ಸೋಮವಾರ, ಮಾರ್ಚ್ 8, 2021
24 °C
ಗೂಗಲ್‌ ಹುಡುಕಾಟದಲ್ಲಿ ರಾಜ್ಯದಲ್ಲಿ ಬೆಂಗಳೂರಿಗರೇ ಹೆಚ್ಚು

ಮೊಮೊ ಚಾಲೆಂಜ್‌; ರಾಜ್ಯಕ್ಕೆ 14ನೇ ಸ್ಥಾನ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ‘ಬ್ಲೂವೇಲ್ ಚಾಲೆಂಜ್‌’ ನಂತರ ಮಕ್ಕಳು ಹಾಗೂ ಯುವಕರಿಗೆ ಕಂಟಕಪ್ರಾಯವಾಗಿರುವ ‘ಮೊಮೊ ಚಾಲೆಂಜ್’ ಎಂಬ ಹೊಸ ಆಟವನ್ನು ಗೂಗಲ್‌ನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಹುಡುಕಿದವರಲ್ಲಿ ರಾಜ್ಯ 14ನೇ ಸ್ಥಾನದಲ್ಲಿದೆ.

ಇದರಲ್ಲಿ ಸಿಂಹಪಾಲು ಬೆಂಗಳೂರಿಗರೇ ಆಗಿದ್ದಾರೆ ಎಂದು ಗೂಗಲ್ ಟ್ರೆಂಡ್ಸ್‌ ಅಂಕಿಅಂಶಗಳು ಹೇಳುತ್ತವೆ. ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ನಾಗಾಲ್ಯಾಂಡ್, ಮಿಜೊರಾಂ, ಮಣಿಪುರ, ಮೇಘಾಲಯ ರಾಜ್ಯಗಳು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದಿವೆ.

ಏನಿದು ಮೊಮೊ ಚಾಲೆಂಜ್?: ‘ಮೊಮೊ ಚಾಲೆಂಜ್’ ಎಂಬುದು ಆನ್‌ಲೈನ್‌ ಮೂಲಕ ವಿವಿಧ ಟಾಸ್ಕ್‌ಗಳನ್ನು ನೀಡುವಂತಹ ಆಟ. ಇದಕ್ಕೆ ವಾಟ್ಸ್‌ಆ್ಯಪ್ ಪ್ರಬಲ ವಾಹಕ. ಮೊದಲಿಗೆ ಅಪರಿಚಿತ ಸಂಖ್ಯೆಯಿಂದ ಒಂದು ಲಿಂಕ್ ಬರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ವಿಭಿನ್ನ ಹಾಗೂ ವಿಕೃತಿಯ ‘ಟಾಸ್ಕ್‌’ಗಳನ್ನು ಆಟದ ರೂಪದಲ್ಲಿ ನೀಡುತ್ತಾ ಕ್ರಮೇಣ ತನ್ನ ಕಬಂಧಬಾಹುವಿನಲ್ಲಿ ಬಂಧಿಸಿ ಬಿಡುತ್ತದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುತ್ತದೆ.

ಒಂದು ವೇಳೆ ‘ಟಾಸ್ಕ್‌’ಗಳನ್ನು ಪೂರ್ಣಗೊಳಿಸದಿದ್ದರೆ ವಿಚಿತ್ರ, ಭಯ ಹುಟ್ಟಿಸುವ ಚಿತ್ರ ಹಾಗೂ ಸಂದೇಶಗಳು ನಿರಂತರವಾಗಿ ವಾಟ್ಸ್‌ಆ್ಯಪ್‌ಗೆ ಬರುತ್ತವೆ. ಇವು ದಕ್ಷಿಣ ಅಮೆರಿಕ, ಜಪಾನ್ ದೇಶಕ್ಕೆ ಸೇರಿದ ಸಂಖ್ಯೆಗಳೆಂದು ಹೇಳಲಾಗುತ್ತಿದೆ. ದೊಡ್ಡ ದೊಡ್ಡ ಕಣ್ಣುಗಳುಳ್ಳ ವಿಚಿತ್ರ ಆಕೃತಿ ಈ ‘ಮೊಮೊ ಚಾಲೆಂಜ್‌’ನಲ್ಲಿರುವ ಚಿತ್ರದಲ್ಲಿದೆ.

‘ಮೊಮೊ ಚಾಲೆಂಜ್‌’ ಮೊದಲು ಅರ್ಜೆಂಟೀನಾದಲ್ಲಿ ಆರಂಭವಾಯಿತು. ಅಲ್ಲಿ ಹಲವು ಮಕ್ಕಳು, ಯುವಕರು ಆತ್ಮಹತ್ಯೆ ಮಾಡಿಕೊಂಡರು. ನಂತರ ಇದು ಬ್ರೆಜಿಲ್, ಕೆನಡಾ, ಕೊಲಂಬಿಯಾ, ಯೂರೋಪ್‌ನ ಕೆಲವು ದೇಶಗಳಿಗೆ ಹರಡಿ ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲೇ ಇಬ್ಬರು ಯುವಕರು ಈ ಆಟದಿಂದ ಆತ್ಮಹತ್ಯೆ ಮಾಡಿಕೊಂಡರು. ಈಗಾಗಲೇ ಕೇರಳ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳ ಪೊಲೀಸರು ಈ ಆಟದ ಕುರಿತು ಎಚ್ಚರಿಕೆ ಸಂದೇಶಗಳನ್ನು ನೀಡಿದ್ದಾರೆ.

‘ಮೊಮೊ ಚಾಲೆಂಜ್‌’ ಎಂದು ನಕಲಿ ‘ಮೊಮೊ’ ಸಂದೇಶಗಳನ್ನು ಕಿಡಿಗೇಡಿಗಳು ಕಳುಹಿಸಲಾರಂಭಿಸಿದ್ದಾರೆ. ಮೊಮೊದಲ್ಲಿ ಏನೇನಲ್ಲಾ ಇರಲಿವೆ ಎಂದು ಕುತೂಹಲ ಹುಟ್ಟಿಸುವ ವಿಡಿಯೊ ತುಣುಕುಗಳು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿವೆ.

ತಡೆ ಹೇಗೆ?
* ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು
* ಇ–ಮೇಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಅಥವಾ ಇನ್ನಾವುದೇ ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು‌
* ಮಕ್ಕಳು, ಯುವಕರು ಬಳಕೆ ಮಾಡುವ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ವಹಿಸಬೇಕು
* ಮಕ್ಕಳನ್ನು ಹೆಚ್ಚು ಒಂಟಿಯಾಗಿ ಬಿಡಬಾರದು
* ಪೋಷಕರು ತಮ್ಮ ಮಕ್ಕಳ ಜತೆ ಸಂವಹನವನ್ನು ಹೆಚ್ಚು ಉತ್ತಮಪಡಿಸಿಕೊಳ್ಳಬೇಕು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು