ಮಂಗಳವಾರ, ಜುಲೈ 27, 2021
26 °C

ಖರೀದಿ ಅವ್ಯವಹಾರದಲ್ಲಿ ಎಸ್.ಆರ್.ವಿಶ್ವನಾಥ್ ಕೈವಾಡ– ಲಕ್ಷ್ಮಣ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೋವಿಡ್‌ ರೋಗಿಗಳಿಗಾಗಿ ಹಾಸಿಗೆ, ದಿಂಬು ಖರೀದಿ ಅವ್ಯವಹಾರದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ವೆಂಟಿಲೇಟರ್ ಖರೀದಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸಂಬಂಧಿ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಅವರ ಕೈವಾಡ ಇದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ  ಗುರುವಾರ ಇಲ್ಲಿ ಆರೋಪಿಸಿದರು. 

‘ಹಾಸಿಗೆ, ದಿಂಬು ಪಡೆಯಲು 100 ದಿನಗಳ ಬಾಡಿಗೆಗಾಗಿ ₹ 240 ಕೋಟಿ ವೆಚ್ಚ ಮಾಡಲಾಗಿದೆ. ಇವುಗಳನ್ನು ಪೂರೈಸಲು‌ ಬೆಂಗಳೂರಿನ ಕೆಲ ಸಚಿವರ ಸಂಬಂಧಿಕರಿಗೆ ಗುತ್ತಿಗೆ ನೀಡಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ತಿರುವನಂತಪುರದಲ್ಲಿ ಕೇವಲ 2 ವರ್ಷಗಳಿಂದಷ್ಟೇ ಉತ್ಪಾದನೆ ಆರಂಭಿಸಿರುವ ಎಚ್‌ಎಲ್‌ಎಲ್‌ ಕಂಪನಿಯಿಂದ 680 ವೆಂಟಿಲೇಟರ್‌ ಖರೀದಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

‘ಕಂದಾಯ ಸಚಿವ ಆರ್.ಅಶೋಕ ಅವರು ಕೇವಲ ಒಂದು ಇಲಾಖೆಯ ಕುರಿತು ಮಾತ್ರವೇ ಮಾಹಿತಿ ನೀಡಿದ್ದಾರೆ. ನಮಗೆ ಖರೀದಿ ಪ್ರಕ್ರಿಯೆ ಸಂಪೂರ್ಣ ವಿವರ ಬೇಕು’ ಎಂದು ಆಗ್ರಹಿಸಿದರು.

ದಾಖಲೆ ಬಹಿರಂಗಪಡಿಸಲಿ– ವಿಶ್ವನಾಥ್ ಸವಾಲು
ಆರೋಪ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಸ್.ಆರ್.ವಿಶ್ವನಾಥ್, ‘ನನ್ನ ಕೈವಾಡ ಏನು ಎಂಬುದರ ಕುರಿತು ದಾಖಲಾತಿಗಳನ್ನು ಬಹಿರಂಗಪಡಿಸಬೇಕು. ಸುಮ್ಮನೇ ಕುಳಿತು ಮಾತನಾಡುವುದು ಸರಿಯಲ್ಲ. ಒಂದು ವೇಳೆ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಇಲ್ಲದಿದ್ದರೆ ಲಕ್ಷ್ಮಣ್ ಅವರು ಬಿಜೆಪಿ ಸೇರಲಿ’ ಎಂದು ಸವಾಲು ಹಾಕಿದರು.

ಸತ್ಯಕ್ಕೆ ದೂರ– ಬಸವರಾಜ ಬೊಮ್ಮಾಯಿ
ಆರೋಪ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ವೆಂಟಿಲೇಟರ್‌ನ್ನು ಕೇಂದ್ರ ಸರ್ಕಾರ ಪೂರೈಸಿದೆ, ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ. ಲಕ್ಷ್ಮಣ್ ಹೇಳಿರುವ ಮಂಜುನಾಥ್ ನನ್ನ ಸಂಬಂಧಿಕರಲ್ಲ. ನಾನು ಕೋವಿಡ್ ಸಂಬಂಧಪಟ್ಟ ಖರೀದಿ ವ್ಯವಹಾರದ ಯಾವುದೇ ಸಮಿತಿಯಲ್ಲೂ ಇಲ್ಲ. ಸುಮ್ಮನೇ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಬಾರದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು