ಗುರುವಾರ , ಜನವರಿ 23, 2020
18 °C
‘ನವೋ–ಪ್ರಮತಿ’ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳ ಅಭಿಮತ

ಪರಿಶ್ರಮವೇ ಹೆದ್ದಾರಿ: ಇಲ್ಲ ಅಡ್ಡದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಪರಿಶ್ರಮವೇ ಸಾಧನ. ಇದಕ್ಕೆ ಅಡ್ಡದಾರಿಗಳಿಲ್ಲ. ಕ್ರಮ ಬದ್ಧವಾದ ಸಿದ್ಧತೆಯಿಂದ ಯಶಸ್ಸು ಗಳಿಸಬಹುದು ಎಂಬ ವಾಸ್ತವಾಂಶ ಅಲ್ಲಿ ಅನಾವರಣಗೊಂಡಿತು.

ನವೋದಯ ಫೌಂಡೇಷನ್‌ ಹಾಗೂ ಪ್ರಮತಿ ಹಿಲ್‌ ವ್ಯೂ ಅಕಾಡೆಮಿಯು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನವೋ–ಪ್ರಮತಿ’ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕಾರ್ಯಕ್ರಮ, ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳು, ಅತಿಥಿಗಳು, ಸಾಧಕರು ಈ ಮಾತನ್ನು ಪುಷ್ಟೀಕರಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ‘ಯುಪಿಎಸ್‌ಸಿ ಪರೀಕ್ಷೆಯ ಪ್ರತಿ ಹಂತವೂ ಮುಖ್ಯ. ಕ್ರಮ ಬದ್ಧವಾದ ಸಿದ್ಧತೆಯಿಂದ ಮಾತ್ರ ಮುಂದೆ ಬರಲು ಸಾಧ್ಯ. ಇದಕ್ಕಾಗಿ ವೇಳಾಪಟ್ಟಿಯನ್ನು ಹಾಕಿಕೊಂಡು ಅದಕ್ಕೆ ಪೂರಕವಾಗಿ ಸಿದ್ಧತೆ ನಡೆಸಬೇಕು. ಬಹುತೇಕ ಬಡ ಹಾಗೂ ಮಧ್ಯಮ ವರ್ಗದವರೇ ಈ ಪರೀಕ್ಷೆಗಳಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಇದು ಈ ಪರೀಕ್ಷೆಯ ಪಾರದರ್ಶಕತೆಗೆ ಸಾಕ್ಷಿ’ ಎಂದರು.

ಅಧ್ಯಯನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕು. ಪರೀಕ್ಷೆಗೆ ಪೂರಕವಾಗಿ, ಪಠ್ಯಕ್ರಮಕ್ಕೆ ಅನುಗುಣವಾಗಿ ಸಿದ್ಧತೆ ನಡೆಸಬೇಕು. ಪ್ರತಿ ವರ್ಷವೂ ಪರೀಕ್ಷಾ ವಿನ್ಯಾಸಗಳು ಬದಲಾಗುತ್ತಿರುತ್ತವೆ. ದೈನಂದಿನ ಬೆಳವಣಿಗೆಗಳ ಬಗ್ಗೆಯೂ ನಿಗಾ ಇಡಬೇಕು ಎಂದು ಅವರು ಸಲಹೆ ನೀಡಿದರು.

ಓದಿರುವ ಅಂಶಗಳನ್ನು ಪುನರ್‌ ಮನನ ಮಾಡಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಅಧ್ಯಯನ ವಿಷಯಗಳನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚು ಅಧ್ಯಯನ ಸಾಮಗ್ರಿಯೂ ಒಳ್ಳೆಯದಲ್ಲ ಎಂದೂ ಕಿವಿಮಾತು ಹೇಳಿದರು.

ಅಧ್ಯಯನ ಮಾಡಿರುವುದನ್ನು ಗುರುತು ಮಾಡಿಕೊಳ್ಳಬೇಕು. ಪರೀಕ್ಷೆಯ ಸಂದರ್ಭ ಇವುಗಳೇ ನೆರವಾಗುತ್ತವೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡರೆ ಮುಂದೆ ಉತ್ಸಾಹ ಹೆಚ್ಚುತ್ತಾ ಹೋಗುತ್ತದೆ ಎಂದು ಅನುಭವದ ಮಾತುಗಳನ್ನು ಹೇಳಿದರು.

ಪ್ರಮತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್‌.ವಿ.ರಾಜೀವ್‌ ಮಾತನಾಡಿ, ಹಟ ಗಟ್ಟಿಯಾಗಿದ್ದರೆ ಸಾಧನೆ ಮಾಡಲು ಸಾಧ್ಯ. ಗುರಿಗೆ ಭಂಗ ಉಂಟುಮಾಡದೆ, ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಮುಂದೆ ಸಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಪಸ್ಸಿನಂತೆ ಕೇಂದ್ರೀಕರಿಸಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ ಮಾತನಾಡಿ, ಆತ್ಮವಿಶ್ವಾಸದೊಂದಿಗೆ ತರಬೇತಿ ಪಡೆದುಕೊಂಡು ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ನ ಪ್ರಸರಣಾ ವಿಭಾಗದ ಜನರಲ್‌ ಮ್ಯಾನೇಜರ್‌ ಒಲಿವರ್‌ ಎಲ್‌.ವಿ., ಪತ್ರಿಕೆಗಳ ಉದ್ದೇಶದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ರೂಪಿಸಲು ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ ನಡೆಸುತ್ತಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್‌.ಶಿವಪ್ಪ, ಜೀವನದಲ್ಲಿ ಏನನ್ನು ಸಾಧಿಸಬೇಕು ಎಂಬುದನ್ನು ಗಂಭೀರವಾಗಿ ಯೋಚನೆ ಮಾಡಿದರೆ ಕನಸನ್ನು ನನಸಾಗಿಸಬಹುದು. ವೈಫಲ್ಯಗಳನ್ನೂ ನಿರ್ವಹಣೆ ಮಾಡಿಕೊಂಡು ಪರಿಕಲ್ಪನಾತ್ಮಕ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್‌, ಪತ್ರಿಕೆಗಳ ಪ್ರಸ್ತುತತೆ ಹಾಗೂ ನೈತಿಕ ಮೌಲ್ಯಗಳ ಕುರಿತು ಮಾತನಾಡಿದರು.

ಹಿಂದೆ ಮಂತ್ರಿ ಒಂದೇ ಕಾರಿನಲ್ಲಿ ಬರುತ್ತಿದ್ದರು. ಈಗ ಸಣ್ಣ ಮಂತ್ರಿ ಬಂದರೂ ಸಾವಿರಾರು ಜನ ಬರುತ್ತಾರೆ. ಅವರು ಕೆಲಸಕ್ಕೆ ಬರಲಿ, ಜೈಲಿನಿಂದ ಬಿಡುಗಡೆಯಾಗಿಯೇ ಬರಲಿ ಅವರ ಹಿಂದೆ ಹತ್ತು ಸಾವಿರ ಜನ ಬರುತ್ತಾರೆ ಎಂದು ಹಿಂದೆ ಇದ್ದ ಜನಪ್ರತಿನಿಧಿಗಳ ಸರಳತೆ ಹಾಗೂ ಈಗಿನ ಜನಪ್ರತಿನಿಧಿಗಳ ಆಡಂಬರವನ್ನು ಉದಾಹರಣೆ ಸಹಿತ ವಿವರಿಸಿದರು.

ನಮ್ಮಲ್ಲಿ ನಿರ್ಣಯ ಮುಖ್ಯ. ನಿರ್ಣಯವನ್ನು ಜಾರಿ ಮಾಡುವಾಗ ಸಂದೇಹ ಇರಬಾರದು ಎಂಬುದನ್ನು ದೃಷ್ಟಾಂತದ ಮೂಲಕ ತಿಳಿಸಿದರು. ಗೆಲ್ಲುವ ಆತ್ಮವಿಶ್ವಾಸದ ಜತೆಗೆ ಅಧ್ಯಯನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕು. ವ್ಯಾಸಂಗ ಎನ್ನುವುದು ನಮ್ಮನ್ನು ಸುಡುವಂತಿರಬೇಕು ಎಂದು ಸಲಹೆ ನೀಡಿದರು. ಯುಪಿಎಸ್‌ಸಿ ಮುಖ್ಯಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವ ಎಸ್‌.ರಘುನಂದನ, ತನಕ ಡಿ.ಆನಂದ್‌, ಪುನೀತ್‌ ನಂಜಯ್ಯ ಅವರನ್ನು ಗೌರವಿಸಲಾಯಿತು.

  ನವೋದಯ ಫೌಂಡೇಷನ್‌ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್‌.ಆರ್‌.ರವಿ ಸ್ವಾಗತಿಸಿದರು.  ಪ್ರಜಾವಾಣಿ ಮೈಸೂರು ಬ್ಯೂರೊ ಮುಖ್ಯಸ್ಥರಾದ ವಿಶಾಲಾಕ್ಷಿ ಅಕ್ಕಿ, ಡೆಕ್ಕನ್‌ ಹೆರಾಲ್ಡ್‌ ಮೈಸೂರು ಬ್ಯೂರೊ ಮುಖ್ಯಸ್ಥ ಟಿ.ಆರ್‌.ಸತೀಶ್‌ ಕುಮಾರ್‌, ಪ್ರಜಾವಾಣಿ ಡೆಕ್ಕನ್‌ ಹೆರಾಲ್ಡ್‌ನ ಪ್ರಸರಣಾ ವಿಭಾಗದ ವ್ಯವಸ್ಥಾಪಕ ಬಸವರಾಜ್‌, ಪ್ರಮತಿ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್‌.ಫಣಿರಾಜ್‌ ಭಾಗವಹಿಸಿದ್ದರು. ಮಾನಸಗಂಗೋತ್ರಿ ತಂಡದ ಸದಸ್ಯರು ಜನಪದ ಗೀತೆಗಳನ್ನು ಹಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು