ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಬಲಾಢ್ಯಗೊಳಿಸಲು ಎನ್‌ಇಪಿ: ಶಾಸಕ ರಾಮದಾಸ್

ಮೋದಿ ಯುಗ ಉತ್ಸವ
Last Updated 23 ಸೆಪ್ಟೆಂಬರ್ 2022, 13:40 IST
ಅಕ್ಷರ ಗಾತ್ರ

ಮೈಸೂರು: ‘ದೇಶವನ್ನು ಬಲಾಢ್ಯಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ–2022 ಅನುಷ್ಠಾನಗೊಳಿಸಿದೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ನಗರದ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಉದ್ಯಾನದಲ್ಲಿ ಆಯೋಜಿಸಿರುವ ‘ಮೋದಿ ಯುಗ ಉತ್ಸವ’ದ ಅಂಗವಾಗಿ ಶುಕ್ರವಾರ ನಡೆದ ‘ಚಿಣ್ಣರ ದರ್ಬಾರ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಿಗೂ ಗುಣಾತ್ಮಕ–ಸೃಜನಾತ್ಮಕ ಶಿಕ್ಷಣ ದೊರೆಯಬೇಕು. ಪದವಿ ಪಡೆಯುವವರೆಗಲ್ಲದೇ, ಜೀವನದ ಕೊನೆವರೆಗೆ ಇರಬೇಕಾದ ಶಿಕ್ಷಣವನ್ನು ಕೊಡುವುದೇ ನೀತಿಯ ಉದ್ದೇಶವಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಜೀವನದ ಎಲ್ಲ ಸ್ತರಗಳಲ್ಲೂ ಮಾರ್ಗದರ್ಶನ ದೊರೆಯುವಂತೆ ಮಾಡಲಾಗುತ್ತದೆ’ ಎಂದರು.

ವಿಶ್ವ ಗುರುವಾಗಲು ಪೂರಕ:‘ಭಾರತವು ವಿಶ್ವ ಗುರು ಆಗಬೇಕಾದರೆ ಇತರ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕಾಗುತ್ತದೆ. ಇದಕ್ಕೆ ಎನ್‌ಇಪಿಯು ಪೂರಕವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ಕೊಡಲಾಗುತ್ತಿದೆ. ಸರ್ವಾಂಗೀಣ ಅಭಿವೃದ್ಧಿಯು ಪ್ರಮುಖ ಆದ್ಯತೆಯಾಗಿದೆ’ ಎಂದು ತಿಳಿಸಿದರು.

ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ‘ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರೂ ಹೆಚ್ಚಿನ ಜ್ಞಾನಾರ್ಜನೆ ಮಾಡಬೇಕು ಎನ್ನುವುದನ್ನು ನೀತಿಯು ಒತ್ತು ಹೇಳಿದೆ. ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ವಾರದಲ್ಲಿ ಎರಡು ದಿನ ಯೋಗ, ಸಂಗೀತ ಕಲಿಕೆಗೆ ಮೀಸಲಿಡಲು, ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದು, ಅಗತ್ಯ ಸಲಕರಣೆಗಳ ವಿತರಣೆಗೂ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುತ್ತದೆ’ ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಡಿಡಿಪಿಐ ರಾಮಚಂದ್ರರಾಜೇ ಅರಸ್ ಮಾತನಾಡಿ, ‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯ ಶೈಕ್ಷಣಿಕ ವಾತಾವರಣ ಸಂಪೂರ್ಣ ಬದಲಾಗಿದೆ. ಅದರಲ್ಲೂ ದಕ್ಷಿಣ ವಲಯವು ಅಗ್ರ ಸ್ಥಾನವನ್ನು ಪಡೆದಿರುವುದಕ್ಕೆ ಶಾಸಕರು ಮತ್ತು ಶಿಕ್ಷಕರ ಪ್ರೋತ್ಸಾಹ ಕಾರಣವಾಗಿದೆ’ ಎಂದು ಹೇಳಿದರು.

ಬಿಇಒ ರಾಮ್ ಆರಾಧ್ಯ, ಡಿಆರ್‌ಸಿ ಶ್ರೀಕಂಠಶಾಸ್ತ್ರಿ, ನಗರಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗನಂದ, ಚಂಪಕಾ, ಬಿ.ವಿ.ಮಂಜುನಾಥ್, ಪಕ್ಷದ ಕೆ.ಆರ್.ಕ್ಷೇತ್ರದ ವಾರ್ಡ್ ಅಧ್ಯಕ್ಷ ವಡಿವೇಲು, ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ, ಓಂಶ್ರೀನಿವಾಸ್, ಮುಖಂಡ ದೇವರಾಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT