ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಜಿಟಿಡಿ, ಸಂದೇಶ್‌ ಬೆಂಬಲ ಯಾರಿಗೆ?

ಅಭ್ಯರ್ಥಿಗಳ ದುಂಬಾಲು!
Last Updated 28 ನವೆಂಬರ್ 2021, 11:16 IST
ಅಕ್ಷರ ಗಾತ್ರ

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಮೈಸೂರು– ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಮತದಾರರಿಗಿಂತಲೂ ಈಗ ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿಧಾನ ಪರಿಷತ್‌ ಹಾಲಿ ಸದಸ್ಯ ಸಂದೇಶ್‌ ನಾಗರಾಜ್‌ ಅವರಿಗೆ ಬಹಳ ಬೇಡಿಕೆ!

ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ ಜಿ.ಡಿ.ಹರೀಶ್‌ಗೌಡ ಚಾಮುಂಡೇಶ್ವರಿ ಹಾಗೂ ಹುಣಸೂರು ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಸದಸ್ಯರ ಮೇಲೆ ಹಿಡಿತ ಹೊಂದಿದ್ದರೆ, ಸತತ ಎರಡು ಬಾರಿ ಆಯ್ಕೆಯಾಗಿದ್ದ ಸಂದೇಶ್‌ ನಾಗರಾಜ್‌ ದ್ವಿಸದಸ್ಯ ಕ್ಷೇತ್ರದಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ.

ಹೀಗಾಗಿ, ಈ ಇಬ್ಬರ ಮನೆಗಳಿಗೆ ತೆರಳಿ ಬೆಂಬಲ ನೀಡುವಂತೆ ಜೆಡಿಎಸ್‌ ಅಭ್ಯರ್ಥಿ ಸಿ.ಎನ್‌.ಮಂಜೇಗೌಡ, ಕಾಂಗ್ರೆಸ್‌ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಹಾಗೂ ಬಿಜೆಪಿ ಅಭ್ಯರ್ಥಿ ಆರ್‌.ರಘು (ಕೌಟಿಲ್ಯ) ದುಂಬಾಲು ಬೀಳುತ್ತಿದ್ದಾರೆ. ಅಲ್ಲದೇ, ಫೋಟೊ ತೆಗೆಸಿಕೊಂಡು ಅವರ ಬೆಂಬಲಿಗ ಸದಸ್ಯರ ಬಳಿ ಹೋಗಿ ಮತ ಯಾಚಿಸುತ್ತಿದ್ದಾರೆ.

ಮೊದಲು ಬಿಜೆಪಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದ ಸಂದೇಶ್‌ ನಾಗರಾಜ್‌, ಅದು ಸಾಧ್ಯವಾಗದಿದ್ದಾಗ ಮತ್ತೆ ಜೆಡಿಎಸ್‌ ಬಾಗಿಲು ಬಡಿದಿದ್ದರು. ಆದರೆ, ‘ಬಾಗಿಲು ಬಂದ್‌’ ಎಂದು ಎಚ್.ಡಿ.ಕುಮಾರಸ್ವಾಮಿ ಘೋಷಿಸುತ್ತಿದ್ದಂತೆ ಅವರ ಸಿಟ್ಟು ನೆತ್ತಿಗೇರಿತು. ಹೀಗಾಗಿ, ತಮ್ಮ ಬೆಂಬಲ ಬಿಜೆಪಿಗೆ ಎಂದು ಹೇಳುತ್ತಿದ್ದಾರೆ. ನಂತರದ ಆದ್ಯತೆಯನ್ನು ಕಾಂಗ್ರೆಸ್‌ಗೆ ನೀಡಿದ್ದಾರೆ.

ಜಿ.ಟಿ.ದೇವೇಗೌಡ ಮಾತ್ರ ತಮ್ಮ ಬೆಂಬಲ ಕೋರಿ ಬರುವವರನ್ನು ಚೆನ್ನಾಗಿಯೇ ಮಾತನಾಡಿ ಕಳುಹಿಸುತ್ತಿದ್ದಾರೆ. ಆದರೆ, ಬೆಂಬಲದ ಭರವಸೆ ಮಾತ್ರ ನೀಡಿಲ್ಲ.

ಜಿ.ಟಿ.ದೇವೇಗೌಡ ಅವರು ಎರಡೂವರೆ ವರ್ಷಗಳಿಂದ ಜೆಡಿಎಸ್‌ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ತಮ್ಮದೇ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದಾಗಲೂ ಭೇಟಿ ಮಾಡಿಲ್ಲ. ಆದರೆ, ಸಿದ್ದರಾಮಯ್ಯ ಜೊತೆಗೆ ಈಚೆಗೆ ವೇದಿಕೆ ಹಂಚಿಕೊಂಡಿದ್ದರು. ಅಲ್ಲದೇ, ಕಾಂಗ್ರೆಸ್‌ ಸೇರುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಹೀಗಾಗಿ, ಜೆಡಿಎಸ್‌ನಲ್ಲಿ ಆತಂಕ ಮೂಡಿದ್ದು, ಮಂಜೇಗೌಡ ಅವರು ದೇವೇಗೌಡರನ್ನು ಉಳಿದ ಅಭ್ಯರ್ಥಿಗಳಿಗಿಂತ ಮೊದಲೇ ಭೇಟಿ ಮಾಡಿ ಬೆಂಬಲ ಕೋರಿದ್ದಾರೆ.

ನಾಮಪತ್ರ ಸಲ್ಲಿಸಿದ ದಿನವೇ ರಘು ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಜೊತೆ ಸಂದೇಶ್‌ ನಾಗರಾಜ್‌ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ್ದರು. ಅದಕ್ಕೆ ಸ್ಪಂದಿಸಿರುವ ಅವರು ತಮ್ಮ ಬೆಂಬಲ ನೀಡುವ ಸಂದೇಶ ರವಾನಿಸಿದ್ದಾರೆ. ಸಹೋದರ ಸಂದೇಶ್‌ ಸ್ವಾಮಿ, ಅವರ ಪುತ್ರ ಸಾತ್ವಿಕ್‌ (ಪಾಲಿಕೆ ಸದಸ್ಯ) ಈಗಾಗಲೇ ಬಿಜೆಪಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT