ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಂದಿರ ದಿನಕ್ಕೆ ಕವನಗಳ ಗೌರವ

ಇಬ್ಬರು ಸಾಧಕರಿಗೆ ಸನ್ಮಾನ, ಕವನ ವಾಚಿಸಿ ಸಂಭ್ರಮಿಸಿದ ಕವಿಗಳು
Last Updated 12 ಮೇ 2019, 20:12 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಹಿರಿಯ ನಾಗರಿಕರ ಹಗಲು ಸೇವಾ ಕೇಂದ್ರದಲ್ಲಿ ಮುದ್ದುಕೃಷ್ಣ ಪ್ರಕಾಶನ ಮತ್ತು ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ಭಾನುವಾರ ನಡೆದ ಕವಿಗೋಷ್ಠಿಯು ಅಮ್ಮಂದಿರ ದಿನದ ಗೌರವವಾಗಿ ‍ಪರಿವರ್ತಿತವಾಯಿತು. ಇಲ್ಲಿ ಕವನ ವಾಚಿಸಿದ 28 ಕವಿಗಳ ಪೈಕಿ ಬಹುತೇಕ ಮಂದಿ ತಾಯಿಯನ್ನೇ ತಮ್ಮ ಕವನದ ವಸ್ತುವನ್ನಾಗಿಸಿಕೊಂಡಿದ್ದರು.

ಬಸ‍ಪ್ಪ ಸಿ. ಸಾಲುಂಡಿ ಅವರು ವಾಚಿಸಿದ ‘ನೆಲದವ್ವ’ ಕವನ ಗಮನ ಸೆಳೆಯಿತು. ‘ಧರಣಿಯೊಳು ಭರಣಿಯ ಮಳೆಗೈದು ಒಡಲೊಳು ಕೌಸ್ತುಭದ ಮಣಿ ಹೊತ್ತು ಹನಿ ಮಾಡಿದಳು, ಅರಕಡ್ಡಿ ನೆರಕಡ್ಡಿ ಜೀವದ ಹಂಗನ್ನು ನೆಲಕೊಡ್ಡಿ ನಮ್ಮವ್ವ ನಿಮ್ಮವ್ವ...’ ಎಂಬ ಸಾಲುಗಳು ಸೂಜಿಗಲ್ಲಿನಂತೆ ಸೆಳೆದವು.

ಡಾ.ಗಂಗಾಧರಶೆಟ್ಟಿ ಗುಬ್ಬಹಳ್ಳಿ ಅವರ ‘ಅಮ್ಮ’ ಎಂಬ ಕವನವೂ ಆಕರ್ಷಕವಾಗಿತ್ತು. ‘ನನ್ನವ್ವ ಭೂಮಿತಾಯಿ, ನನ್ನಪ್ಪ ಆಗಸ, ಅವರಿಬ್ಬರ ಮಿಲನ ಮಳೆಯ ಹನಿಗಳಲ್ಲಿ...’ ಎಂಬ ಕವನದ ತುಂಬ ತಾಯಿ ಪ್ರೇಮವನ್ನು ನಿಸರ್ಗದ ಸಂಕೇತಗಳಲ್ಲಿ ಧ್ವನಿಸುವಿಕೆ ಪ್ರಧಾನವಾಗಿ ಕಂಡಿತು.

ಶ್ರೀರಾಂಪುರದ ಎಂ.ಭವ್ಯಶ್ರೀ ಅವರು ಭಿನ್ನವಾದ ‘ಮನಸ್ಸಿನ ಮಾತು’ ಎಂಬ ಕವನ ವಾಚಿಸಿದರು. ‘ತಿರುಗಿ ನೋಡು ನೀ ಒಮ್ಮೆ ನನ್ನನ್ನು ಅಳುತಾ ನಿಂತೆ ನಾನಿಲ್ಲಿ’ ಎಂದು ವಿರಹದಲ್ಲಿ ಆರಂಭವಾಗುವ ಕವನ ಕೊನೆಗೆ ‘ಜೀವದ ಜೀವವೇ ಏತಕೆ ಹೋಗುವೆ ನನ್ನನು ನೀ ಬಿಟ್ಟು ಈಗ, ಬಾ ಬೇಗ’ ಎಂಬ ನಿರೀಕ್ಷೆಯ ಭರವಸೆಯಲ್ಲಿ ಕೊನೆಯಾಯಿತು.

ವಿರಾಜಪೇಟೆ, ಕೆ.ಆರ್.ಪೇಟೆ, ಪಾಂಡವಪುರ, ರಾಮನಗರ, ನಂಜನಗೂಡು ಸೇರಿದಂತೆ ಹಲವು ಪಟ್ಟಣಗಳಿಂದ ಬಂದಿದ್ದ ಕವಿಗಳು ಇಲ್ಲಿದ್ದರು.

ಇದಕ್ಕೂ ಮುನ್ನ ಡಯಟ್‌ನ ವಿಶ್ರಾಂತ ಹಿರಿಯ ಉಪನ್ಯಾಸಕ ಎಂ.ಮಾರುತಿ ಹಾಗೂ ಲೇಖಕಿ ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸಾಹಿತಿ ಬನ್ನೂರು ಕೆ.ರಾಜು ಉದ್ಘಾಟಿಸಿದರು. ಚಿತ್ರಕಲಾವಿದೆ ಡಾ.ಜಮುನಾರಾಣಿ ಮಿರ್ಲೆ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಪ್ರಭುಸ್ವಾಮಿ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಮುದ್ದುಕೃಷ್ಣ ಪ್ರಕಾಶನದ ಅಧ್ಯಕ್ಷ ಮುತ್ತುಸ್ವಾಮಿ ಭಾಗಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT