ಶನಿವಾರ, ಜುಲೈ 2, 2022
20 °C
ಜಾನಪದ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಅಭಿಮತ

ಎನ್‌ಇಪಿ: ಭವಿಷ್ಯದ ಪೀಳಿಗೆಗೆ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೇಂದ್ರ–ರಾಜ್ಯ ಸರ್ಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಭವಿಷ್ಯದ ಪೀಳಿಗೆಯ ಏಳಿಗೆಗೆ ಸಹಕಾರಿಯಾಗಲಿದೆ’ ಎಂದು ಜಾನಪದ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಸೋಮವಾರ ರಾತ್ರಿ ಇಲ್ಲಿ ತಿಳಿಸಿದರು.

ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನಲ್ಲಿ ಜ್ಞಾನಬುತ್ತಿ ಆಯೋಜಿಸಿದ್ದ ಪದವಿ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ಎನ್‌ಇಪಿ ಶಿಕ್ಷಣಾರ್ಥಿಗಳಿಗೆ ಸೃಜನಶೀಲತೆ, ಸಂವೇದನಾಶೀಲತೆಯನ್ನು ಬೆಳೆಸುತ್ತದೆ. ಪ್ರೇರಣೆ ಒದಗಿಸುತ್ತದೆ’ ಎಂದು ಹೇಳಿದರು.

‘ಪದವಿ ಹಂತದಲ್ಲೂ ಎನ್‌ಇಪಿ ಜಾರಿಗೊಳ್ಳಲಿದೆ. ಜ್ಞಾನಾರ್ಜನೆಗೆ ವಿಪುಲ ಅವಕಾಶ ಸೃಷ್ಟಿಸಲಿದೆ. ಭಾಷಾ ಅಭ್ಯಾಸಕ್ಕೂ ಹೆಬ್ಬಾಗಿಲು ತೆರೆದಿದೆ. ವಿವಿಧ ಹುದ್ದೆಗಳ ನೇಮಕಾತಿ ಪದ್ಧತಿಯೇ ಬದಲಾಗಲಿದೆ. ಈಗಿನ ವ್ಯವಸ್ಥೆಯಲ್ಲಿನ ಸಾಕಷ್ಟು ಲೋಪ–ದೋಷಗಳನ್ನು ನಿವಾರಿಸಲಿದೆ. ಅರ್ಹರಿಗೆ ಅವಕಾಶಗಳ ಸುರಿಮಳೆಯಾಗಲಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಸೂಕ್ತ ಸಿದ್ಧತೆ ನಡೆಸಿಕೊಳ್ಳಿ. ಅವಶ್ಯವಿರುವ ಪೂರಕ ತಿಳಿವಳಿಕೆ ಅರಿಯಿರಿ’ ಎಂದು ಸ್ಪರ್ಧಾಕಾಂಕ್ಷಿಗಳಿಗೆ ಸಲಹೆ ನೀಡಿದರು.

‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಗ್ರಂಥಾಲಯದಲ್ಲಿನ ಪುಸ್ತಕಗಳ ಓದು, ಜಾಗತಿಕ ವಿದ್ಯಮಾನದ ಅರಿವು, ಸಾಮಾನ್ಯ ತಿಳಿವಳಿಕೆ ಅತ್ಯಗತ್ಯ. ಪತ್ರಿಕೆ ಓದು ಹಾಗೂ ಮಾಧ್ಯಮದ ಸಂಪರ್ಕ ಜಾಲದಿಂದ ಪ್ರತಿ ಕ್ಷಣದ ಬೆಳವಣಿಗೆ ತಿಳಿಯಬೇಕು’ ಎಂದು ಕಿವಿಮಾತು ಹೇಳಿದರು.

‘ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ವಾತಾವರಣವಿರಲ್ಲ ಎಂಬ ದೂರೊಂದು ಪ್ರಚಲಿತದಲ್ಲಿದೆ. ಕಾರ್ಯಾಗಾರದಲ್ಲಿ ಭಾಗಿಯಾಗಿ ಅಧ್ಯಾಪಕರಾದವರು ಇದು ಸುಳ್ಳು ಎಂಬುದನ್ನು ಸಾಬೀತುಪಡಿಸಬೇಕು. ಕಾಯ–ವಾಚ–ಮನಸಾ ಪರಿಶ್ರಮ ಹಾಕಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಪದವಿ ಕಾಲೇಜನ್ನು ಜ್ಞಾನ ಸೃಜಿಸುವ, ಹಂಚುವ ತಾಣವನ್ನಾಗಿ ಮಾರ್ಪಡಿಸಬೇಕು. ಭವಿಷ್ಯದಲ್ಲಿ ಆನ್‌ಲೈನ್‌ ಲರ್ನಿಂಗ್‌ ಹೆಚ್ಚಲಿದ್ದು, ಅತ್ತ ಚಿತ್ತಹರಿಸಿ’ ಎಂದು ಸಲಹೆ ನೀಡಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ, ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ ಎಸ್‌.ಕರಿಕಲ್ ವಿಚಾರ ಮಂಡಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್.ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಡಾ.ನಾಗಾಚಾರ್‌, ಡಾ.ಉಮೇಶ್‌ ದೇವನಹಳ್ಳಿ, ಡಾ.ಪಳನಿಸ್ವಾಮಿ ಉಪಸ್ಥಿತರಿದ್ದರು. ಜ್ಞಾನಬುತ್ತಿಯ ಸಂಸ್ಥಾಪಕ ಜೈನಹಳ್ಳಿ ಸತ್ಯನಾರಾಯಣ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು