ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೆಹಲಿಯ ಪ್ರತಿಭಟನೆಗೆ ಗೆಲುವಾದರಷ್ಟೇ ರೈತರ ಉಳಿವು’

ದೇಶದಲ್ಲಿ ಕಾರ್ಪೊರೇಟ್ ಶಕ್ತಿಗಳ ಕೈ ಮೇಲಾಗದಂತೆ ಎಚ್ಚರ ವಹಿಸಲು ಸಲಹೆ
Last Updated 9 ಜನವರಿ 2021, 11:10 IST
ಅಕ್ಷರ ಗಾತ್ರ

ಮೈಸೂರು: ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಜಯ ಸಿಕ್ಕರೆ ಮಾತ್ರವೇ ಈ ದೇಶದ ರೈತ ಸಮುದಾಯ ಉಳಿಯುತ್ತದೆ. ಇಲ್ಲದಿದ್ದರೆ, ರೈತರು ನಾಶವಾಗಲಿದ್ದಾರೆ ಎಂದು ಚಿಂತಕ ಶಿವಸುಂದರ್ ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮತ್ತು ನೆಲೆ ಹಿನ್ನೆಲೆ ವತಿಯಿಂದ ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಯುವಜನ ಜಾಥಾದ ಸಮಾರೋಪ ಸಮಾರಂಭ ಮತ್ತು ವಿಚಾರಗೋಷ್ಠಿ’ಯಲ್ಲಿ ಅವರು ಮಾತನಾಡಿದರು.

ಒಂದು ವೇಳೆ ಈ ಹೋರಾಟದಲ್ಲಿ ಗೆಲುವು ಸಿಗದೇ ಹೋದರೆ ದೇಶದಲ್ಲಿ ಕಾರ್ಪೊರೇಟ್ ಶಕ್ತಿಗಳ ಕೈ ಮೇಲಾಗುತ್ತದೆ. ಇವರ ಹಿಡಿತಕ್ಕೆ ರೈತ ಸಮುದಾಯ ಸಿಕ್ಕಿ ನರಳಬೇಕಾಗುತ್ತದೆ. ಹಾಗಾಗಿ, ಎಲ್ಲರೂ ರೈತರ ಉಳಿವಿಗೆ ಜ. 26ರಂದು ನಡೆಯುವ ಹೋರಾಟಕ್ಕೆ ಬೆಂಬಲ ಸೂಚಿಸಬೇಕಿದೆ ಎಂದು ಕರೆ ನೀಡಿದರು.

ಅಂಬಾನಿಯಂತಹ ಕಾರ್ಪೋರೇಟ್ ಶಕ್ತಿಯಿಂದ ಈ ದೇಶದ ಆರ್ಥಿಕತೆ ನಾಶವಾದರೆ, ನರೇಂದ್ರ ಮೋದಿಯಂತಹ ಪ್ರಧಾನಿಯಿಂದ ರಾಜಕೀಯ ವ್ಯವಸ್ಥೆ ಕೊಲೆಯಾಗಿದೆ. ಇವುಗಳನ್ನು ಸಮರ್ಥಸಿಕೊಳ್ಳುವ ಕೆಲವು ಮಾಧ್ಯಮದವರಿಂದ ಪತ್ರಿಕಾರಂಗ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಖಾಸಗಿ ಮಾರುಕಟ್ಟೆಗಳು ಎಂದಿಗೂ ರೈತರ ಪರವಾಗಿ ಕೆಲಸ ಮಾಡುವುದಿಲ್ಲ. ಅಂಬಾನಿ ಎದುರು ಬಡ ರೈತ ದನಿ ಎತ್ತುವ ಪ್ರಶ್ನೆಯೇ ಬರುವುದಿಲ್ಲ. ಎಪಿಎಂಸಿಯಲ್ಲಿ ನರಿಗಳ ಮೋಸಕ್ಕೆ ಒಳಗಾಗಿದ್ದ ರೈತರನ್ನು ಹುಲಿಯ ಬಾಯಿಗೆ ತಳ್ಳಿದಂತೆ ಕೇಂದ್ರ ಕೃಷಿ ನೀತಿಯಾಗಿದೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರೆಗೋಡು, ನೆಲೆ ಹಿನ್ನೆಲೆ ಕಲಾಬಳಗದ ಗೋಪಾಲಕೃಷ್ಣ, ಶ್ರೀಧರ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದೇಶಪ್ರೇಮಿ ಯುವಾಂದೋಲನ ತಂಡದ ಸರೋವರ್, ಪುಷ್ಪಾ, ಮಮತಾ, ಮನೋಜ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪಿ.ಮರಂಕಯ್ಯ, ಸ್ವರಾಜ್ ಇಂಡಿಯಾದ ಪುನೀತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT