ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಉದ್ಘಾಟನೆ: ಐವರು ಕೊರೊನಾ ಯೋಧರು ಯಾರು?

ಈಗಾಗಲೇ ಲಾಬಿ ಶುರು, ಒತ್ತಡ ಹೇರಿಕೆ
Last Updated 10 ಸೆಪ್ಟೆಂಬರ್ 2020, 2:20 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿಬೆಟ್ಟದಲ್ಲಿ ಈ ಬಾರಿ ದಸರಾ ಮಹೋತ್ಸವ ಉದ್ಘಾಟನೆ ಮಾಡಲಿರುವ ಐವರು ಕೊರೊನಾ ಯೋಧರನ್ನು ಆಯ್ಕೆ ಮಾಡುವ ವಿಚಾರ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಈ ವಿಚಾರದಲ್ಲೂ ಲಾಬಿ ಆರಂಭ ವಾಗಿದ್ದು, ಈಗಲೇ ಶಿಫಾರಸು ಪತ್ರಗಳು ಬರಲಾರಂಭಿಸಿವೆ. ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಹಿತಿಯೊಬ್ಬರನ್ನು ಆಯ್ಕೆ ಮಾಡುವಂತೆ ಒತ್ತಡಗಳು ಬರುತ್ತಿವೆ.

ಕೋವಿಡ್‌ ವಿರುದ್ಧದ ಹೋರಾಟ ದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಪೊಲೀಸರಲ್ಲಿ ತಲಾ ಒಬ್ಬರನ್ನು ಆಯ್ಕೆ ಮಾಡಲಾಗುತ್ತಿದೆ.

ಹೀಗಾಗಿ, ಒಂದು ಸಮಿತಿ ರಚಿಸಿ ಐದು ಕ್ಷೇತ್ರಗಳ ಪ್ರಮುಖರು, ಆಯಾಯ ಇಲಾಖೆಯ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉದ್ಘಾಟಕರನ್ನು ಆಯ್ಕೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

‘ಈ ವಿಚಾರವಾಗಿ ಜಿಲ್ಲಾಧಿಕಾರಿ ಯೊಂದಿಗೂ ಚರ್ಚಿಸಿದ್ದೇನೆ. ಸಮಿತಿ ರಚಿಸುವುದಾಗಿ ಹೇಳಿದ್ದಾರೆ. ಚೆನ್ನಾಗಿ ಕೆಲಸ ಮಾಡುತ್ತಿರುವವರ ವಿವರ ಆಯಾಯ ಇಲಾಖೆಗಳ ಮುಖ್ಯಸ್ಥರಿಗೆ ಹಾಗೂ ಕೋವಿಡ್‌–19 ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳಿಗೆ ಗೊತ್ತಿರುತ್ತದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ವಾರಿಯರ್‌ಗಳ ಸೇವೆ ಅಪಾರ. ಪೊಲೀಸರು, ವೈದ್ಯರು, ಕೆಲ ಅಧಿಕಾರಿಗಳು ಕೋವಿಡ್‌ನಿಂದ ಮೃತರಾದರು. ಆಶಾ ಕಾರ್ಯಕರ್ತೆಯರ ಮೇಲೆ ಕೆಲವರು ಹಲ್ಲೆ ನಡೆಸಿದರು. ಜೀವದ ಹಂಗು ತೊರೆದು ಹೋರಾಟ ನಡೆಸಿದ್ದಾರೆ. ಹೀಗಾಗಿ, ಅವರ ಸೇವೆಗೆ ಗೌರವ ನೀಡುವುದು ನಮ್ಮ ಕರ್ತವ್ಯ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ ಶುಕ್ರವಾರ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯುವ ಸಾಧ್ಯತೆ ಇದ್ದು, ಆಯ್ಕೆ ಸಂಬಂಧ ಇಲ್ಲಿಯೂ ಚರ್ಚೆ ಆಗಲಿದೆ.

ಈ ಬಾರಿ ದಸರೆಯು ಅ.17ರಿಂದ 26ರವರೆಗೆ ನಡೆಯಲಿದೆ. 17ರಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT