ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪರ ಮಿದುಳು, ನಾಲಿಗೆಗೆ ಲಿಂಕ್‌ ತಪ್ಪಿಹೋಗಿದೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ

Last Updated 13 ಆಗಸ್ಟ್ 2021, 11:58 IST
ಅಕ್ಷರ ಗಾತ್ರ

ಮೈಸೂರು: ‘ಈಶ್ವರಪ್ಪ ಅವರ ಮಿದುಳು ಮತ್ತು ನಾಲಿಗೆಗೆ ಲಿಂಕ್‌ ತಪ್ಪಿಹೋಗಿರುವುದು ಮತ್ತೆ ಸಾಬೀತಾಗಿದೆ. ಕಾಡಿ ಬೇಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಅವರು ಬಿಜೆಪಿ ನಾಯಕರ ಮೇಲಿನ ಕೋಪವನ್ನು ಕಾಂಗ್ರೆಸ್‌ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಹುಚ್ಚುಚ್ಚಾಗಿ ಮಾತನಾಡುವುದನ್ನು ಬಿಡಲಿ’ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿಕಾರಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಈಶ್ವರಪ್ಪ ಅವರ ಪುತ್ರ ಕಾಂತೇಶ್‌, ಬೆಂಗಳೂರಿನಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ನಾಲ್ಕು ಕಡೆ ನಿವೇಶನ ಖರೀದಿಸಿದ್ದಾರೆ. ಆ ದುಡ್ಡು ಎಲ್ಲಿಂದ ಬಂತು? ಯಾವೆಲ್ಲಾ ಕೈಗಾರಿಕೆ ಸ್ಥಾಪಿಸುತ್ತೀರಿ ಎಂಬುದನ್ನು ಬಹಿರಂಗಪಡಿಸಿ. ಸರ್ಕಾರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ನಿಮ್ಮ ಮಗನ ಹೆಸರಿಗೆ ಆಸ್ತಿ ನೋಂದಣಿ ಮಾಡಿಸಿದ್ದೀರಿ. ಈ ಬಗ್ಗೆ ಇ.ಡಿ ಹಾಗೂ ಐ.ಟಿ ತನಿಖೆ ನಡೆಯಲಿ’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್‌ನವರು ಬೇಕಾದರೆ ನೆಹರೂ ಹುಕ್ಕಾ ಬಾರ್‌ ತೆರೆಯಲಿ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಈ ರೀತಿ ಹಿಟ್‌ ಆ್ಯಂಡ್ ರನ್‌ ಹೇಳಿಕೆ ಕೊಡುವುದನ್ನು ನಿಲ್ಲಿಸದಿದ್ದರೆ, ನೀವು ಹೋದಲ್ಲೆಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಕುಣಿಗಲ್‌ ಬಳಿ 2019 ರಲ್ಲಿ ಕುಡಿದು ವಾಹನ ಓಡಿಸಿ ಇಬ್ಬರ ಸಾವಿಗೆ ಕಾರಣರಾಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ನೆಹರೂ, ಇಂದಿರಾ ಮತ್ತು ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಎಂದು ಹರಿಹಾಯ್ದರು.

‘ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಸ್ವತಃ ಬಿಂಬಿಸಿಕೊಂಡಿದ್ದ ನಿಮಗೆ ಮಂತ್ರಿ ಸ್ಥಾನವೂ ಸಿಕ್ಕಿಲ್ಲ. ಬಿಜೆಪಿ ವರಿಷ್ಠರ ಮೇಲಿನ ಕೋಪವನ್ನು ಕಾಂಗ್ರೆಸ್‌ ವಿರುದ್ಧ ಹೇಳಿಕೆಗಳನ್ನು ನೀಡಿ ತೀರಿಸುತ್ತಿದ್ದೀರಿ. ಮೇಕೆದಾಟು ವಿಚಾರದಲ್ಲಿ ‘ನಾವು ಭಾರತೀಯರು, ಆ ಮೇಲೆ ಕನ್ನಡಿಗರು’ ಎಂದಿರುವ ನಿಮಗೆ ಮಾನ, ಮರ್ಯಾದೆ ಇದೆಯೇ? ರಾಜ್ಯಕ್ಕೆ ಮೋಸ ಮಾಡಿ ತಮಿಳನಾಡಿನಲ್ಲಿ ಬಿಜೆಪಿ ಬೆಳೆಸುವ ವ್ಯವಸ್ಥಿತ ಸಂಚು ಮಾಡಲಾಗಿದೆ. ಬಿಜೆಪಿಯ ಇಬ್ಬಗೆ ನೀತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT