ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗಳಿಗೆ ನೀರು: ಭತ್ತದ ನಾಟಿ ಚುರುಕು

ಪೂರ್ವ ಮುಂಗಾರಿನಲ್ಲಿ ಮಳೆ ಕೊರತೆ: ಇಳುವರಿ ಕುಂಠಿತ; ತಾಲ್ಲೂಕಿನಲ್ಲಿ 63,198 ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯ
Last Updated 19 ಆಗಸ್ಟ್ 2021, 3:28 IST
ಅಕ್ಷರ ಗಾತ್ರ

ನಂಜನಗೂಡು: ಸಕಾಲಕ್ಕೆ ಮಳೆ ಸುರಿಯದಿದ್ದರಿಂದ ವಿಳಂಬವಾಗಿ ಬಿತ್ತನೆಗೊಳಪಟ್ಟ ಮಳೆಯಾಶ್ರಿತ ಜಮೀನುಗಳಲ್ಲಿನ ಬೆಳೆ ಅಷ್ಟಕ್ಕಷ್ಟೇ ಎಂಬಂತಿದೆ. ಇಳುವರಿಯೂ ನಿರೀಕ್ಷೆಗಿಂತ ಕಡಿಮೆಯಾಗಲಿದೆ.

ತಾಲ್ಲೂಕಿನ ದೊಡ್ಡ ಕವಲಂದೆ ಹೋಬಳಿಯ ಕೆಲವು ಪ್ರದೇಶಗಳು ಸೇರಿದಂತೆ ಶೇ 35ರಷ್ಟು ಮಳೆಯಾಶ್ರಿತ ಪ್ರದೇಶ ಹೊರತುಪಡಿಸಿದರೆ; ಉಳಿದ ಶೇ 65ರಷ್ಟು ಪ್ರದೇಶ ಖುಷ್ಕಿ ಜಮೀನುಗಳಾಗಿದ್ದು, ಕಬಿನಿ, ನುಗು, ಹುಲ್ಲಹಳ್ಳಿ, ರಾಂಪುರ ನಾಲೆಗಳಿಂದ ನೀರಾವರಿ ಸೌಲಭ್ಯವಿದೆ.

ತಾಲ್ಲೂಕಿನಲ್ಲಿ 63,198 ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯವಾಗಿದ್ದು, ಇದರಲ್ಲಿ 16,681 ಹೆಕ್ಟೇರ್ ನೀರಾವರಿ ಸೌಲಭ್ಯ ಹೊಂದಿದೆ. 6,900 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ರಾಗಿ, ಮುಸುಕಿನ ಜೋಳ ಬೆಳೆಯಲಾಗಿದ್ದು, 12,280 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ ಬೆಳೆಯ ಲಾಗಿದೆ. 2,825 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳಾದ ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು ಬಿತ್ತನೆ ಮಾಡಲಾಗಿದೆ.

ಹಿಂದಿನ ವರ್ಷ ಖುಷ್ಕಿ ಜಮೀನಿನಲ್ಲಿ ಜ್ಯೋತಿ ತಳಿಯ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗಿತ್ತು. ಪ್ರತಿ ಕ್ವಿಂಟಲ್‌ಗೆ ₹2,200ರಿಂದ ₹2,300ಕ್ಕೆ ಮಾರಾಟವಾಗಬೇಕಿದ್ದ ಜ್ಯೋತಿ ತಳಿಯ ಭತ್ತ; ಹೆಚ್ಚಿನ ಇಳುವರಿಯಿಂದಾಗಿ ಬೇಡಿಕೆ ಕುಸಿದಿತ್ತು. ಮಾರಾಟ ಮಾಡುವುದೇ ರೈತರಿಗೆಕಷ್ಟವಾಗಿತ್ತು.

ಬೆಳೆಗಾರರ ಆಗ್ರಹದ ಮೇರೆಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಂದು ಕ್ವಿಂಟಲ್‌ ಭತ್ತವನ್ನು ₹1,850ರ ದರದಲ್ಲಿ ರೈತರಿಂದ ಖರೀದಿಸಿದರೆ; ಉಳಿದ ಭತ್ತವನ್ನು ವರ್ತಕರಿಗೆ ಬೆಳೆಗಾರರು ಒಂದು ಕ್ವಿಂಟಲ್‌ಗೆ ₹1,500ಕ್ಕೆ ಮಾರಾಟ ಮಾಡಿದ್ದರಿಂದ; ಈ ಬಾರಿ ಜ್ಯೋತಿ ತಳಿಯ ಭತ್ತ ನಾಟಿ ಬದಲು ಸಣ್ಣ ಭತ್ತದ ಮೊರೆಯೊಕ್ಕಿದ್ದಾರೆ.

ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರಿನಲ್ಲಿ ಸಕಾಲಕ್ಕೆ ಮಳೆ ಬೀಳದೆ, ಹತ್ತಿಯ ಬದಲು ಸೂರ್ಯಕಾಂತಿ ಬಿತ್ತಿದವರೇ ಹೆಚ್ಚು.

1,360 ಹೆಕ್ಟೇರ್‌ನಲ್ಲಿ ಭತ್ತ, ರಾಗಿ 535, ಮುಸುಕಿನ ಜೋಳ 930, ತೊಗರಿ 175, ಉದ್ದು 3,910, ಹೆಸರು 3,925, ಅಲಸಂದೆ 4,205, ಅವರೆ 65, ನೆಲಗಡಲೆ 180, ಎಳ್ಳು 425, ಸೂರ್ಯಕಾಂತಿ 2,155, ಹರಳು 65, ಕಬ್ಬು 950, ಹೊಗೆಸೊಪ್ಪನ್ನು 1,250 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.

ಉದ್ದು, ಹೆಸರು, ಅಲಸಂದೆ ಬೆಳೆ ಕೊಯ್ಲು ಈಗಾಗಲೇ ಮುಗಿದಿದ್ದು, ತಂಬಾಕಿನ ಕೊಯ್ಲು ನಡೆದಿದೆ. ಉಳಿದ ಫಸಲು ಈಚೆಗೆ ಸುರಿದ ಮಳೆಗೆ ಸಮೃದ್ಧವಾಗಿದೆ. ಭತ್ತದ ನಾಟಿ ಚುರುಕುಗೊಂಡಿದೆ.

‘ನೀರಿನ ಸಮಸ್ಯೆ ಇಲ್ಲ’

‘ಕಬಿನಿ ಜಲಾಶಯ ಭರ್ತಿ ಆಗಿರುವುದರಿಂದ ನೀರಿನ ಸಮಸ್ಯೆ ತಲೆದೋರಿಲ್ಲ. ಭತ್ತದ ಬೆಳೆಗೆ ನೀರು ಬಿಟ್ಟಿರುವುದರಿಂದ ತಾಲ್ಲೂಕಿನಾದ್ಯಂತ ರೈತರು ಭತ್ತದ ಹೊಟ್ಲು ಪಾತಿ ಮಾಡಿಕೊಂಡು ನಾಟಿ ಮಾಡುತ್ತಿದ್ದಾರೆ. ಉತ್ತಮ ಫಸಲಿನ ನಿರೀಕ್ಷೆಯಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ದೀಪಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT