ಭಾನುವಾರ, ಆಗಸ್ಟ್ 14, 2022
26 °C
ಹಲವು ಆಸ್ಪತ್ರೆಗಳಲ್ಲಿ ಲಭ್ಯವಾದ ಹೊರ ರೋಗಿ ಸೇವೆ

ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶುಕ್ರವಾರ ಕರೆ ನೀಡಿದ್ದ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಲವು ಖಾಸಗಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ಸೇವೆಗೆ ಯಾವುದೇ ತೊಂದರೆ ಆಗಲಿಲ್ಲ. ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಸೇರಿದಂತೆ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.

ಇಲ್ಲಿನ ಐಎಂಎ ಕಚೇರಿ ಮುಂದೆ ಸೇರಿದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕೇಂದ್ರ ಸರ್ಕಾರದ ತೀರ್ಮಾನ ಖಂಡಿಸಿ ಪ್ರತಿಭಟಿಸಿದರು.

‘ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವುದು ಸರಿಯಲ್ಲ. ಎಂಬಿಬಿಎಸ್‌ ಮಾಡಿದವರಿಗೆ ಈ ಅನುಮತಿ ಸಿಕ್ಕಿಲ್ಲ. ‘ಮಾಸ್ಟರ್‌ ಆಫ್ ಸರ್ಜರಿ’ ಮಾಡಿದವರೂ ಎಲ್ಲ ಬಗೆಯ ಸರ್ಜರಿ ಮಾಡುವುದಿಲ್ಲ. ಹೀಗಿರುವಾಗ ಆಯುರ್ವೇದ ಓದಿದವರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವುದು ಅವೈಜ್ಞಾನಿಕ ತೀರ್ಮಾನ’ ಎಂದು ವೈದ್ಯರು ಟೀಕಿಸಿದರು.‌

ಎಲ್ಲ ಬಗೆಯ ವೈದ್ಯಕೀಯ ಪದ್ಧತಿಗಳಿಗೂ ಅದರದ್ದೇ ಆದ ಮಹತ್ವ ಇದೆ. ಆದರೆ, ಒಂದರೊಳಗೊಂದು ಮಿಶ್ರ ಮಾಡಬಾರದು. ಅಲೋಪಥಿ ವೈದ್ಯರಿಗೆ ಡಾಕ್ಟರ್ ಎಂದು, ಆಯುರ್ವೇದ ಓದಿದವರಿಗೆ ವೈದ್ಯರೆಂದು, ಯುನಾನಿಯವರಿಗೆ ಹಕೀಮ್ ಎಂದು ಕರೆಯಬೇಕು ಎಂದು ಒತ್ತಾಯಿಸಿದರು.‌

ತರಾತುರಿಯಲ್ಲಿ ಮುಷ್ಕರಕ್ಕೆ ಕರೆ: ಐಎಂಎ ತರಾತುರಿಯಲ್ಲಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸರ್ಕಾರಿ ವೈದ್ಯರು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ವೈದ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿಯಮದಂತೆ 15 ದಿನಗಳಿಗೂ ಮುಂಚೆ ಮುಷ್ಕರ ಕುರಿತು ಸರ್ಕಾರಕ್ಕೆ ಲಿಖಿತವಾಗಿ ತಿಳಿಸಬೇಕು. ಇಲ್ಲದಿದ್ದರೆ, ವೈದ್ಯರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ. ಹಾಗಾಗಿ, ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಕೆ.ಆರ್.ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್ ಪ್ರತಿಕ್ರಿಯಿಸಿ, ‘ಆಸ್ಪತ್ರೆಯಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದ್ದಾರೆ. ಹೊರ ಮತ್ತು ಒಳರೋಗಿಗಳಿಗೆ ಯಾವುದೇ ಬಗೆಯ ತೊಂದರೆಯಾಗಿಲ್ಲ’ ಎಂದು ತಿಳಿಸಿದರು.

ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಪೂರ್ವನಿಗದಿಯಂತೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸಾಮಾನ್ಯವಾಗಿ ಇಲ್ಲೆಲ್ಲ ಮುಷ್ಕರ ಎಂಬ ಕಾರಣಕ್ಕೆ ರೋಗಿಗಳ ಸಂಖ್ಯೆ ಕಡಿಮೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು