ಮಂಗಳವಾರ, ಮೇ 17, 2022
27 °C
ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರಿಗೆ ಆನ್‌ಲೈನ್‌ ಸೇವೆಗಳ ಕಾರ್ಯಾಗಾರ

ಸರ್ಕಾರಿ ನೌಕರರಿಗೆ ನಗದುರಹಿತ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸರ್ಕಾರಿ ನೌಕರರಿಗೆ ನಗದುರಹಿತ ಚಿಕಿತ್ಸೆ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದು, ಏಪ್ರಿಲ್ 1ರಿಂದ ಈ ಕುರಿತ ಯೋಜನೆ ಜಾರಿಗೆ ಬರಬಹುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.‌

ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಗ್ರೂಪ್–ಡಿ ನೌಕರರ ಸಂಘದ ಮೈಸೂರು ವಿಭಾಗದ ವತಿಯಿಂದ ಇಲ್ಲಿನ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮೈಸೂರು ವಿಭಾಗೀಯ ಬೋಧಕೇತರ ನೌಕರರಿಗೆ ಆನ್‌ಲೈನ್‌ ಸೇವೆಗಳ ಕುರಿತ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

ಬಹುಶಃ ಈ ಯೋಜನೆ ವ್ಯಾಪ್ತಿಯಲ್ಲಿ ಸಾಮಾನ್ಯ ಚಿಕಿತ್ಸೆಗೆ ₹1 ಲಕ್ಷದಿಂದ ₹1.5 ಲಕ್ಷ, ವಿಶೇಷ ಸಂದರ್ಭಗಳಲ್ಲಿ ಇದರ ಮಿತಿ ₹ 50 ಲಕ್ಷದವರೆಗೂ ಇರುವ ಸಾಧ್ಯತೆ ಇದೆ. ಇದು ಹೊರರೋಗಿ ಮತ್ತು ಒಳರೋಗಿ ಸೇವೆಗಳಿಗೆ ಅನ್ವಯಿಸಲಿದೆ. ಸರ್ಕಾರ ಶೀಘ್ರದಲ್ಲೇ ಈ ಕುರಿತ ತೀರ್ಮಾನ ಪ್ರಕಟಿಸಲಿದೆ ಎಂದು ಹೇಳಿದರು.

ಲಿಪಿಕ ನೌಕರರಿಗೆ ಗೌರವ ಇಲ್ಲ. ಗೌರವ ದೊರೆಯಬೇಕಾದರೆ ಎಲ್ಲರೂ ಸಂಘಟಿತರಾಗಬೇಕು. ಗುಮಾಸ್ತ ಎಂದು ಕರೆಯಬಾರದು. ಈ ಬಗೆಯ ಪದನಾಮಗಳ ಬದಲಾವಣೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು.

ಕೇಂದ್ರ ಸರ್ಕಾರದ ಮಾದರಿಯಲ್ಲಿ ಹುದ್ದೆ ಆಧಾರಿತ ಬಡ್ತಿ ಸೌಲಭ್ಯ ನೀಡುವ ಪ್ರಸ್ತಾವವನ್ನು ಸರ್ಕಾರದ ಮುಂದಿರಿಸಲಾಗಿದೆ. ಇದಕ್ಕೂ ಸರ್ಕಾರ ಸಕಾರಾತ್ಮಕವಾಗಿಯೇ ಸ್ಪಂದಿಸಿದೆ. ಇದರಿಂದ ಬಡ್ತಿ ಸೌಲಭ್ಯ ಶೇ 30ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪ್ರತ್ಯೇಕ ಎಚ್‌ಆರ್‌ಎಂಎಸ್‌ ಕಚೇರಿಗೆ ಆಗ್ರಹ: ಇದಕ್ಕೂ ಮುನ್ನ ಮಾತನಾಡಿದ ಲಿಪಿಕ ನೌಕರರ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಸ್ವಾಮಿ, ‘ಎಚ್‌ಆರ್‌ಎಂಎಸ್‌ನಲ್ಲಿ ತಾಂತ್ರಿಕ ತೊಂದರೆಗಳು ಸರ್ವೇಸಾಮಾನ್ಯ ಎನಿಸಿದೆ. ಈ ವಿಭಾಗದಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಒಮ್ಮೆಯೂ ಫೋನ್‌ ತೆಗೆಯುವುದಿಲ್ಲ. ಮೈಸೂರು ವಿಭಾಗಕ್ಕೆ ಪ್ರತ್ಯೇಕ ಎಚ್‌ಆರ್‌ಎಂಎಸ್‌ ಕಚೇರಿ ತೆರೆಯಬೇಕು’ ಎಂದು ಮನವಿ ಮಾಡಿದರು.

ರಾಜ್ಯ ಲಿಪಿಕ ನೌಕರರ ಸಂಘದ ಅಧ್ಯಕ್ಷೆ ಹರಿಣಾಕ್ಷಿ, ಸಂಚಾಲಕ ದೇವರಾಜು, ಉಪಾಧ್ಯಕ್ಷ ರವಿಶಂಕರ್, ಖಜಾಂಚಿ ಪ್ರಸಾದ್, ಸಿಟಿಇ ಪ್ರಾಂಶುಪಾಲರಾದ ಎಚ್.ಎನ್.ಗೀತಾಂಬ, ಡಯಟ್ ಪ್ರಾಂಶುಪಾಲರಾದ ಕೆ.ಮಹದೇವಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಭಾಗೀಯ ಕಾರ್ಯದರ್ಶಿ ಕೆ.ಜೆ.ರಾಜೇಂದ್ರ, ಚಾಮರಾಜನಗರ ಜಿಲ್ಲೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ, ಉಡುಪಿಯ ಡಯಟ್‌ನ ಪ್ರಾಂಶುಪಾಲ ವೇದಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು