ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿ ನಾಳೆಯಿಂದ

‘ಎಂ ಸ್ಟ್ರೈಪ್ಸ್’ ಆ್ಯಪ್ ಬಳಸಿ ಹುಲಿಗಳ ಮಾಹಿತಿ ಸಂಗ್ರಹ
Last Updated 22 ಜನವರಿ 2022, 4:14 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜ.23ರಿಂದ ಆರಂಭವಾಗಲಿರುವ ಹುಲಿ ಗಣತಿ ಕಾರ್ಯದಲ್ಲಿ ಇದೇ ಮೊದಲ ಬಾರಿಗೆ ‘ಎಂ ಸ್ಟ್ರೈಪ್ಸ್’ ಆ್ಯಪ್ ಬಳಸಿ ಹುಲಿಗಳ ಸಮಗ್ರ ಮಾಹಿತಿ ಕಲೆಹಾಕಲಾಗುತ್ತದೆ.

ಐದನೇ ಅಖಿಲ ಭಾರತೀಯ ಹುಲಿ ಗಣತಿ ಕಾರ್ಯಕ್ರಮ ಎರಡು ಹಂತಗಳಲ್ಲಿ ಒಟ್ಟು 14 ದಿನ ನಡೆಯಲಿದ್ದು, ಗಣತಿ ಕಾರ್ಯ ದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಸೇರಿದಂತೆ ಒಟ್ಟು 300 ಸಿಬ್ಬಂದಿ ಭಾಗವಹಿಸುತ್ತಿದ್ದಾರೆ. ಮೊದಲ ಹಂತದಲ್ಲಿ 300 ಸಿಬ್ಬಂದಿ 52 ತಂಡಗಳಾಗಿ ಗಣತಿ ಕಾರ್ಯ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ 49 ತಂಡಗಳು ಕಾರ್ಯಾಚರಣೆಗೆ ಇಳಿಯಲಿವೆ.

ಗಣತಿ ಕಾರ್ಯದಲ್ಲಿ ಭಾಗವಹಿಸುವ ಸಿಬ್ಬಂದಿಗೆ ಜ.21 ಮತ್ತು 22 ರಂದು ‘ಎಂ ಸ್ಟ್ರೈಪ್ಸ್’ ಆ್ಯಪ್ ಬಳಕೆ (Monitoring system for Tigers intensive protection and Ecologic status) ಕುರಿತು ತರಬೇತಿ ನೀಡಲಾಗುತ್ತದೆ.

ಮೊಬೈಲ್‌ನಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ ಅರಣ್ಯದಲ್ಲಿ ಗಣತಿ ಸಮಯದಲ್ಲಿ ಕಂಡು ಬರುವ ಪ್ರತಿ ಹುಲಿ ಹಾಗೂ ಇತರೆ ಪ್ರಾಣಿಗಳ ಸಮಗ್ರ ಮಾಹಿತಿಯನ್ನು ನಿರ್ದಿಷ್ಟ ಕಾಲಂಗಳಲ್ಲಿ ಸಿಬ್ಬಂದಿ ತುಂಬಲಿದ್ದಾರೆ. ಈ ಮಾಹಿತಿ ಕೇಂದ್ರ ಕಚೇರಿಗೆ ರವಾನೆಯಾಗಲಿದೆ.

ಮೊದಲ ಹಂತದಲ್ಲಿ ಅರಣ್ಯದಲ್ಲಿನ ಮಾಂಸಾಹಾರಿ ಮತ್ತು ದೊಡ್ಡ ಸಸ್ಯಾಹಾರಿ ಪ್ರಾಣಿಗಳ ಗಣತಿ, ಸಸ್ಯ ಸಂಪತ್ತು, ಮಾನವನ ಹಸ್ತಕ್ಷೇಪ ಸೇರಿದಂತೆ ಇತರೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಎರಡನೇ ಹಂತದಲ್ಲಿ ಪ್ರಾಣಿಗಳ ಹಿಕ್ಕೆ ಅಥವಾ ಲದ್ದಿ (ಮಲ) ಸಂಗ್ರಹಿಸಿ ಅಧ್ಯಯನಕ್ಕೆ ಕಳುಹಿಸಿ ಡಿಎನ್ಎ ಪರೀಕ್ಷೆ ಮೂಲಕ ಪ್ರಾಣಿಗಳ ಸಾಂದ್ರತೆ ಮತ್ತು ಆಹಾರ ಪದ್ಧತಿಯನ್ನು ತಿಳಿಯಲಾಗುತ್ತದೆ.

‘ಅಖಿಲ ಭಾರತ ಮಟ್ಟದಲ್ಲಿ ಕೊನೆಯದಾಗಿ 2018ರಲ್ಲಿ ಹುಲಿ ಗಣತಿ ಕಾರ್ಯ ನಡೆದಿತ್ತು. ಅಂದು ನಾಗರ ಹೊಳೆ ಅರಣ್ಯದಲ್ಲಿ ಒಟ್ಟು 125 ಹುಲಿಗಳು ಪತ್ತೆಯಾಗಿದ್ದವು. ಪ್ರತಿ ನೂರು ಚದರ ಕಿ.ಮೀ.ಗೆ 12 ಹುಲಿಗಳು ವಾಸವಿರುವುದು ದೃಢಪಟ್ಟಿದೆ. ಹುಲಿಗಳ ಸಾಂದ್ರತೆಯಲ್ಲಿ ನಾಗರಹೊಳೆ, ದೇಶದಲ್ಲಿ 3ನೇ ಸ್ಥಾನದಲ್ಲಿದೆ’ ಎಂದು ನಾಗರ ಹೊಳೆ ರಾಷ್ಟ್ರೀಯ ಉದ್ಯಾನ ವನದ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.

‘ನಾಗರಹೊಳೆ ಅರಣ್ಯ ವ್ಯಾಪ್ತಿ 843 ಚದರ ಕಿ.ಮೀ. ಇದೆ. ಪ್ರತಿ ಹುಲಿಯ ವಾಸಕ್ಕೆ 8ರಿಂದ 10 ಚದರ ಕಿ.ಮೀ ಜಾಗ ಬೇಕು. ಪ್ರಸ್ತುತ ಇಲ್ಲಿ 8ರಿಂದ 10 ಚದರ ಕಿ.ಮೀ ವ್ಯಾಪ್ತಿಯಲ್ಲಿ 2 ಹುಲಿಗಳು ವಾಸಿಸುತ್ತಿವೆ. ಈ ಕಾರಣದಿಂದಲೇ ಮಾನವ– ಪ್ರಾಣಿ ಸಂಘರ್ಷ, ಕಾಡಂಚಿನ ಪ್ರದೇಶದಲ್ಲಿ ಹುಲಿ ಕಾಣಿಸಿಕೊಳ್ಳುವುದು, ಜನ ಜಾನುವಾರುಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಿವೆ’ ಎಂದರು.

135 ಹುಲಿ: ಅಖಿಲ ಭಾರತ ಮಟ್ಟದ ಜನಗಣತಿ ಅಲ್ಲದೆ, ನಾಗರಹೊಳೆಯಲ್ಲಿ ಪ್ರತಿವರ್ಷವೂ ಹುಲಿಗಳ ಗಣತಿ ಕಾರ್ಯ ನಡೆಯುತ್ತದೆ. 2019–20ರಲ್ಲಿ ಕೊನೆಯದಾಗಿ ನಡೆದ ಗಣತಿಯಲ್ಲಿ 135 ಹುಲಿ ಮತ್ತು 29 ಮರಿಗಳು ಇರುವುದನ್ನು ಗುರುತಿಸಲಾಗಿತ್ತು.

***

ನಾಗರಹೊಳೆ ಅರಣ್ಯದಲ್ಲಿ ವಾಸಿಸುತ್ತಿರುವ ಹುಲಿಗಳ ಸಂಖ್ಯೆ ಗರಿಷ್ಠ ಮಿತಿ ತಲುಪಿದೆ. ಇಲ್ಲಿ ಪ್ರತಿ 100 ಚದರ ಕಿ.ಮೀ ವ್ಯಾಪ್ತಿಯಲ್ಲಿ 12 ಹುಲಿಗಳಿವೆ.

–ಮಹೇಶ್‌ ಕುಮಾರ್‌, ಹುಲಿ ಯೋಜನಾ ನಿರ್ದೇಶಕ

ಬಂಡೀಪುರದಲ್ಲಿ ಇಂದಿನಿಂದ ಗಣತಿ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರದಿಂದ (ಜ.22) ಗಣತಿ ಆರಂಭವಾಗಲಿದ್ದು, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ 27ರಿಂದ ಶುರುವಾಗಲಿದೆ.

2018ರ ಗಣತಿ ಪ್ರಕಾರ, ಬಂಡೀಪುರದಲ್ಲಿ 173 ಹುಲಿಗಳಿವೆ. ಬಿಆರ್‌ಟಿಯಲ್ಲಿ 52ರಿಂದ 80ರವರೆಗೂ ಹುಲಿಗಳಿವೆ ಎಂದು ವರದಿ ಹೇಳಿದೆ.

‘ಈ ಬಾರಿ ಕೋವಿಡ್ ಭೀತಿಯಿಂದ ಸ್ವಯಂಸೇವಕರು ಭಾಗವಹಿಸುತ್ತಿಲ್ಲ, ಇಲಾಖೆಯ 300 ಸಿಬ್ಬಂದಿ ಭಾಗವಹಿಸುತ್ತಾರೆ. ಫೆ.8ರವರೆಗೆ ಮೂರು ಹಂತಗಳಲ್ಲಿ ಗಣತಿ ನಡೆಯಲಿದೆ’ ಎಂದು ಬಂಡೀಪುರ ಹುಲಿ ಯೋಜನೆ ಪ್ರಭಾರ ನಿರ್ದೇಶಕ ಕರಿಕಾಳನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT