ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಹೂಡಿಕೆದಾರರ ಸಮಾವೇಶ ಶೀಘ್ರ

ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಭರವಸೆ
Last Updated 23 ಫೆಬ್ರುವರಿ 2020, 15:40 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಭಾಗದ ಕೈಗಾರಿಕಾ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಶೀಘ್ರವೇ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಭಾನುವಾರ ನಡೆದ ಕೈಗಾರಿಕೋದ್ಯಮಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಅಹವಾಲುಗಳನ್ನು ಆಲಿಸಿ, ಬಳಿಕ ಮಾತನಾಡಿದರು.

ಹುಬ್ಬಳ್ಳಿ ಮಾದರಿಯಲ್ಲಿ ಮೈಸೂರು ಭಾಗದಲ್ಲೂ ಬಂಡವಾಳ ಹೂಡಿಕೆದಾರ ಸಮಾವೇಶ ನಡೆಸಲಾಗುವುದು. ಪ್ರಾದೇಶಿಕವಾಗಿ ಕೈಗಾರಿಕಾದ್ಯಮವನ್ನು ಅಭಿವೃದ್ಧಿಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ₹ 72 ಸಾವಿರ ಕೋಟಿ ಮೊತ್ತದ ಒಡಂಬಡಿಕೆಗೆ ಸರ್ಕಾರವು ಸಹಿ ಹಾಕಿದೆ. ರಾಜ್ಯದ ಟೈರ್‌ 2, ಟೈರ್‌ 3 ನಗರಗಳಲ್ಲಿ ₹ 1 ಲಕ್ಷ ಕೋಟಿ ಬಂಡವಾಳ ಹೂಡಲು ಹೂಡಿಕೆದಾರರು ಸಿದ್ಧವಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರದಂತಹ ನಗರಗಳಿಗೆ ಭವಿಷ್ಯದಲ್ಲಿ ಉತ್ತಮ ಬಂಡವಾಳ ಸಿಗಲಿದೆ ಎಂದು ಅವರು ಮಾಹಿತಿ ನೀಡಿದರು.

ಕೈಗಾರಿಕಾ ಕ್ಷೇತ್ರಗಳಿಗೆ ಮೂಲ ಸೌಕರ್ಯ ನೀಡುವುದೂ ಆದ್ಯತೆಯಾಗಿದೆ. ಆದರೆ, ಅತಿ ಸಣ್ಣ – ಪುಟ್ಟ ಸಮಸ್ಯೆಗಳನ್ನು ನಮ್ಮ ಬಳಿ ತರುವ ಬದಲು, ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಕಾರ್ಯಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಶೀಘ್ರವೇ ಕೈಗಾರಿಕಾ ಅದಾಲತ್

‘ಶೀಘ್ರವೇ ಮೈಸೂರಿನಲ್ಲಿ ಕೈಗಾರಿಕಾ ಅದಾಲತ್‌ ನಡೆಸಲಾಗುವುದು. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಯ ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ. ಅವನ್ನು ಬಗೆಹರಿಸಬೇಕಿದೆ. ಬೆಂಗಳೂರಿನಲ್ಲಿ ಮೊದಲು ಅದಾಲತ್‌ ನಡೆಸುತ್ತೇವೆ’ ಎಂದರು.

ಅಂತೆಯೇ, ರಾಜ್ಯದಲ್ಲಿ ಒಟ್ಟು ನಾಲ್ಕು ಕೈಗಾರಿಕಾ ಉಪನಗರ ಸ್ಥಾಪನೆಗೆ ಚಿಂತನೆ ನಡೆದಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಮೈಸೂರು ಕೈಗಾರಿಕೆಗಳ ಸಂಘ, ಭಾರತೀಯ ಕೈಗಾರಿಕಾ ಒಕ್ಕೂಟದ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್‌.ನಾಗೇಂದ್ರ, ಕಾಂಗ್ರೆಸ್‌ ಮುಖಂಡ ವಾಸು, ಕೈಗಾರಿಕೋದ್ಯಮಿಗಳಾದ ಸುರೇಶ್‌ ಕುಮಾರ್ ಜೈನ್, ಸುಧಾಕರ ಎಸ್.ಶೆಟ್ಟಿ ಭಾಗವಹಿಸಿ ಮಾತನಾಡಿದರು.

ಉಂಡವಾಡಿ ಯೋಜನೆಗೆ ₹ 25 ಕೋಟಿ

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಉಂಡವಾಡಿ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಯೋಜನೆಗಾಗಿ ₹ 25 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ಕೈಗಾರಿಕಾ ಪ್ರದೇಶಗಳಿಗೆ ನೀರಿನ ಕೊರತೆ ಇದೆ. ಇದನ್ನು ಕೂಡಲೇ ಬಗೆಹರಿಸಬೇಕು ಎಂದು ದೇವೇಗೌಡ ಮನವಿ ಮಾಡಿದರು.

ದಂಡ ಹಾಕದಂತೆ ಮನವಿ

ವಿವಿಧ ಯೋಜನೆಗಳನ್ನು ಪೂರ್ಣಗೊಳಿಸದೇ ಇರುವ ಕಾರಣಕ್ಕೆ ‘ಕೆಐಎಡಿಬಿ’ ಉದ್ಯಮಿಗಳ ಮೇಲೆ ದೊಡ್ಡ ಪ್ರಮಾಣದ ದಂಡ ವಿಧಿಸಿದೆ. ಇದನ್ನು ಹಿಂಪಡೆಯಬೇಕು ಎಂದು ಕೈಗಾರಿಕೋದ್ಯಮಿಗಳು ಒತ್ತಾಯಿಸಿದರು.

ಯಾವುದೇ ಯೋಜನೆ ತಡವಾಗುವುದಕ್ಕೆ ಕೈಗಾರಿಕೋದ್ಯಮಿಗಳು ಕಾರಣ ಇರುವುದಿಲ್ಲ. ‘ಕೆಐಎಡಿಬಿ’ ನೀತಿಗಳು ಕಾರಣವಿದೆ. ಈ ಹಿನ್ನೆಲೆಯಲ್ಲಿ ದಂಡ ವಿಧಿಸಕೂಡದು ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎ.ಎಸ್‌.ಸತೀಶ್‌ ಮನವಿ ಮಾಡಿದರು.

ಅಂತೆಯೇ, ಕೈಗಾರಿಕೆಗಳ ಮೇಲೆ ಗ್ರಾಮ ಪಂಚಾಯಿತಿಗಳೂ ಹೆಚ್ಚಿನ ತೆರಿಗೆ ವಿಧಿಸುತ್ತಿವೆ. ಇದನ್ನು ಕಡಿಮೆಗೊಳಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT