ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಂಬುಧಿ ಕೆರೆಗೆ ಕೆಆರ್‌ಎಸ್‌ ಹಿನ್ನೀರು

ಕೊಳವೆ ಮೂಲಕ ನೀರು ತಂದು ತುಂಬಿಸುವ ಕಾರ್ಯ: ₹ 50 ಕೋಟಿ ಯೋಜನೆ
Last Updated 13 ಮೇ 2019, 20:27 IST
ಅಕ್ಷರ ಗಾತ್ರ

ಮೈಸೂರು: ಸಂಪೂರ್ಣ ಬತ್ತಿ ಹೋಗಿರುವ ಐತಿಹಾಸಿಕ ಲಿಂಗಾಂಬುಧಿ ಕೆರೆ ಒಡಲು ತುಂಬಿಸಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ.

ಈ ನಿಟ್ಟಿನಲ್ಲಿ ಕೆಆರ್‌ಎಸ್‌ ಜಲಾಶಯದ ಹಿನ್ನೀರನ್ನು ಏರುಕೊಳವೆ ಮೂಲಕ ಈ ಕೆರೆಗೆ ಹರಿಸಲು ಯೋಜನೆ ರೂಪಿಸಿದೆ. ಅದಕ್ಕಾಗಿ ₹ 50 ಕೋಟಿ ಮೊತ್ತದ ಕ್ರಿಯಾ ಯೋಜನೆ ತಯಾರಿಸಿದ್ದು, ಜುಲೈನಲ್ಲಿ ಕಾಮಗಾರಿ ಆರಂಭವಾಗಲಿದೆ.

ಇಲವಾಲ ಹೋಬಳಿಯ ಆನಂದೂರು ಗ್ರಾಮದ ಬಳಿ ಸ್ಥಾಪಿಸಿರುವ ಏತ ನೀರಾವರಿ ಯೋಜನೆ ಮೂಲಕ ಒಟ್ಟು 16 ಕೆರೆಗಳಿಗೆ ನೀರು ತುಂಬಿಸಲು ಇಲಾಖೆ ಹೆಜ್ಜೆ ಇಟ್ಟಿದೆ. ಅದರಲ್ಲಿ ಕೊನೆಯ ಕೆರೆ ಲಿಂಗಾಂಬುಧಿ. 26.4 ಕಿ.ಮೀ ದೂರದಿಂದ ನೀರು ತರಲು ನಿರ್ಧರಿಸಲಾಗಿದೆ.

‘ಲಿಂಗಾಂಬುಧಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ಲಭಿಸಿದ್ದು, ಈಗ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ 80 ಅಡಿ ನೀರು ಇದ್ದರೂ ಮೇಲೆತ್ತಬಹುದು. 104 ದಿನ ನೀರು ಮೇಲೆತ್ತಿ ಕೆರೆಗಳಿಗೆ ಹರಿಸಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ಮರಿಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೆರೆಯು ಅರಣ್ಯ ಇಲಾಖೆ ಜಾಗದಲ್ಲಿ ಇದ್ದರೂ ಸಣ್ಣ ನೀರಾವರಿ ಇಲಾಖೆ ಸುಪರ್ದಿಗೆ ಸೇರಿದೆ. ಹೀಗಾಗಿ, ಇಲಾಖೆಯು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದೆ.

ಮಳೆ ಅಭಾವ ಹಾಗೂ ಹೆಚ್ಚಿರುವ ಬಿಸಿಲಿನ ತಾಪದ ಜೊತೆಗೆ ಕಳೆದ ವರ್ಷ ಏರಿ ಒಡೆದು ಹಾಕಿದ್ದರಿಂದ ಲಿಂಗಾಂಬುಧಿ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಸುತ್ತಮುತ್ತ ಬಡಾವಣೆಗಳು ನಿರ್ಮಾಣವಾಗಿದ್ದು, ಕೆರೆಗೆ ನೀರು ಪೂರೈಸುವ ರಾಜಕಾಲುವೆಗಳು ಒತ್ತುವರಿ ಆಗಿವೆ. ಇದರಿಂದ ಜಲಚರಗಳಿಗೂ, ಪ್ರಾಣಿ ಪ‍ಕ್ಷಿಗಳಿಗೂ ತೊಂದರೆ ಉಂಟಾಗಿದೆ. ಕೆರೆಯ ದಡದಲ್ಲಿ ತ್ಯಾಜ್ಯ ಸುರಿಯಲಾಗಿದೆ.

ಕೆರೆಯ ಹೂಳೆತ್ತಿಸಿ ನೀರು ಸಂಗ್ರಹವಾಗುವಂತೆ ಮಾಡಿ ಲಿಂಗಾಂಬುಧಿ ಕೆರೆಯನ್ನು ಅಭಿವೃದ್ಧಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಈಚೆಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

‌‘ಮಳೆ ಬಂದರೂ ಈ ಕೆರೆ ತುಂಬುವುದು ಕಷ್ಟ. ಮಳೆ ನೀರು ಹರಿದು ಬರುವ ಮಾರ್ಗಗಳು ಮುಚ್ಚಿ ಹೋಗಿರುವ ಕಾರಣ ಕೆರೆಗೆ ಜಲಮೂಲಗಳೇ ಇಲ್ಲವಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ನೀರು ತುಂಬಿಸಿದರೆ ಸುತ್ತಮುತ್ತ ಅಂತರ್ಜಲ ಮಟ್ಟ ಸುಧಾರಿಸಬಹುದು. ಜೊತೆಗೆ ಜಾನುವಾರುಗಳಿಗೆ, ಪಕ್ಷಿಗಳಿಗೆ ಕುಡಿಯಲು ನೀರು ಲಭ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

ಜಿ.ಟಿ.ದೇವೇಗೌಡ ಅವರ ಸೂಚನೆ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಚೆಗೆ ಕೆರೆ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಆದರೆ, ಯಾವ ಅನುದಾನದಡಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂಬ ವಿಚಾರದಲ್ಲಿ ಗೊಂದಲ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT