ಶುಕ್ರವಾರ, ಸೆಪ್ಟೆಂಬರ್ 17, 2021
23 °C

ಕೆ.ಆರ್.ನಗರ: ಜೀವಕಳೆ ಪಡೆದ ಕಾಳೇನಹಳ್ಳಿ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ನಗರ: ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಕೆರೆಯಲ್ಲಿ ಈಗ ಜೀವಕಳೆ ಮೂಡಿದೆ.

17 ಎಕರೆ ವಿಸ್ತೀರ್ಣದ ಕೆರೆಯು ಮಳೆಗಾಲದಲ್ಲಿ ಜೋರು ಮಳೆ ಬಂದರೆ ಮಾತ್ರ ತುಂಬುತ್ತಿತ್ತು. ಬೇಸಿಗೆಯಲ್ಲಿ ಒಣಗುತ್ತಿದ್ದುದರಿಂದ ಜನ– ಜಾನುವಾರುಗಳು ನೀರಿಲ್ಲದೆ ಪರಿತಪಿಸಬೇಕಾಗಿತ್ತು. ಹಿಂದಿನ ವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿ ಕೆರೆ ಅಭಿವೃದ್ಧಿ ನಡೆದ ಪರಿಣಾಮ ಈಗ ನೀರು ತುಂಬಿದೆ.

₹10 ಲಕ್ಷ ವೆಚ್ಚದ ಯೋಜನೆಯಡಿ ದೊಡ್ಡೇಕೊಪ್ಪಲು ಗ್ರಾಮ ಪಂಚಾಯಿತಿ ಮತ್ತು ಕಾಳೇನಹಳ್ಳಿ ಕೆರೆ ಬಳಕೆದಾರರ ಸಂಘದ ಸಹಯೋಗದಲ್ಲಿ 2 ತಿಂಗಳ ಅವಧಿಯಲ್ಲಿ ಕೆರೆಯ ಹೂಳು ತೆಗೆಯಲಾಗಿತ್ತು. ಕೆರೆಗೆ ಸೇರಿದ 9 ಎಕರೆ ಜಾಗ ಒತ್ತುವರಿಯಾಗಿದ್ದು, 8 ಎಕರೆಯಲ್ಲಿ ಮಾತ್ರ ಹೂಳು ತೆಗೆಯಲಾಗಿದೆ. ಅಭಿವೃದ್ಧಿಗೆ ಒಟ್ಟು ₹6.40 ಲಕ್ಷ ಖರ್ಚು ಮಾಡಲಾಗಿದೆ.

ಹಳೇ ಯಡತೊರೆಯಿಂದ ಹುಣಸೂರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಪಂಪ್‌ಸೆಟ್‌ನಿಂದ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಹೀಗಾಗಿ ಮಳೆ ಬಾರದಿದ್ದರೂ ನೀರಿನ ಕೊರತೆಯಾಗಿಲ್ಲ. ಹೂಳು ತೆಗೆದಿರುವುದರಿಂದ ನೀರು ಸಂಗ್ರಹವಾಗುತ್ತಿದೆ. ನೀರನ್ನು ಜಮೀನುಗಳಿಗೆ ಬಳಸಿಕೊಳ್ಳುವಂತಿಲ್ಲ. ಆದರೆ, ಜಾನುವಾರು ತೊಳೆಯಲು, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಗ್ರಾಮಸ್ಥರು ಬಳಸುತ್ತಿದ್ದಾರೆ.

‘ಕಾಳೇನಹಳ್ಳಿ ಕೆರೆ ಒತ್ತುವರಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ದೊಡ್ಡೇಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ಕೆರೆಗಳು: ಹೆಬ್ಬಾಳು, ಚಂದಗಾಲು, ಕೆಂಪೇಗೌಡನ ಕೊಪ್ಪಲು, ಬ್ಯಾಡರಹಳ್ಳಿ, ಲಾಲನಹಳ್ಳಿ, ಲಾಳಂದೇವನಹಳ್ಳಿ ಕೆರೆಗಳು ಪ್ರಮುಖವಾದವು. 53 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ. ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು, ಅದನ್ನು ತೆರವುಗೊಳಿಸಬೇಕಿದೆ.

ಅಂತರ್ಜಲ ವೃದ್ಧಿ

ಕಾಲುವೆಯಿಂದ ನೀರು ಹರಿಸಿದರೆ ಮಾತ್ರ ಕೆರೆಯಲ್ಲಿ ನೀರು ಇರುತ್ತಿತ್ತು. ಈಗ ಪಂಪ್‌ಸೆಟ್‌ನಿಂದ ನೀರು ಹರಿಯುವುದರಿಂದ ಕೆರೆ ಸದಾ ತುಂಬಿರುತ್ತದೆ. ಸುತ್ತಲಿನ ಪ್ರದೇಶಗಳಲ್ಲಿ ಬತ್ತಿಹೋಗಿದ್ದ ಕೊಳವೆಬಾವಿಗಳಲ್ಲಿ ನೀರು ಬರುತ್ತಿದೆ. ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದು ಕೆಂಪನಕೊಪ್ಪಲು ರೈತ ಪುಟ್ಟರಾಜೇಗೌಡ ತಿಳಿಸಿದರು.

ತಾಲ್ಲೂಕಿನ 80 ಕೆರೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ. ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.

– ಎಚ್.ಕೆ.ಸತೀಶ್, ತಾಲ್ಲೂಕು ಪಂಚಾಯಿತಿ ಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.