ಭಾನುವಾರ, ಜೂನ್ 20, 2021
29 °C
‘ನನ್ನ ಜನಗಳೊಂದಿಗೆ’ ಸಂವಾದ ಕಾರ್ಯಕ್ರಮದಲ್ಲಿ ನೆನಪುಗಳನ್ನು ಬಿಚ್ಚಿಟ್ಟ ಹಿರಿಯ ಕವಿ

ಅಂದುಕೊಂಡಷ್ಟು ಕೆಲಸ ಮಾಡಿಲ್ಲ, ನೋವಿದೆ: ಸಿದ್ದಲಿಂಗಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ಲೇಖನ ಮಾರ್ಚ್ 8, 2020 ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.

ಮೈಸೂರು: ‘ನಾಲ್ಕೈದು ಜನ ತಳ್ಳಿದ್ದರಿಂದ ಮುಂದೆ ಬಂದುಬಿಟ್ಟೆ. ಸ್ವಭಾವತಃ ನಾನೊಬ್ಬ ಆಲಸಿ. ನಾನು ಬರೆಯಬೇಕಾದಷ್ಟು ಬರೆದಿಲ್ಲ, ಓದಬೇಕಾದಷ್ಟು ಓದಿಲ್ಲ. ಅಂದುಕೊಂಡಷ್ಟು ಕೆಲಸ ಮಾಡಲು ಆಗಿಲ್ಲ. ಅದನ್ನು ನೆನಪಿಸಿಕೊಂಡಾಗ ತುಂಬಾ ನೋವಾಗುತ್ತದೆ’ ಎಂದು ಕವಿ ಡಾ.ಸಿದ್ದಲಿಂಗಯ್ಯ ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಶನಿವಾರ ಆಯೋಜಿಸಿದ್ದ ‘ನನ್ನ ಜನಗಳೊಂದಿಗೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ಬಾಲ್ಯ, ಕಾಲೇಜು ದಿನಗಳ ನೆನಪು, ಹೋರಾಟದ ಜೀವನದಲ್ಲಿ ಎದುರಾದ ಸವಾಲುಗಳು ಹಾಗೂ ಅದನ್ನು ಎದುರಿಸಿದ ರೀತಿಯನ್ನು ನವಿರಾದ ಹಾಸ್ಯದ ಮೂಲಕ ವಿವರಿಸಿದರು.

‘ಸಿದ್ಧಲಿಂಗಯ್ಯ ಅವರಲ್ಲಿ ನಿದ್ದೆ ಅಥವಾ ₹ 1 ಲಕ್ಷದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ ಎಂದು ಕೇಳಿದರೆ ಅವರು ನಿದ್ದೆಯನ್ನು ಆಯ್ಕೆಮಾಡಿಕೊಳ್ಳುವರು’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಒಮ್ಮೆ ಬರೆದಿದ್ದರು. ನನ್ನ ಬಗ್ಗೆ ಅವರು ನಿಜವನ್ನೇ ಬರೆದಿದ್ದಾರೆ. ನಾನು ಇನ್ನಷ್ಟು ಕೆಲಸ ಮಾಡಬೇಕಿತ್ತು. ಇದುವರೆಗೆ ಮಹಾನ್ ಸಾಧನೆ ಏನೂ ಮಾಡಿಲ್ಲ ಎಂದರು.

ನಂಜುಂಡಸ್ವಾಮಿ ತರಬೇತಿ

‘ನನಗೆ ಹೋರಾಟದ ತರಬೇತಿ ಕೊಟ್ಟದ್ದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತು ಬಿ.ಬಸವಲಿಂಗಪ್ಪ. ಹೊಡೆತ ತಿಂದರೂ ಹೋರಾಟ ಕೈಬಿಡದಂತೆ ಅವರು ತರಬೇತಿ ಕೊಟ್ಟರು. ಪೆರಿಯಾರ್ ಅವರು ಬೆಂಗಳೂರಿಗೆ ಬಂದಿದ್ದಾಗ ನಾನು ಹೊಡೆತ ತಿಂದಿದ್ದೆ. ಇದನ್ನೆಲ್ಲಾ ಅನುಭವಿಸಬೇಕು ಎಂದು ಹೇಳಿ ಪೆರಿಯಾರ್‌ ನನ್ನ ಬೆನ್ನು ತಟ್ಟಿದ್ದರು’ ಎಂಬುದನ್ನು ನೆನಪಿಸಿಕೊಂಡರು.

‘ದಲಿತ ಹೋರಾಟದಿಂದ ನಾನು ಬೆಳೆದಿದ್ದೇನೆ. ದಲಿತ ಸಾಹಿತ್ಯ ಜತೆಗೆ ಬಂಡಾಯ ಕೂಡ ಸೇರಿದ್ದರಿಂದ ಇತರ ಜಾತಿಯವರು ನಮ್ಮ ಜತೆ ಸೇರುವಂತಾಯಿತು’ ಎಂದು ತಿಳಿಸಿದರು.

'ರಾತ್ರಿ ಶಾಲೆಗಳನ್ನು ತೆರೆದು ಹಲವರಿಗೆ ಶಿಕ್ಷಣ ನೀಡಲು ಸಾಧ್ಯವಾಗಿವುದು ಮನಸ್ಸಿಗೆ ತೃಪ್ತಿ ನೀಡಿದೆ. ಒಳ್ಳೆಯ ಕೆಲಸವನ್ನು ಊರಲ್ಲಿ, ಕಾಡಲ್ಲಿ ಅಥವಾ ಸ್ಮಶಾನದಲ್ಲೇ ಮಾಡಲಿ, ಅದರ ಪ್ರತಿಫಲ ಒಂದು ದಿನ ಬಂದೇ ಬರುತ್ತದೆ. ನನಗೆ ಅದರ ಅನುಭವ ಆಗಿದೆ' ಎಂದು ಉದಾಹರಣೆಗಳ ಮೂಲಕ ವಿವರಿಸಿದರು.

ಡಾ.ಎಸ್‌.ನರೇಂದ್ರ ಕುಮಾರ್‌ ಅವರು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ಇದನ್ನೂ ಓದಿ... ಹಿರಿಯ ಕವಿ ಸಿದ್ದಲಿಂಗಯ್ಯ ನಿಧನ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.