ಶುಕ್ರವಾರ, ಆಗಸ್ಟ್ 19, 2022
22 °C

ಚಾಮುಂಡಿ ಬೆಟ್ಟ | ರೋಪ್‌ವೇಗೆ ಅಸಮ್ಮತಿ: ಪರಿಸರ ಹೋರಾಟಗಾರರ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆಯನ್ನು ಸರ್ಕಾರವು ಕೈ ಬಿಟ್ಟಿರುವುದಕ್ಕೆ ಪರಿಸರ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

‘ರೋಪ್ ವೇ’ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುತ್ತಿದ್ದಂತೆಯೇ ಸಾಂಸ್ಕೃತಿಕ ನಗರಿಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪರಿಸರ ಪ್ರಿಯರು, ಸಾಮಾಜಿಕ ಸಂಘಟನೆಗಳು ಒಗ್ಗೂಡಿ ‘ಚಾಮುಂಡಿಬೆಟ್ಟ ಉಳಿಸಿ ಸಮಿತಿ’ ರಚಿಸಿ ಹೋರಾಟ ನಡೆಸಿದ್ದವು. ವನ್ಯಜೀವಿ, ಭೂಗರ್ಭ ಶಾಸಜ್ಞ, ಪರಿಸರ, ಜಲತಜ್ಞರು, ಎಂಜಿನಿಯರ್, ವಕೀಲರು, ರಾಜಕಾರಣಿಗಳು ಸೇರಿದಂತೆ ಹಲವರು ಕೈ ಜೋಡಿಸಿದ್ದರು. ಬೆಟ್ಟದಲ್ಲಿ ರೋಪ್ ವೇ ಬಂದರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನೂ ತಜ್ಞರು ವಿಸ್ತೃತವಾಗಿ ತೆರೆದಿಟ್ಟಿದ್ದರು.

ಯೋಜನೆ ವಿರೋಧಿಸಿ ಆನ್‌ಲೈನ್‌ನಲ್ಲಿ 70ಸಾವಿರ ಹಾಗೂ ಭೌತಿಕವಾಗಿ ನಗರದ ವಿವಿಧೆಡೆ 50ಸಾವಿರ ಜನರಿಂದ ಸಹಿ ಸಂಗ್ರಹಿಸಲಾಗಿತ್ತು. ತಜ್ಞರನ್ನು ಒಳಗೊಂಡ ಸಭೆ ನಡೆಸಿ ಹೋರಾಟದ ರೂಪುರೇಷೆ ತಯಾರಿಸಲಾಗಿತ್ತು. ರೋಪ್ ವೇ ಇಲ್ಲದೆಯೂ ಸಾಕಷ್ಟು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿತ್ತು.

‘ಮೈಸೂರಿನ ಪ್ರಾಕೃತಿಕ ಸೊಬಗು ಚಾಮುಂಡಿ ಬೆಟ್ಟ ಸಂಕಷ್ಟದಲ್ಲಿದ್ದು, ಸಂರಕ್ಷಣೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಪರಿಸರ ಹೋರಾಟಗಾರ ಭಾಮಿ ವಿ. ಶೆಣೈ ಅವರು ಪ್ರಧಾನಿ ನರೇಂದ್ರ ಮೋದಿ ಮೈಸೂರು ಭೇಟಿ ಸಂದರ್ಭದಲ್ಲಿ ಪತ್ರ ಬರೆದು ಕೋರಿದ್ದರು.

‘101 ಸಸಿ ನೆಟ್ಟು ಪೋಷಿಸುವ ಮೂಲಕ ಈ ಜಯವನ್ನು ಆಚರಿಸುತ್ತೇವೆ. ಸರ್ಕಾರದ ನಿರ್ಧಾರದಿಂದ ಪರಿಸರಕ್ಕೆ ಸಂಬಂಧಿಸಿದ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ’ ಎಂದು ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು