ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಯ ನೆನಪು: ಬಾಲ್ಯದ ನೆನಪುಗಳ ಜಾತ್ರೆಯಲ್ಲಿ ಮಂಡ್ಯ ರಮೇಶ್‌

Last Updated 16 ಸೆಪ್ಟೆಂಬರ್ 2021, 6:15 IST
ಅಕ್ಷರ ಗಾತ್ರ

ಮೈಸೂರು: ‘ದಸರೆ ಎಂದರೆ ಬಾಲ್ಯದ ನೆನಪುಗಳ ಜಾತ್ರೆ. ದಸರೆ ತೋರಿಸಲೆಂದುಮಂಡ್ಯದಿಂದ ಅಪ್ಪ ನನ್ನನ್ನು ಅಗ್ರಹಾರದ ನೆಂಟರ ಮನೆಗೆ ಕರೆತರು ತ್ತಿದ್ದರು. ಹೊಸ ಚಡ್ಡಿ, ಶರ್ಟ್‌ ಧರಿಸಿ, ತಲೆಗೆ ಎಣ್ಣೆ ಹಚ್ಚಿ ಚೆನ್ನಾಗಿ ಕ್ರಾಪ್‌ ತೆಗೆದು ಅಪ್ಪನ ಕೈಹಿಡಿದು ಬರುತ್ತಿದ್ದೆ’

ದಸರೆ ವಿಸ್ಮಯ ಲೋಕವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಅದೊಂದು ವರ್ಣರಂಜಿತ ಲೋಕದಂತೆ ಭಾಸವಾಗುತಿತ್ತು. ಜನಜಂಗುಳಿಯಿಂದ ಹೊರಹೊಮ್ಮುತ್ತಿದ್ದ ಹರ್ಷೋದ್ಗಾರ ಕೇಳುವುದೇ ಖುಷಿ. ಸೈನಿಕರ ಕವಾಯತು, ಆನೆಗಳ ಸಾಲು ನೋಡಿ ಹಿಗ್ಗುತ್ತಿದ್ದೆ. ಸಿಕ್ಕಾಪಟ್ಟೆ ವಿದೇಶಿಗರು ಇರುತ್ತಿದ್ದರು.

ಎರಡು ಜಡೆಗೆ ರಿಬ್ಬನ್‌ ಕಟ್ಟಿಕೊಂಡು, ಪುಟ್ಟ ಲಂಗ ಧರಿಸಿ ಅಕ್ಕ ಕೂಡ ಜೊತೆಗಿರುತ್ತಿದ್ದಳು. ಬೊಂಬೆಗಳನ್ನು ನೋಡಲು ಹೋಗು
ತ್ತಿದ್ದೆವು. ಮನೆಯಲ್ಲಿ ಮಾಡಿದ ಚಕ್ಕುಲಿಯನ್ನು ಚಡ್ಡಿ ಜೇಬುಗಳಲ್ಲಿ ಇಟ್ಟು ನಾಲ್ಕೈದು ದಿನ ತಿನ್ನುತ್ತಿದ್ದೆವು. ವೈವಿಧ್ಯಮಯ ತಿಂಡಿ ಮಾಡಿರುತ್ತಿದ್ದರು. ‌‌ನೆಂಟರ ಮಕ್ಕಳ ಜೊತೆ ಬೀದಿಗಳಲ್ಲಿ ಸುತ್ತಾಡಿ ದೀ‍ಪಾಲಂಕಾರ ಕಂಡು ವಿಸ್ಮಿತರಾಗುತ್ತಿದ್ದೆವು.

ಹೈಸ್ಕೂಲ್‌ಗೆ ಬಂದ ಮೇಲೆ ಮಂಡ್ಯದಿಂದ ರೈಲಿನಲ್ಲಿ ಬರುತ್ತಿದ್ದೆವು. ಎಲ್ಲಾ ರೈಲುಗಳು ತುಂಬಿ ತುಳುಕುತ್ತಿದ್ದವು. ಮೈಸೂರು ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಹದಿಹರೆಯದ ಹುಡುಗಿಯರನ್ನು ನೋಡಿ ಖುಷಿ ಪಡುತ್ತಿದ್ದೆವು. ಅವರು ಯಾರನ್ನೋ ನೋಡಿ ನಕ್ಕರೆ ನಮ್ಮನ್ನೇ ನೋಡುತ್ತಿದ್ದಾರೇನೊ ಅನಿಸುತಿತ್ತು!

ಜಾನಪದ ಕಲೆಗಳನ್ನು ಕಣ್ತುಂಬಿಕೊಳ್ಳುತ್ತಿದ್ದೆವು. ಮೈಸೂರು ರಂಗಾಯಣಕ್ಕೆ ಸೇರಿದ ಮೇಲೆ ಆಗಿನ ನಿರ್ದೇಶಕ ಬಿ.ವಿ.ಕಾರಂತರು ನಮ್ಮನ್ನು ಅರಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಖಾಸಗಿ ದರ್ಬಾರ್, ದಿಗ್ಗಜರ ಸಂಗೀತ ಕಾರ್ಯಕ್ರಮ ತೋರಿಸುತ್ತಿದ್ದರು. ಕೆ.ಆರ್‌.ವೃತ್ತದಲ್ಲಿ ಕಟ್ಟಡವೇರಿ ಕುಳಿತು ಜಂಬೂಸವಾರಿ ನೋಡುತ್ತಿದ್ದೆವು.

ಈಗ ದಸರೆಯ ವೈಭವ ಕಡಿಮೆಯಾಗಿ, ಸರಳವಾಗಿದೆ. ದಸರೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರಿಗೆ ನಷ್ಟವಾಗಿದೆ. ಅದರ ನಡುವೆಯೇ ವೈಭವದ ನೆನಪು ಮತ್ತೆ ಮತ್ತೆ ಕಾಡುತ್ತದೆ.

– ಮಂಡ್ಯ ರಮೇಶ್‌,ನಟ, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT