ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮನ್ಯು ಹಾಗೂ ನನ್ನ ಸಂಬಂಧ ಒಂದು ಜೀವ, ಎರಡು ದೇಹ ಇದ್ದಂತೆ: ಮಾವುತ ವಸಂತ

ಭಾರ ಹೊರುವವಳು ಚಾಮುಂಡಿ..!
Last Updated 15 ಸೆಪ್ಟೆಂಬರ್ 2021, 3:07 IST
ಅಕ್ಷರ ಗಾತ್ರ

ಮೈಸೂರು: ‘ಲಕ್ಷಾಂತರ ಜನ ಜಂಬೂಸವಾರಿ ವೀಕ್ಷಿಸುತ್ತಿರುತ್ತಾರೆ. ಎಲ್ಲರ ಕಣ್ಣು ಅಂಬಾರಿ, ಅಭಿಮನ್ಯು ಹಾಗೂ ನನ್ನ ಮೇಲೆ ಇರುತ್ತದೆ. ಆದರೆ, ನಾನು ಮಾತ್ರ ಚಾಮುಂಡಿ ತಾಯಿಗೆ ಕೈಮುಗಿದು ಆಕೆ ಮೇಲೆ ಭಾರ ಹಾಕಿಬಿಡುತ್ತೇನೆ. ಆಕೆಯೇ ಅಂಬಾರಿ ಮುನ್ನಡೆಸುತ್ತಾಳೆ...‌’

–ದಸರಾ ಜಂಬೂಸವಾರಿಯಲ್ಲಿ ಸತತ ಎರಡನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು ಆನೆ ಮುನ್ನಡೆಸಲು ಸಿದ್ಧವಾಗುತ್ತಿರುವ ಮಾವುತ ವಸಂತ ಅವರ ಮನದಾಳದ ಮಾತಿದು.

‘ಮತ್ತೊಮ್ಮೆ ಅಂಬಾರಿ ಆನೆ ಮುನ್ನಡೆಸಲು ಖುಷಿಯಿಂದ ಎದುರು ನೋಡುತ್ತಿದ್ದೇನೆ. ಪ್ರತಿ ಬಾರಿಯೂ ಸವಾಲು ಎದುರಾಗುವುದು ಸಹಜ. ಆದರೆ, ಅಭಿಮನ್ಯು ಮೇಲೆ ಭರವಸೆ ಇದೆ. ಸೊಂಡಿಲಿಗೆ ಮುತ್ತನ್ನಿಟ್ಟು, ಅದರ ಮೇಲೇರಿ ಯಾರಿಗೂ ಯಾವುದೇ ತೊಂದರೆ ಕೊಡಬೇಡ ತಾಯಿ ಎಂದು ಚಾಮುಂಡೇಶ್ವರಿ ಬೇಡಿಕೊಳ್ಳುತ್ತೇನೆ’ ಎಂದು ‘ಪ್ರಜಾವಾಣಿ’ ಜೊತೆ ಮಾತಿಗಿಳಿದರು.

ನಾಡದೇವತೆ ಚಾಮುಂಡೇಶ್ವರಿ ತಾಯಿ ವಿರಾಜಮಾನವಾಗಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಕ್ಯಾಪ್ಟನ್‌ ಅಭಿಮನ್ಯು ಅ.15ರಂದು ಹೊರಲಿದ್ದಾನೆ.

ಆರಂಭದಲ್ಲಿ ಮಾವುತ ಸಣ್ಣಪ್ಪ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆನಂತರ ಅವರ ಪುತ್ರ ವಸಂತ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

‘ಹಲವಾರು ವರ್ಷಗಳಿಂದ ದಸರೆಯಲ್ಲಿ ಅಭಿಮನ್ಯು ಆನೆ ಮಾವುತನಾಗಿ ಭಾಗವಹಿಸುತ್ತಿದ್ದೇನೆ. ಒಮ್ಮೆಯಾದರೂ ನನ್ನ ಆನೆಗೂ ಅಂಬಾರಿ ಹೊರುವ ಸೌಭಾಗ್ಯ ಸಿಗಲಿದೆ ಎಂಬ ಕನಸಿತ್ತು. ಆದರೆ, ಯಾರ ಬಳಿಯೂ ಅದನ್ನು ಹೇಳಿರಲಿಲ್ಲ. ಕಳೆದ ವರ್ಷ ಅದು ನನಸಾಯಿತು’ ಎಂದರು.

21 ವರ್ಷಗಳಿಂದ ನಾಡಹಬ್ಬ ದಸರೆಯ ವಿಶೇಷ ಆಕರ್ಷಣೆ ಎನಿಸಿರುವ ಅಭಿಮನ್ಯು, ಜನರ ಪ್ರೀತಿಗೆ ಪಾತ್ರರಾಗಿರುವುದು ಮಾತ್ರವಲ್ಲ; ಕಾಡಾನೆಗಳ ಯಶಸ್ವಿ ಕಾರ್ಯಾಚರಣೆಗೂ ಎತ್ತಿದ ಕೈ. ಹೀಗಾಗಿ ಅಭಿಮನ್ಯು ಅರಣ್ಯ ಇಲಾಖೆಯಲ್ಲಿ ‘ಎ.ಕೆ 47’ ಎಂದೇ ಪ್ರಸಿದ್ಧ. 55 ವರ್ಷ ವಯಸ್ಸಿನ ಈ ಸಲಗವನ್ನು 1977ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಳ್ಳ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು.

ಕುಟುಂಬದವರಿಗಿಲ್ಲ ಅವಕಾಶ:ಪ್ರತಿ ನಾಡಹಬ್ಬಕ್ಕೆ ಮಾವುತರು, ಕಾವಾಡಿಗರ ಕುಟುಂಬಕ್ಕೂ ಜಿಲ್ಲಾಡಳಿತ ಆಹ್ವಾನ ನೀಡುತಿತ್ತು. ಆದರೆ, ಕೋವಿಡ್‌–19 ಕಾರಣ ಈ ಬಾರಿಯೂ ಕಾಡಿನ ಮಕ್ಕಳಿಗೆ ದಸರೆ ಸಂಭ್ರಮ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿಲ್ಲ. ಪ್ರತಿ ಆನೆ ಜೊತೆ ಮಾವುತ, ಕಾವಾಡಿಗ ಹಾಗೂ ಸಹಾಯಕ ಸಿಬ್ಬಂದಿ ಮಾತ್ರ ಇದ್ದಾರೆ.

ಒಂದಿಷ್ಟು ನಿರಾಸೆಯೂ...: ಅಭಿಮನ್ಯು ಆನೆಗೆ ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರುವ ಅವಕಾಶವೇನೋ ಒಲಿದಿದೆ. ಆದರೆ, ಅದು ಅರಮನೆ ಆವರಣಕ್ಕಷ್ಟೇ ಸೀಮಿತವಾಗಿದೆ.

ಕಳೆದ ವರ್ಷ ಮೊದಲ ಬಾರಿ ಈ ಆನೆಗೆ ಅಪೂರ್ವ ಅವಕಾಶ ಒಲಿದಿತ್ತು. ಕೋವಿಡ್‌ ಕಾರಣ ಸರಳವಾಗಿ ಆಚರಣೆ ಮಾಡಿದ್ದರಿಂದ ಜಂಬೂಸವಾರಿಯು ಅರಮನೆ ಆವರಣದಲ್ಲಿ ವರಾಹ ದ್ವಾರದಿಂದ ಬಲರಾಮ ದ್ವಾರದವರೆಗೆ ಕೇವಲ 300 ಮೀಟರ್‌ ದೂರ ಸಾಗಿ ಕೊನೆಗೊಂಡಿತು. ಈ ಬಾರಿಯೂ ಅರಮನೆಗಷ್ಟೇ ಸೀಮಿತವಾಗಿದೆ. ಈ ಹಿಂದೆ ಮೆರವಣಿಗೆಯು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುತಿತ್ತು.

*
ಅಭಿಮನ್ಯು ಹಾಗೂ ನನ್ನ ಸಂಬಂಧ ಒಂದು ಜೀವ, ಎರಡು ದೇಹ ಇದ್ದಂತೆ. ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಮಗುವಿನಂತೆ ಸಾಕುತ್ತಿದ್ದೇನೆ.
-ವಸಂತ, ಅಭಿಮನ್ಯು ಮಾವುತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT