ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈನಿ ಸ್ಟಾಫ್ ನರ್ಸ್‌ಗಳಿಂದ ಸಾಂಕೇತಿಕ ಪ್ರತಿಭಟನೆ

Last Updated 6 ಜುಲೈ 2020, 15:27 IST
ಅಕ್ಷರ ಗಾತ್ರ

ಮೈಸೂರು: ಕೆ.ಆರ್. ಆಸ್ಪತ್ರೆಯ ಟ್ರೈನಿ ಸ್ಟಾಫ್‌ ನರ್ಸ್‌ಗಳು ಗುತ್ತಿಗೆ ಸಿಬ್ಬಂದಿಯನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಸೋಮವಾರ ಆಸ್ಪತ್ರೆಯ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

‘ಈ ಕುರಿತು ಸಲ್ಲಿಸಿದ ಮನವಿಗೆ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಡೀನ್ ನಂಜರಾಜ್ ಅವರು ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಇವರು, ಒಂದೈದು ನಿಮಿಷಗಳ ಕಾಲ ಮೌನ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.

‘ಸಂಜೆಯ ವೇಳೆ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಶಂಕಿತ ಕೋವಿಡ್ ಪೀಡಿತರ ಆರೈಕೆ ಮಾಡಲೇಬೇಕು ಎಂದು ಒತ್ತಡ ಹಾಕಿದರು. ರಕ್ಷಣೆಗೆ ವಿಮಾ ಸೌಲಭ್ಯವನ್ನಾದರೂ ಕೊಡಿ ಎಂಬ ಬೇಡಿಕೆಗೆ ಪಿಪಿಇ ಕಿಟ್ ಮಾತ್ರವೇ ಕೊಡುತ್ತೇವೆ. ಕೋವಿಡ್ ಕರ್ತವ್ಯ ನಿರಾಕರಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸ್ಟಾಫ್ ನರ್ಸ್‌ವೊಬ್ಬರು ತಿಳಿಸಿದರು.

ಇದರಿಂದ ಕೋಪಗೊಂಡಿರುವ ಸುಮಾರು 150 ಟ್ರೈನಿ ಸ್ಟಾಫ್ ನರ್ಸ್‌ಗಳು ಮಂಗಳವಾರದಿಂದಲೇ ಕಪ್ಪುಪಟ್ಟಿ ಧರಿಸಿ ಅನಿರ್ದಿಷ್ಟಾವಧಿ ಕರ್ತವ್ಯ ನಿರ್ವಹಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಬಯಸದ ಟ್ರೈನಿ ಸ್ಟಾಫ್ ನರ್ಸ್ ಒಬ್ಬರು, ‘ನಮಗೆ ₹ 10 ಸಾವಿರ ಅಷ್ಟೇ ವೇತನ ಸಿಗುತ್ತಿದೆ. ನಮ್ಮನ್ನು ಗುತ್ತಿಗೆ ಆಧಾರದ ಸಿಬ್ಬಂದಿ ಎಂದು ಪರಿಗಣಿಸುವಂತೆ ಮಾಡಿದ ಮನವಿಯನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವವನ್ನೇ ಸಲ್ಲಿಸಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT