ಸೋಮವಾರ, ಆಗಸ್ಟ್ 15, 2022
26 °C
ಹಳೆಯ ಜಿ.ಪಂ– ತಾ.ಪಂ ಮೀಸಲು ಕ್ಷೇತ್ರಗಳೇ ಹಲವೆಡೆ ಮುಂದುವರಿಕೆ– ಆರೋಪ

ಮೈಸೂರು: ಕೋಟೆ ನಾಡಿನಲ್ಲಿ ಮೀಸಲಾತಿಗೆ ಅಪಸ್ವರ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗೆ ಮೀಸಲು ನಿಗದಿಗೊಳಿಸುತ್ತಿದ್ದಂತೆ ಬಹುತೇಕ ಪಕ್ಷಗಳ ಕಾರ್ಯಕರ್ತರಲ್ಲಿ ಭುಗಿಲೆದ್ದ ಅಸಮಾಧಾನ ಕರಗಿಲ್ಲ. ಹಳೆಯ ಮೀಸಲಾತಿಯೇ ಹೆಚ್ಚಿನ ಕ್ಷೇತ್ರಗಳಲ್ಲಿ ಈ ಬಾರಿಯೂ ಮುಂದುವರಿದಿದೆ ಎಂಬ ಆರೋಪ ಕೇಳಿ ಬಂದಿದೆ. ಅವಕಾಶ ವಂಚಿತರು ಸಾಲು ಸಾಲು ಆಕ್ಷೇಪಗಳನ್ನು ಸಲ್ಲಿಸುತ್ತಿದ್ದಾರೆ.

ತಾಲ್ಲೂಕು ವಿಭಜನೆಯಿಂದ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊಂಡಿರುವ ಎಚ್.ಡಿ.ಕೋಟೆಯಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಮೀಸಲಾತಿ ಇದೆ. ಆದರೆ, ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲದಿರುವುದು ಆ ವರ್ಗಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷರನ್ನು ಸಂಪರ್ಕಿಸಿದಾಗ, ’ಅಸಮಾಧಾನ ಇರುವುದು ನಿಜ’ ಎಂದರು.

‘ಕ್ಯಾತನಹಳ್ಳಿ ಹಿಂದೆ ಹಂಪಾಪುರ ಕ್ಷೇತ್ರದಲ್ಲಿತ್ತು. ಆಗಲೂ ಸಾಮಾನ್ಯ. ಈಗಲೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ಜಿ.ಬಿ.ಸರಗೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಮಹಿಳೆಗೆ ಹೋದ ಬಾರಿ ಮೀಸಲಾಗಿತ್ತು. ಆದರೆ, ಈಗಲೂ ಇದೇ ಮೀಸಲಾತಿ ಮುಂದುವರಿದಿದೆ. ಈ ಬಗೆಯ ಹಲವು ಉದಾಹರಣೆಗಳು ತಾಲ್ಲೂಕಿನಲ್ಲಿ ಸಿಗುತ್ತವೆ. ಹಾಗಾದರೆ, ಅರ್ಹತೆ ಇರುವ ಉಳಿದ ಪಂಗಡಗಳ ಕಾರ್ಯಕರ್ತರು ಏನು ಮಾಡಬೇಕು’ ಎಂದು ಕಾಂಗ್ರೆಸ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಮಾದಪ್ಪ ಪ್ರಶ್ನಿಸುತ್ತಾರೆ.

ಚಿಕ್ಕರೆಯೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಕಳೆದ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹೊಮ್ಮರಗಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ, ಅದರ ತಾಲ್ಲೂಕು ಪಂಚಾಯಿತಿ ಕ್ಷೇತ್ರವೂ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಈ ತಾಲ್ಲೂಕು ಪಂಚಾಯಿತಿ ಕ್ಷೇತ್ರವೂ ಕಳೆದ ಬಾರಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಮೀಸಲಾತಿಯಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಳ್ಳದೇ ಇರುವುದೂ ಕಾರ್ಯಕರ್ತರ ಅಸಮಾಧಾನವನ್ನು ಹೆಚ್ಚಿಸಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ಬಾರಿ ಇದ್ದ 5 ಕ್ಷೇತ್ರಗಳ ಪೈಕಿ 4 ಮಾತ್ರ ಈಗ ಉಳಿದುಕೊಂಡಿದೆ. ಉಳಿದ ಕ್ಷೇತ್ರಗಳನ್ನು ಸರಗೂರು ತಾಲ್ಲೂಕಿಗೆ ಸೇರಿಸಲಾಗಿದೆ. 4 ಕ್ಷೇತ್ರಗಳ ಪೈಕಿ ಸಾಮಾನ್ಯ 1, ಸಾಮಾನ್ಯ ಮಹಿಳೆ 2, ಪರಿಶಿಷ್ಟ ಪಂಗಡಕ್ಕೆ 1 ಮೀಸಲಾಗಿದೆ.

ತಾಲ್ಲೂಕು ಪಂಚಾಯಿತಿಯಲ್ಲಿ ಕಳೆದ ಬಾರಿ 24 ಕ್ಷೇತ್ರಗಳು ಇದ್ದವು. ಈಗ 13 ಸ್ಥಾನಗಳಷ್ಟೇ ಉಳಿದುಕೊಂಡಿವೆ. ಅವುಗಳಲ್ಲಿ ಒಂದು ಕ್ಷೇತ್ರವೂ ಹಿಂದುಳಿದ ವರ್ಗಗಳಿಗೆ ಮೀಸಲಾಗಿಲ್ಲ.

ಕಳೆದ ಬಾರಿ ಜಿಲ್ಲಾ ಪಂಚಾಯಿತಿಯಲ್ಲಿದ್ದ 5 ಕ್ಷೇತ್ರಗಳ ಪೈಕಿ ಜೆಡಿಎಸ್‌ 3ರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್, ಬಿಜೆಪಿ ತಲಾ ಒಂದರಲ್ಲಿ ಜಯ ಗಳಿಸಿದ್ದವು. ತಾಲ್ಲೂಕು ಪಂಚಾಯಿತಿಯಲ್ಲಿ ಮೊದಲ 3 ವರ್ಷ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಇತ್ತು. ನಂತರ, ಸರಗೂರು ಪ್ರತ್ಯೇಕವಾದ ಬಳಿಕ ಅಧಿಕಾರ ಕಾಂಗ್ರೆಸ್ ಪಾಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು