ಬುಧವಾರ, ಜನವರಿ 22, 2020
25 °C
ಕೃಷಿ ಪಡಿತರ ವ್ಯವಸ್ಥೆಯನ್ನು ಸದೃಢಗೊಳಿಸುವ ಕಾರ್ಯಾಗಾರ

ಮೊದಲು ರೈತರ ಕಷ್ಟ ಕೇಳಿ– ಕುರುಬೂರು ಶಾಂತಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮೊದಲು ರೈತರ ಕಷ್ಟ ಕೇಳಿ’ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದರು.

ಜಂಟಿ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ಇಲ್ಲಿನ ಕೃಷಿ ಮಾರಾಟ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕೃಷಿ ಪಡಿತರ ವ್ಯವಸ್ಥೆಯಲ್ಲಿ ಅವಶ್ಯವಿರುವ ಆಹಾರ ಧಾನ್ಯಗಳನ್ನು ಉತ್ಪಾದಿಸಿ ವ್ಯವಸ್ಥೆಯನ್ನು ಸದೃಢಗೊಳಿಸುವ ಕುರಿತ ಒಂದು ದಿನದ ಕಾರ್ಯಾರ್ಗಾರದಲ್ಲಿ ಅವರು ಮಾತನಾಡಿದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಕೃಷಿ ಇಲಾಖೆ ಅಧಿಕಾರಿಗಳು ಅಂಕಿ ಅಂಶ ನೀಡುತ್ತಾರೆ ಎಂದು ಹೇಳಿದಾಗ ಶಾಂತಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು.

‘ಅಂಕಿಅಂಶಗಳು ಬೇಕಿಲ್ಲ. ಮೊದಲು ರೈತರ ಕಷ್ಟ ಕೇಳಿ. ಅವರ ಸಮಸ್ಯೆಗಳನ್ನು ನಿವಾರಿಸಿ’ ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಮಂಡ್ಯ ಜಿಲ್ಲೆಯ ರೈತ ಮುಖಂಡ ಬೋರಯ್ಯ, ‘ಕೃಷಿ ಇಲಾಖೆ ಇದ್ದೂ ಇಲ್ಲದಂತಾಗಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾಕಾಗುವಷ್ಟು ಸಿಬ್ಬಂದಿಯೂ ಕೃಷಿ ಇಲಾಖೆಯಲ್ಲಿ ಇಲ್ಲ’ ಎಂದು ಹರಿಹಾಯ್ದರು.

ಎಲ್ಲ ರೈತರ ಅಭಿಪ್ರಾಯಗಳನ್ನು ಪಡೆದ ನಂತರವೇ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಲಾಗುವುದು ಎಂದು ಹನುಮನಗೌಡ ಬೆಳಗುರ್ಕಿ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಇದಕ್ಕೂ ಮುನ್ನ ಮಾತನಾಡಿದ ಹನುಮನಗೌಡ ಬೆಳಗುರ್ಕಿ, ‘ಪಡಿತರ ವಿತರಣಾ ವ್ಯವಸ್ಥೆಯನ್ನು ಬಲಗೊಳಿಸಲು ಈ ಕಾರ್ಯಾಗಾರ ಮಾಡಲಾಗಿದೆ. ಇದರಲ್ಲಿ ಎಲ್ಲ ರೈತರ ಅಭಿಪ್ರಾಯ ಪರಿಗಣಿಸಿ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಆಹಾರ ಭದ್ರತೆ ಇಲ್ಲದ ದೇಶಕ್ಕೆ ಸ್ವಾತಂತ್ರ್ಯ ಇದ್ದರೂ ಇಲ್ಲದಂತೆಯೇ. ಮೊದಲು ಆಹಾರ ಭದ್ರತೆ ಬೇಕಿದೆ. ಜಾಗತೀಕರಣದಿಂದ ಉದ್ಯಮಿಗಳು, ಮಾರಾಟಗಾರರಿಗೆ ಲಾಭವಾಯಿತೇ ಹೊರತು ರೈತರಿಗೆ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಂಟಿ ಕೃಷಿ ನಿರ್ದೇಶಕರಾದ ಎಂ.ಮಹಂತೇಶಪ್ಪ, ಬಿ.ಎಸ್.ಚಂದ್ರಶೇಖರ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ, ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ.ವಾಸುದೇವನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಕುಮಾರ್, ಕರ್ನಾಟಕ ಕೃಷಿ ಮಾರಾಟ ಮಂಡಳಿಯ ವಿಭಾಗೀಯ ಕಚೇರಿಯ ಪ್ರಧಾನ ವ್ಯವಸ್ಥಾಪಕ ಮಹೇಶ್ ಸೇರಿದಂತೆ ನೂರಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು