ್ ಕೇವಲ ಮೂವರು ಮಾತ್ರ ಮೃತಪಟ್ಟಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಹೇಳಿದರು.

ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, ‘ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರ ರೈತವಿರೋಧಿ ನೀತಿ ಅನುಸರಿಸುತ್ತಿದೆ. ದೇಶದಲ್ಲಿ ಬಡವರು, ಕಾರ್ಮಿಕರು ಹಾಗೂ ಕೃಷಿಕರ ಬದುಕು ದುಸ್ತರವಾಗಿದೆ. ಜನಪರವಾದ ಈ ಹೋರಾಟದಲ್ಲಿ ರಾಜಕೀಯ ಮಾಡುವ ಉದ್ದೇಶ ನಮಗಿಲ್ಲ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕಳಲೆ ಎನ್.ಕೇಶವಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಲತಾ ಸಿದ್ಧಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಸಿ.ಎಂ.ಶಂಕರ್, ಕುರಹಟ್ಟಿ ಮಹೇಶ್, ಶ್ರೀಕಂಠನಾಯ್ಕ, ದೇವನೂರು ಮಹದೇವಪ್ಪ, ಎನ್.ಎಂ.ಮಂಜುನಾಥ್, ಅಕ್ಬರ್ ಅಲಿ, ಆರ್.ಇಂಧನ್‍ ಬಾಬು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT