ಸೋಮವಾರ, ಮೇ 25, 2020
27 °C
ಆಹಾರ, ನೀರು ಇಲ್ಲದೇ ಪರದಾಟ, ಅನ್ನ ಹಾಕುವವರ ಮೇಲೆ ಜನರ ಆಕ್ರೋಶ

ಬೀದಿನಾಯಿಗಳನ್ನೂ ಬಿಡದ ಕೊರೊನಾ ಕಾಟ

– ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ವೈರಸ್ ಪ್ರಭಾವ ಕೇವಲ ಮನುಷ್ಯರ ಮೇಲಾಗುತ್ತಿಲ್ಲ. ಬೀದಿನಾಯಿಗಳ ಕೂಳಿಗೂ ಕೊರೊನಾ ಕನ್ನ ಹಾಕಿದ್ದು, ಅವೂ ಬಡಕಲಾಗುತ್ತಿವೆ.

ಕೊರೊನಾ ವೈರಸ್ ಹರಡುವಿಕೆ ತಡೆಯಲು ದೇಶಾದ್ಯಂತ ‘ಲಾಕ್‌ಡೌನ್‌’ ಮಾಡಿದ್ದರಿಂದ ದಿನಸಿ, ಔಷಧ ಮತ್ತು ಹಾಲು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಹಾಗೂ ಹೋಟೆಲ್‌ಗಳು ಬಂದ್ ಆದವು. ಇವುಗಳನ್ನೇ ಅವಲಂಬಿಸಿದ್ದ ಬೀದಿನಾಯಿಗಳು ಆಹಾರ ಇಲ್ಲದೇ ಪರಿತಪಿಸುತ್ತಿವೆ.

ವಿಶೇಷವಾಗಿ ರಸ್ತೆ ಬದಿಯಲ್ಲಿರುವ ಹೋಟೆಲ್‌ಗಳು ಹಾಗೂ ವಿವಿಧ ತಿಂಡಿ, ತಿನಿಸುಗಳ ಗಾಡಿಗಳನ್ನೇ ನಾಯಿಗಳು ಆಹಾರಕ್ಕಾಗಿ ಅವಲಂಬಿಸಿದ್ದವು. ಇವರು ಒಂದೆಡೆ ತಂದು ಸುರಿಯುತ್ತಿದ್ದ ಆಹಾರ ತ್ಯಾಜ್ಯಗಳನ್ನು ಗುಂಪಾಗಿ ಸೇವಿಸುತ್ತಿದ್ದವು.

ನಿತ್ಯ ರಾತ್ರಿ ಇವುಗಳಿಗೆ ಸಂಪೂರ್ಣ ಭೋಜನ ಸಿಗುತ್ತಿತ್ತು. ಕೆಲವು ಬೇಕರಿ, ಹೋಟೆಲ್‌ನವರು ಬೀದಿ ನಾಯಿಗಳಿಗಾಗಿಯೇ ನಿರ್ದಿಷ್ಟ ಸಮಯದಲ್ಲಿ ಆಹಾರ ನೀಡುತ್ತಿದ್ದರು. ಈಗ ಇವರ ಅಂಗಡಿಗಳೆಲ್ಲವೂ ಬಂದ್ ಆಗಿರುವುದರಿಂದ ಸಹಜವಾಗಿಯೇ ನಾಯಿಗಳಿಗೆ ಆಹಾರದ ಕೊರತೆ ಎದುರಾಗಿದೆ.

ಬಡಾವಣೆಯೊಳಗಿನ ಬೀದಿಗಳ ನಾಯಿಗಳಿಗೆ ಸಮಸ್ಯೆಯಾಗಿಲ್ಲ. ಇವರಿಗೆ ಮನೆಯವರು ತಂದು ಹಾಕುವ ಅಳಿದುಳಿದ ಆಹಾರ ಸಾಕಾಗುವಷ್ಟಾಗುತ್ತದೆ. ಆದರೆ, ರಸ್ತೆಬದಿಯಲ್ಲಿರುವ ಅಂಗಡಿಗಳು, ಹೋಟೆಲ್‌ನವರು ತಂದು ಸುರಿಯುವ ತ್ಯಾಜ್ಯವನ್ನೇ ನೆಚ್ಚಿಕೊಂಡಿದ್ದ ನಾಯಿಗಳಿಗೆ ಸಮಸ್ಯೆಯಾಗಿದೆ.

ಇದರೊಂದಿಗೆ ಹೆಚ್ಚಾಗಿ ಮಾಂಸದಂಗಡಿಗಳೂ ತೆರದಿಲ್ಲ. ಹಕ್ಕಿಜ್ವರದ ಕಾರಣಕ್ಕೆ ಚಿಕನ್‌ ಮಾರಾಟವೂ ಇಲ್ಲ. ಇವುಗಳಿಂದಲೂ ನಾಯಿಗಳು ಆಹಾರ ಇಲ್ಲದೇ ಕಂಗಾಲಾಗಿವೆ.

ಆಹಾರ ನೀಡಿವುದಕ್ಕೆ ವಿರೋಧ

ಇಂತಹ ಸಂದರ್ಭದಲ್ಲಿ ಕೆಲವೊಂದು ಪ್ರಾಣಿದಯಾ ಸಂಸ್ಥೆಗಳು ಆಹಾರ ನೀಡಲು ಮುಂದೆ ಬಂದಿವೆ. ಸ್ಥಳೀಯವಾಗಿ ಪ್ರಾಣಿಗಳ ಮೇಲೆ ಅಕ್ಕರೆ ಹೊಂದಿರುವವರಿಗೆ ನಾಯಿಗಳಿಗೆ ಬೇಕಾದ ಆಹಾರವನ್ನು ಈ ಸಂಸ್ಥೆಗಳು ಪೂರೈಸುತ್ತಿವೆ. ಆದರೆ, ನಾಯಿಗಳಿಗೆ ಆಹಾರ ಹಾಕಲು ಹೋದರೆ ಅಕ್ಕಪಕ್ಕದ ನಿವಾಸಿಗಳು ಜಗಳಕ್ಕೆ ನಿಲ್ಲುತ್ತಿದ್ದಾರೆ.

‘ವಿಜಯನಗರದಲ್ಲಿ ಒಂದು ಕಡೆ ಹೀಗೆ ಆಯಿತು. ನಾಯಿಗಳಿಗೆ ಆಹಾರ ಹಾಕಲು ಹೋದರೆ ಸ್ಥಳೀಯ ನಿವಾಸಿಗಳು ಜಗಳಕ್ಕೆ ಬಂದರು. ಆಹಾರ ಇಲ್ಲದೇ ನಾಯಿಗಳು ಸತ್ತು ಹೋಗಲಿ ಎಂಬುದೇ ಇವರ ಉದ್ದೇಶವಿರಬಹುದೇ ಎನೋ ಗೊತ್ತಿಲ್ಲ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ’ ಎಂದು ಪ್ರಾಣಿಪ್ರಿಯರೊಬ್ಬರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು