ಶನಿವಾರ, ಮೇ 15, 2021
25 °C

ಆಮ್ಲಜನಕ ಕೊರತೆಯಿಂದ ಸಾವು: ಜಿಲ್ಲಾಧಿಕಾರಿಗಳ ಅಮಾನತು ಮಾಡಿ–ಸಾ.ರಾ.ಮಹೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಶಾಸಕ ಸಾ.ರಾ.ಮಹೇಶ್‌

ಮೈಸೂರು: ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಅಮಾಯಕರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಮೈಸೂರು ಮತ್ತು ಚಾಮರಾಜನಗರದ ಜಿಲ್ಲಾಧಿಕಾರಿಗಳನ್ನು ಹಾಗೂ ಅಸಿಸ್ಟೆಂಟ್ ಡ್ರಗ್‌ ಕಂಟ್ರೋಲರ್‌ ಅನ್ನು ಅಮಾನತು ಮಾಡಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತಗಳ ನಡುವಿನ ಸಮನ್ವಯದ ಕೊರತೆಯಿಂದ ಈ ದುರಂತ ಸಂಭವಿಸಿದೆ. ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡದೆ ಏನು ತನಿಖೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.

‘ಘಟನೆಯಲ್ಲಿ ಮೂವರು ಸತ್ತಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಹಾಗಾದರೆ ಅದು ಸಾವಲ್ಲವೇ? ಚಾಮರಾಜನಗರದ ಆಸ್ಪತ್ರೆಗೆ ಮೈಸೂರಿನಿಂದ ಆಮ್ಲಜನಕ ಪೂರೈಕೆ ಆಗಿಲ್ಲ. ಅದು ಗೊತ್ತಿದ್ದರೂ ಮೈಸೂರಿನ ಡ್ರಗ್‌ ಕಂಟ್ರೋಲರ್‌ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರದಿರುವುದು ದೊಡ್ಡ ಲೋಪ’ ಎಂದರು.

ಮಂಡ್ಯ ಮತ್ತು ಚಾಮರಾಜನಗರಕ್ಕೆ ಆಮ್ಲಜನಕ ಕೊಡಬಾರದು ಎಂದು ಡ್ರಗ್‌ ಕಂಟ್ರೋಲರ್‌ಗೆ ಯಾರು ಒತ್ತಡ ಹಾಕಿದ್ದರು ಎಂಬುದು ಬಹಿರಂಗವಾಗಲಿ. ಇದು ಜನರ ಜೀವನದ ಪ್ರಶ್ನೆ. ಇಂತಹ ಉದ್ಧಟತನದ ಅಧಿಕಾರಿಗಳನ್ನು ಇಟ್ಟುಕೊಂಡು ಜನರ ಜೀವನ ಜೊತೆ ಆಟ ಆಡಬೇಡಿ ಎಂದು ಕಿಡಿಕಾರಿದರು.

ಇದನ್ನೂ ಓದಿ– ಸಂಪಾದಕೀಯ: ಸಾವಿನ ಬಾಗಿಲಿಗೆ ಬಲವಂತದಿಂದ ತಳ್ಳಬೇಡಿ, ಪ್ರಾಣವಾಯು ಒದಗಿಸಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು