ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಾಲೀಕರಿಗೆ ಬೆದರಿಕೆ: ಸಾ.ರಾ.ಮಹೇಶ್‌ ಆಡಿಯೊ ವೈರಲ್

ಜಮೀನು ಮಾಲೀಕ–ಸಾ.ರಾ. ಮಹೇಶ್‌ ಸಂಭಾಷಣೆ
Last Updated 6 ಜೂನ್ 2021, 21:51 IST
ಅಕ್ಷರ ಗಾತ್ರ

ಮೈಸೂರು: ಜಮೀನಿನ ಮಾಲೀಕ ಗಣಪತಿ ರೆಡ್ಡಿ ಎಂಬುವವರ ಜೊತೆ ಶಾಸಕ ಸಾ.ರಾ.ಮಹೇಶ್‌ ನಡೆಸಿದ ಮೊಬೈಲ್ ಸಂಭಾಷಣೆಯ ಆಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡುತ್ತಿದೆ.

‌ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬೆನ್ನಲ್ಲೇ, ಈ ಆಡಿಯೊ ವೈರಲ್ ಆಗಿದೆ.

ರೆಡ್ಡಿ ಅವರಿಗೆ ಮೈಸೂರು ತಾಲ್ಲೂಕಿನ ಕೇರ್ಗಳ್ಳಿಯ ಸರ್ವೇ ನಂ.115ರ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತರುವಂತೆ, ಶಾಸಕ ಗದರುವ ದನಿಯಲ್ಲಿ ಹೇಳುತ್ತಾರೆ. ‌‘ನಾನು ಸಾ.ರಾ.ಮಹೇಶ್ ಮಾತಾಡ್ತಾ ಇದ್ದೀ‌ನಿ’ ಎಂದು ಸಂಭಾಷಣೆ ಆರಂಭವಾಗುತ್ತದೆ. ‘ಈ ಭೂಮಿ ನಿಮ್ಮದಲ್ಲ; ಮಂಜು ಎಂಬುವವರಿಗೆ ಸೇರಿದ್ದು. ನಿಮ್ಮ ಹುಡುಗನಿಗೆ ಫೆನ್ಸ್ ಹಾಕಿದಾಗಲೇ ದಾಖಲೆ ತಂದು ತೋರಿಸುವಂತೆ ಹೇಳಿದ್ದೆ. ಆದರೂ ಕೇಳಿಲ್ಲ. ನಾಳೆ ದಾಖಲೆ ತೆಗೆದುಕೊಂಡು ಬನ್ನಿ’ ಎನ್ನುತ್ತಾರೆ. ಅದಕ್ಕೆ ರೆಡ್ಡಿ, ‘ನೀವೇನು ಜಡ್ಜಾ?’ ಎಂದು ಪ್ರಶ್ನಿಸುತ್ತಾರೆ.

ಆಗ ರೆಡ್ಡಿ, ‘ನಮ್ಮ ಪ್ರಾಪರ್ಟಿಗೇ ಪೇಪರ್ ತಗೊಂಡು ಬನ್ನಿ ಎನ್ನಲುನೀವು ಜಡ್ಜಾ‘ ಎಂದು ಮತ್ತೆ ಕೇಳುತ್ತಾರೆ. ಆಗ ಸಾ.ರಾ.ಮಹೇಶ್, ‘ರೀ ಅದು ನಂದು ರೀ ಪ್ರಾಪರ್ಟಿ’ ಎನ್ನುತ್ತಾರೆ.

ತಮ್ಮ ದಾಖಲೆ ಸರಿಯಾಗಿದೆ ಎಂದು ರೆಡ್ಡಿ ಹೇಳಿದಾಗ, ‘ನಾಳೆ ಡಾಕ್ಯುಮೆಂಟ್‌ ತನ್ನಿ. ಯಾರದೆಂದು ಗೊತ್ತಾಗುತ್ತೆ’ ಎಂದು ಶಾಸಕರು ಹೇಳುತ್ತಾರೆ.

