ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಳ ಮೀಸಲಾತಿ ಸಂವಿಧಾನ ವಿರೋಧಿ’

ನೂರು ವರ್ಷಗಳ ಮೀಸಲಾತಿಯ ನಡಿಗೆ – ವಿಚಾರ ಸಂಕಿರಣ
Last Updated 23 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಮೈಸೂರು: ‘ಒಳ ಮೀಸಲಾತಿ ಪರಿಕಲ್ಪನೆ ಸಂವಿಧಾನ ವಿರೋಧಿಯಾಗಿದೆ. ನೂರಾರು ಉಪಜಾತಿಗಳಿದ್ದು, ಯಾರಿಗೆಂದು ಕೊಡುತ್ತೀರಿ? ಮೀಸಲಾತಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಬೇಕಾದರೆ ಹೋರಾಟ ಮಾಡೋಣ’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಹೇಳಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಪೀಠ, ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ ‘ನೂರು ವರ್ಷಗಳ ಮೀಸಲಾತಿಯ ನಡಿಗೆ–ಒಂದು ಪರಿಕಲ್ಪನೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಒಳ ಮೀಸಲಾತಿ ನೀಡಲು ಸಾಧ್ಯವೇ ಇಲ್ಲ. ಈ ವಿಚಾರ ಈಗಾಗಲೇ ಆಂಧ್ರಪ್ರದೇಶದಲ್ಲಿ ವಿಫಲವಾಗಿದೆ. ದಲಿತರೆಂದರೆ ನೂರಾರು ವರ್ಷಗಳಿಂದ ನೋವುಂಡು ಬಂದವರು. ಆದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಗೆ ಹೊಸದಾಗಿ ಜಾತಿಗಳು ಸೇರುತ್ತಲೇ ಇವೆ. ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡುತ್ತಿವೆ. ಲಾಬಿ ನಡೆಸಿ ಪಟ್ಟಿಗೆ ಸೇರಿಸಲಾಗುತ್ತಿದೆ’ ಎಂದರು.

‘ಇಂತಹ ಗೊಂದಲಗಳಿಂದಾಗಿಯೇ ಈ ಪರಿಕಲ್ಪನೆ ದುರ್ಬಲವಾಗುತ್ತಿದೆ. ಮೀಸಲಾತಿಗೆ ಒಂದು ಮಾನದಂಡ ಇರಬೇಕು. ಯಾವ ಜಾತಿಗಳನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸ ಬೇಕೆಂದು ಪರಾಮರ್ಶೆ ನಡೆಯಬೇಕು. ಅದಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ರಾಜಕೀಯ ಮೀಸಲಾತಿ ಇಲ್ಲದಿದ್ದರೆ ನನ್ನಂಥವರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಲೋಕಸಭೆ, ವಿಧಾನಸಭೆಯಲ್ಲಿ ಇರುವಂತೆ ರಾಜಕೀಯ ಮೀಸಲಾತಿಯನ್ನು ರಾಜ್ಯಸಭೆ ಹಾಗೂ ವಿಧಾನಪರಿಷತ್ತಿಗೂ ವಿಸ್ತರಿಸಬೇಕು’ ಎಂದು ಹೇಳಿದರು.

‘ನ್ಯಾಯಾಲಯವೂ ಸ್ಪಂದಿಸುತ್ತಿಲ್ಲ’

‘ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಮೀಸಲಾತಿಗೆ ವಿರುದ್ಧವಾಗಿ ತೀರ್ಪು ನೀಡಿವೆ. ಸೂಕ್ಷ್ಮ ವಿಚಾರ ಹಾಗೂ ಸತ್ಯ ಏನೆಂಬುದನ್ನು ಭಾರತದ ನ್ಯಾಯಾಲಯಗಳು ಅರಿಯಬೇಕಿದೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಅಭಿಪ‍್ರಾಯಪಟ್ಟರು.

ಮೀಸಲಾತಿಗೆ ಸಂಬಂಧಿಸಿದಂತೆ 2012ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ್ದ 117ನೇ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೆ ಪ್ರಯತ್ನಿಸಬೇಕು ಎಂದು ಕೋರಿದರು.

ಪ್ರಸಾದ್‌ ಮಾತಿಗೆ ವಿರೋಧ

ಒಳ ಮೀಸಲಾತಿ ಬೇಡವೆಂದು ಶ್ರೀನಿವಾಸಪ್ರಸಾದ್‌ ಭಾಷಣ ಮುಗಿಸುತ್ತಿದ್ದಂತೆಯೇ, ಸಭಿಕರೊಬ್ಬರು ಎದ್ದುನಿಂತು, ‘ನಿಮ್ಮ ಹೇಳಿಕೆಗೆ ನನ್ನ ವಿರೋಧವಿದೆ’ ಎಂದು ಹೇಳಿದರು.

ಆಗ ಪ್ರಸಾದ್‌, ‘ಒಳಮೀಸಲಾತಿ ಪರಿಕಲ್ಪನೆಯೇ ದಲಿತರಲ್ಲಿ ಒಡಕು ಉಂಟು ಮೂಡಿಸುವಂಥದ್ದಾಗಿದೆ. ಇದನ್ನು ಹೇಗೆ ಸಮರ್ಥಿಸುವುದು? ಸಂವಿಧಾನದಲ್ಲಿ ಇದಕ್ಕೆ ಅವಕಾಶವೇ ಇಲ್ಲ’ ಎಂದು ಸಮರ್ಥಿಸಿಕೊಂಡರು. ಅದಕ್ಕೆ ದನಿಗೂಡಿಸಿದ ನಾಗಮೋಹನದಾಸ್‌, ‘ಪ್ರಸಾದ್‌ ವಿಚಾರವನ್ನು ನೀವು ಒಪ್ಪಬೇಕಾಗಿಲ್ಲ. ಆದರೆ, ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT