ಸೋಮವಾರ, ಜೂನ್ 14, 2021
27 °C
ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದ ಶಾಸಕ ಸಾ.ರಾ.ಮಹೇಶ್‌

ಕೋವಿಡ್ ನಿರ್ವಹಣೆಗೆ ಅನುದಾನ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕೋವಿಡ್–19 ನಿರ್ವಹಣೆಗಾಗಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೊಡಿ’ ಎಂದು ಕ್ಷೇತ್ರದ ಶಾಸಕ ಸಾ.ರಾ.ಮಹೇಶ್‌ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ನಮ್ಮ ಕ್ಷೇತ್ರದಲ್ಲಿ 115 ಕೋವಿಡ್–19 ಪ್ರಕರಣ ವರದಿಯಾಗಿವೆ. 48 ಸಕ್ರಿಯ ಪ್ರಕರಣಗಳಿದ್ದು, ಎರಡು ಸಾವು ಸಂಭವಿಸಿವೆ. ಇಂತಹ ಸಂದರ್ಭದಲ್ಲಿ ಕೆ.ಆರ್.ನಗರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಒಂದೇ ಒಂದು ವೆಂಟಿಲೇಟರ್‌ ಅನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ’ ಎಂದು ಪತ್ರದಲ್ಲಿ ಜೆಡಿಎಸ್ ಶಾಸಕರು ಉಲ್ಲೇಖಿಸಿದ್ದಾರೆ.

‘ಸರ್ಕಾರದ ವತಿಯಿಂದ ಕೋವಿಡ್–19 ನಿರ್ವಹಣೆಗಾಗಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲೂ ಅನುದಾನವಿಲ್ಲದಾಗಿದೆ. ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗಾಗಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲು ತಕ್ಷಣವೇ ಅನುದಾನ ಬಿಡುಗಡೆ ಮಾಡಿ. ಜೊತೆಗೆ ವೆಂಟಿಲೇಟರ್ ಸೌಲಭ್ಯವನ್ನು ಕಲ್ಪಿಸಿ’ ಎಂದು ಸಾ.ರಾ.ಮಹೇಶ್‌ ಆಗ್ರಹಿಸಿದ್ದಾರೆ.

‘ಆ.10ರಂದು ನನ್ನ ಜನ್ಮದಿನ. ಈ ಬಾರಿ ಹುಟ್ಟುಹಬ್ಬದ ಆಚರಣೆ ರದ್ದು ಮಾಡೋಣ. ನೊಂದವರಿಗೆ ನೆರವಾಗೋಣ. ನಮ್ಮ ನೋವು ನಮಗೆ ಗೊತ್ತಾದ ರೀತಿಯಲ್ಲೇ, ಇತರರ ನೋವು ಅರಿವಿಗೆ ಬಂದರೆ ಅದು ಮನುಷ್ಯತ್ವದ ಲಕ್ಷಣ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯವಿರುವವರಿಗೆ ಈ ಹಣವನ್ನು ನೀಡಿ ಪರರ ಕಷ್ಟಗಳಿಗೆ, ನೋವಿಗೆ ಸ್ಪಂದಿಸೋಣ’ ಎಂದು ಸಾಮಾಜಿಕ ಜಾಲತಾಣದ ಮೂಲಕ ಶಾಸಕರು ತಮ್ಮ ಬೆಂಬಲಿಗರು, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.