ಸಂಭಾಷಣೆಯ ಕೊನೆಯಲ್ಲಿ ರೆಡ್ಡಿ ಅವರು, ಈ ವಿಷಯವನ್ನು ಮಾಧ್ಯಮದವರಿಗೆ ಹೇಳುವುದಾಗಿ ಹೇಳಿದಾಗ, ಶಾಸಕರು, ‘ಮಾಧ್ಯಮದವರಿಗಲ್ಲ; ಅವರಪ್ಪನಿಗೆ ಹೇಳು’ ಎನ್ನುತ್ತಾರೆ.

ಈ ಆಡಿಯೊ ಬಿಡುಗಡೆ ಮಾಡಿರುವ ಮಾಹಿತಿ ಹಕ್ಕು ಕಾರ್ಯಕರ್ತ ಗಂಗರಾಜು, ‘ಈ ಸಂಭಾಷಣೆ ಕೇರ್ಗಳ್ಳಿ ಸಮೀಪದ ಎರಡು ಎಕರೆ ಭೂಮಿಯ ಮಾಲೀಕ ಗಣಪತಿ ರೆಡ್ಡಿ ಹಾಗೂ ಶಾಸಕ ಸಾ.ರಾ.ಮಹೇಶ್ ಅವರದ್ದಾಗಿದ್ದು, ಐದು ತಿಂಗಳ ಹಿಂದೆ ಈ ಮಾತುಕತೆ ನಡೆದಿದೆ’ ಎಂದು ಹೇಳಿದ್ದಾರೆ.

ಇದು ರೆಡ್ಡಿಗಳ ಪಿತೂರಿ; ತನಿಖೆಯಾಗಲಿ– ಸಾ.ರಾ.ಮಹೇಶ್

ಆಡಿಯೊ ಕುರಿತು ‘ಪ್ರಜಾವಾಣಿ’ ಸಾ.ರಾ.ಮಹೇಶ್ ಅವರನ್ನು ಸಂಪರ್ಕಿಸಿದಾಗ, ‘ಇದು ರೆಡ್ಡಿಗಳ ಪಿತೂರಿಯೇ ಹೊರತು ಬೇರೇನೂ ಅಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಾಗಲಿ’ ಎಂದು ತಿಳಿಸಿದರು.

‘ವಾಸ್ತವದಲ್ಲಿ ಈ ಭೂಮಿ ರುದ್ರಮೂರ್ತಿ ಎಂಬುವವರ ಪುತ್ರ ಮಂಜು ಅವರಿಗೆ ಸೇರಿದ್ದು. 2006ರಲ್ಲಿ ನಾನು ‘ಮುಡಾ’ ಅಧ್ಯಕ್ಷನಾಗಿದ್ದಾಗ ಆರ್.ಟಿ.ನಗರ ಬಡಾವಣೆಯ 60 ಅಡಿ ರಸ್ತೆಗಾಗಿ ಇವರ ಭೂಮಿ ಪಡೆಯಲಾಗಿತ್ತು. ರೆಡ್ಡಿ ಅವರು ಏಕಾಏಕಿ ಅಲ್ಲಿ ಬಂದು ತಮ್ಮ ಫಲಕ ಹಾಕಿದರು. ಈ ವಿಚಾರವನ್ನು ಮಂಜು ಅವರು ನನ್ನ ಗಮನಕ್ಕೆ ತರುತ್ತಿದ್ದಂತೆ, ನಾನು ರೆಡ್ಡಿ ಅವರಿಗೆ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದೆ. ಆರು ತಿಂಗಳ ಹಿಂದೆ ಮಾತಾಡಿದ್ದು. ಈ ಬಗ್ಗೆ ತನಿಖೆ ನಡೆಯಲಿ. ಆಗ ಯಾಕೆ ಮಾತಾಡಿದ್ದು ಎಂಬುದು ಗೊತ್ತಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT