ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿಶ್ವವಿದ್ಯಾಲಯ: ಆನ್‌ಲೈನ್‌, ಆಫ್‌ಲೈನ್ ಕೋರ್ಸ್‌ಗಳ ಶುಲ್ಕ ಹೆಚ್ಚಳ

Last Updated 30 ಜೂನ್ 2022, 9:42 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್‌ ಕೋರ್ಸ್‌ಗಳಿಗೆ ಸರಾಸರಿ ಶೇ 30 ಹಾಗೂ ಆಫ್‌ಲೈನ್‌ ಕೋರ್ಸ್‌ಗಳಿಗೆ ಶೇ 5ರಷ್ಟು ಶುಲ್ಕ ಹೆಚ್ಚಿಸಲಾಗಿದೆ.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಶಿಕ್ಷಣ ಮಂಡಳಿಯ ಮೊದಲನೇ ಸಾಮಾನ್ಯ ಸಭೆಯಲ್ಲಿ ಶುಲ್ಕ ಪರಿಷ್ಕರಣೆ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಯಿತು.

2022–23ನೇ ಶೈಕ್ಷಣಿಕ ಸಾಲಿನಿಂದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದಿಂದ ‘ಕ್ಲಿನಿಕಲ್‌ ರಿಪ್ರೊಡಕ್ಷನ್ ಜೆನಿಟಿಕ್ಸ್‌’ನಲ್ಲಿ 4 ಸೆಮಿಸ್ಟರ್‌ಗಳ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಕೋರ್ಸ್‌ ಪ್ರಾರಂಭಿಸಲು ಅನುಮತಿ ಕೊಡಲಾಯಿತು.

ಕೋರ್ಸ್‌ ಅನ್ನು ಮೈಸೂರಿನ ಮೆಡಿವೇವ್, ವಿಐಎಸ್ ಹಾಗೂ ಪರ್ಟಿಲಿಟಿ ರಿಸರ್ಚ್‌ ಆಸ್ಪತ್ರೆ ಸಹಯೋಗದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ದೇಶದ ವಿದ್ಯಾರ್ಥಿ ಮತ್ತು ಸಂಶೋಧಕರ ಮಾನವ ವೈದ್ಯಕೀಯ ತಳಿವಿಜ್ಞಾನ ಹಾಗೂ ಸಾಮರ್ಥ್ಯ ವೃದ್ಧಿಗೆ ಕೋರ್ಸ್‌ ಪ್ರಸ್ತುತವಾಗಿದೆ ಎಂದು ಮಂಡಿಸಲಾಯಿತು.

ಡಿಫೆನ್ಸ್‌ ಸ್ಟಡೀಸ್ ವಿಷಯದಲ್ಲಿ ಕೋರ್ಸ್‌ ಆರಂಭಕ್ಕೂ ಒಪ್ಪಿಗೆ ನೀಡಲಾಯಿತು. ‘ಬಿಎ, ಎಂಎನಲ್ಲಿ ಕೋರ್ಸ್‌ ಆರಂಭಿಸಲಾಗುವುದು. ಈ ಹಿಂದೆ ಮಿಲಿಟರಿ ಸೈನ್ಸ್‌ ಎಂದಿತ್ತು. ಕೆಲವೇ ವರ್ಷಗಳಷ್ಟೆ ನಡೆದಿತ್ತು. ಈಗ ಬದಲಾಯಿಸಲಾಗಿದೆ. ದಕ್ಷಿಣ ಭಾರತದ ವಿಶ್ವವಿದ್ಯಾಲಯಗಳಲ್ಲಿ ಮೊದಲು ಎನಿಸಲಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)–2022ಕ್ಕೆ ಪೂರಕವಾಗಿದೆ’ ಎಂದು ಕುಲಪತಿ ಹೇಮಂತ್‌ಕುಮಾರ್‌ ತಿಳಿಸಿದರು.

ಗಡಿ ನಾಡು ಕನ್ನಡಿಗರಿಗೆ ಸೀಟು ಮೀಸಲು:

‘ತಮಿಳುನಾಡಿನ ತಾಳವಾಡಿಯಲ್ಲಿ ಕನ್ನಡ ಮಾಧ್ಯಮ ವ್ಯಾಸಂಗ ಮಾಡಿದವರು ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬಂದರೆ, ಇಲ್ಲಿನ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಶುಲ್ಕ ಕಟ್ಟಬೇಕು. ವಿದ್ಯಾರ್ಥಿವೇತನಕ್ಕೂ ಅರ್ಜಿ ಸಲ್ಲಿಸುವಂತಿಲ್ಲ. ಹೀಗಾಗಿ, ವಿಶ್ವವಿದ್ಯಾಲಯವು ಉಚಿತ ಶಿಕ್ಷಣ ನೀಡಬೇಕು. ಉನ್ನತ ಶಿಕ್ಷಣ ಪಡೆಯಲು ಬರುವ ಗಡಿ ನಾಡು ಕನ್ನಡಿಗರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಜೊತೆ ಸೇರಿ ಶಿಷ್ಯವೇತನ ಕೊಡಬೇಕು ಎಂದು ಕೋರಿ ಡಾ.ಶಂಕರ ಆರ್. ಗೇರುಮಾಳಂ ಎಂಬುವರು ಪತ್ರ ಬರೆದಿದ್ದಾರೆ. ಅವರಿಗೆ ಉಚಿತ ಶಿಕ್ಷಣದ ಬಗ್ಗೆ ಸರ್ಕಾರದಿಂದ ನಿರ್ದೇಶನವಿಲ್ಲ. ಸದ್ಯಕ್ಕೆ ಸೀಟು ಹಂಚಿಕೆಯಲ್ಲಿ ಮೀಸಲಾತಿ ಕೊಡಬಹುದು’ ಎಂದು ಕುಲಪತಿ ಹೇಳಿದರು. ಇದಕ್ಕೆ ಸಭೆಯು ಸಮ್ಮತಿಸಿತು.

3 ವರ್ಷಕ್ಕೊಬ್ಬ ಪ್ರಾಂಶುಪಾಲರಿಗೆ ‘ಪ್ರಭಾರ’

ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಿಗೆ ಪ್ರಭಾರದ ಮೇಲೆ ನೇಮಕವಾಗುವ ಪ್ರಾಂಶುಪಾಲರ ಅವಧಿಯನ್ನು ಒಟ್ಟಾರೆ ಗರಿಷ್ಠ 3 ವರ್ಷಗಳಿಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಲಾಯಿತು. ನಂತರ, ಜೇಷ್ಠತಾ ಪಟ್ಟಿಯಲ್ಲಿ ಸೇವಾ ಹಿರಿತನ ಹೊಂದಿರುವ ಅರ್ಹ ಪ್ರಾಧ್ಯಾಪಕರನ್ನು ರೊಟೇಷನ್‌ ಆಧಾರದ ಮೇಲೆ ಪ್ರಭಾರ ಪ್ರಾಂಶುಪಾಲರನ್ನಾಗಿ ನೇಮಿಸಲು ಅನುಮೋದನೆ ನೀಡಲಾಯಿತು. ಇದೊಂದು ಹೊಸ ಮಾದರಿಯಾಗಿದೆ. ಇದರಿಂದ ಎಲ್ಲರಿಗೂ ಪ್ರಾಂಶುಪಾಲರಾಗುವ ಅವಕಾಶ ಸಿಗುತ್ತದೆ ಎಂಬ ಅಭಿ‍ಪ್ರಾಯ ವ್ಯಕ್ತವಾಯಿತು.

ಚಿನ್ನದ ಪದಕ ದತ್ತಿ ಸ್ಥಾಪನೆಗೆ ಅನುಮೋದನೆ

* ಲತಾದೇವಿ ಮತ್ತು ಪ್ರೊ.ಬಿ.ಎಚ್. ಸುರೇಶ್ ಚಿನ್ನದ ಪದಕ– ಎಂ.ಕಾಂ. ಪದವಿಯಲ್ಲಿ ಮೊದಲನೇ ಬಾರಿಗೆ 3ನೇ ರ‍್ಯಾಂಕ್‌ ಗಳಿಸುವ ವಿದ್ಯಾರ್ಥಿಗೆ.

* ಪ್ರೊ.ಜಿ. ವಂಕಟೇಶ್‌ಕುಮಾರ್‌ ಚಿನ್ನದ ಪದಕ– ಸ್ನಾತಕೋತ್ತರ ಮನೋವಿಜ್ಞಾನ ವಿಷಯವನ್ನು ಕನ್ನಡ ಮಾಧ್ಯಮದಲ್ಲಿ ಓದಿ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ.

* ಪದ್ಮಾ ಸತ್ಯನಾರಾಯಣ ಚಿನ್ನದ ಪದಕ– ಎಂ.ಎಸ್ಸಿ. ಭೌತವಿಜ್ಞಾನದಲ್ಲಿ 2ನೇ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿನಿಗೆ, ಎಂ.ಬಿ. ಅನುರಾಧಾ–ಎಂ.ಚೌಡೇಗೌಡ ಚಿನ್ನದ ಪದಕ– ಎಂ.ಎ. ಸಮಾಜವಿಜ್ಞಾನ ವಿಷಯದಲ್ಲಿ ಮೊದಲ ಪ್ರಯತ್ನದಲ್ಲೇ ಅತಿ ಹೆಚ್ಚಿನ ಅಂಕ ಗಳಿಸಿದವರಿಗೆ.

* ಡಾ.ಬಿ.ಆರ್. ಅಂಬೇಡ್ಕರ್‌ ಚಿನ್ನದ ಪದಕ–ಎಂ.ಎ. ತತ್ವಶಾಸ್ತ್ರದಲ್ಲಿ ಮೊದಲ ಪ್ರಯತ್ನದಲ್ಲೇ ಹೆಚ್ಚಿನ ಅಂಕ ಗಳಿಸಿದವರು.

*ಪ್ರೊ.ಎನ್. ನಿಂಗಯ್ಯ ಚಿನ್ನದ ಪದಕ–ಎಂ.ಎಸ್ಸಿ (ಆಂಥ್ರೊಪಾಲಜಿ)ಯಲ್ಲಿ ಮೊದಲ ಪ್ರಯತ್ನದಲ್ಲೇ ಹೆಚ್ಚು ಅಂಕ ಗಳಿಸಿದವರು.

* ಬಿ.ಟಿ. ಶ್ಯಾಮಲಾ ವೈ. ತಿಪ್ಪೇಸ್ವಾಮಿ ಚಿನ್ನದ ಪದಕ– ಎಂ.ಎಸ್ಸಿ. ಸಸ್ಯವಿಜ್ಞಾನದಲ್ಲಿ ಪ್ರಥಮ ಯತ್ನದಲ್ಲೇ ಅತಿ ಹೆಚ್ಚು ಅಂಕ ಪಡೆದವರು.

* ಕೆ.ಸುಬ್ರಹ್ಮಣ್ಯ ಸ್ಮರಣಾರ್ಥ ಚಿನ್ನದ ಪದಕ– ಎಂಬಿಎಯಲ್ಲಿ ಮೊದಲ ಪ್ರಯತ್ನದಲ್ಲೇ ಹೆಚ್ಚು ಅಂಕ ಗಳಿಸಿದ ಬಿ.ಎನ್. ಬಹದ್ದೂರ್ ನಿರ್ವಹಣಾ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗೆ.

ಇತರ ನಿರ್ಣಯಗಳು

* ಮಂಡ್ಯ ಜಿಲ್ಲೆ ಪಾಂಡವಪುರದ ವಿಜಯ ಶಿಕ್ಷಣ ಮಹಾವಿದ್ಯಾಲಯಕ್ಕೆ 2019–20 ಹಾಗೂ 2021–22ನೇ ಶೈಕ್ಷಣಿಕ ಸಾಲಿಗೆ ಸಂಯೋಜನೆ ಮುಂದುವರಿಸಲು ಅನುಮೋದನೆ.

* ಸಿಬಿಸಿಎಸ್‌ (ಯುಜಿ) ನಿಯಮಾವಳಿಯ ‘ಮೇಕ್‌–ಅಪ್‌ ಪರೀಕ್ಷೆ’ಗೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಯಿತು. ಕೋವಿಡ್–19 ಸಾಂಕ್ರಾಮಿಕದ ಪರಿಣಾಮ ಎರಡು ವರ್ಷಗಳ ಶೈಕ್ಷಣಿಕ ವೇಳಾಪಟ್ಟಿಯು ಮುಂದೆ ಹೋಗಿರುವ ಸಲುವಾಗಿ ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿದೂಗಿಸಲು ಈ ಕ್ರಮ ವಹಿಸಲಾಗಿದೆ. ಪ್ರಸಕ್ತ ಸಾಲಿನಿಂದಲೇ ಅನ್ವಯವಾಗುವಂತೆ, ಈಗಾಗಲೇ ಪದವಿಯ 5ನೇ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮಾತ್ರ ಮೇಕ್‌–ಅಪ್‌ ಪರೀಕ್ಷೆ ನಡೆಸಲಾಗುತ್ತದೆ. 6ನೇ ಸೆಮಿಸ್ಟರ್‌ನಿಂದ ಅನ್ವಯವಾಗುವಂತೆ ಮೇಕ್‌–ಅಪ್‌ ಪರೀಕ್ಷೆ ನಡೆಸಲಾಗುವುದಿಲ್ಲ.

* ಯೂನಿವರ್ಸಿಟಿ ಸ್ಕೂಲ್ ಆಫ್ ಎಂಜಿನಿಯರಿಂಗ್‌ ಡೀನ್ ಆಗಿ 2 ವರ್ಷಗಳ ಅವಧಿಗೆ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ.ಬಿ. ಶಂಕರ ಅವರನ್ನು ನೇಮಿಸಲು ಅನುಮೋದನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT