ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಸರಾ ಕವಿಗೋಷ್ಠಿ’ಯಲ್ಲಿ ಕವನ ವಾಚಿಸಿದ ಕವಿಗಳು; ಸಾಮಾಜಿಕ ತಲ್ಲಣಗಳ ಅನಾವರಣ

Last Updated 20 ಅಕ್ಟೋಬರ್ 2021, 9:10 IST
ಅಕ್ಷರ ಗಾತ್ರ

ಮೈಸೂರು: ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ರೈತರ ಬವಣೆ– ಆತ್ಮಹತ್ಯೆ, ಕ್ಷೀಣಿಸುತ್ತಿರುವ ಮಾನವೀಯತೆ, ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧ, ಶೋಷಿತರು– ದಮನಿತರ ಏಳಿಗೆಗಾಗಿ ಶ್ರಮಿಸಿದ್ದ ಅಂಬೇಡ್ಕರ್‌, ಮನಸ್ಸಿನ ತಲ್ಲಣ, ಪ್ರೇಮ ವೈಫಲ್ಯ... ಹೀಗೆ ಅನೇಕ ವಿಚಾರಗಳು, ಸಾಮಾಜಿಕ ತಲ್ಲಣಗಳು ಕಾವ್ಯದ ಮೂಲಕ ಅಭಿವ್ಯಕ್ತಗೊಂಡವು.

ಸ್ಪಂದನ ಸಾಂಸ್ಕೃತಿಕ ಪರಿಷತ್‌ ಹಾಗೂ ಕ್ರಿಯಾ ಅಭಿವ್ಯಕ್ತಿ ವತಿಯಿಂದ ನಗರದ ಗೋಕುಲಂನ ಪ್ರೊ. ಯಮುನಾಚಾರ್ಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ದಸರಾ ಕವಿಗೋಷ್ಠಿ’ಯಲ್ಲಿ ಕವಿಗಳು ವಾಚಿಸಿದ ಕವನಗಳು ಇಂದಿನ ಸಾಮಾಜಿಕ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದ್ದವು.

ಡಾ.ವಿನೋದಮ್ಮ ಅವರ ‘ಅರಿಕೆ’ ಕವನವು ರೈತರ ನೋವು, ನಲಿವಿನ ಚಿತ್ರಣವನ್ನು ಕಟ್ಟಿಕೊಟ್ಟಿತು. ‘ಇಳೆಯ ಒಡಲ ಕುಡಿಮಗ, ರೈತನೆಂದು ನನ್ನ ಹೆಸರು, ನನ್ನ ಬವಣೆ ಕಳೆಯೆ ತಾಯಿ’ ಎಂಬ ಸಾಲುಗಳಿಂದ ಆರಂಭಗೊಂಡು ಕೃಷಿ ಲಾಭದಾಯಕವಾಗಲಿ ಎಂಬ ಸದಾಶಯದೊಂದಿಗೆ ಕೊನೆಗೊಂಡಿತು.

ಸಮಾಜದಲ್ಲಿ ಸ್ವಜನ ಪಕ್ಷಪಾತ, ಜಾತೀಯತೆ, ಮೇಲು–ಕೀಳು ಮನೋಭಾವ ಮೇಳೈಸಿದ್ದು, ಸಮಾನತೆ, ನ್ಯಾಯ ಮರೀಚಿಕೆಯಾಗಿದೆ ಎಂಬ ನೋವನ್ನು ಡಾ.ಎನ್‌.ವಾಸಯ್ಯ ಅವರ ‘ಮನುಷ್ಯ ಧರ್ಮ ಎಲ್ಲಿ’ ಎಂಬ ಕವನ ವ್ಯಕ್ತಪಡಿಸಿತು.

ಹೆಣ್ಣನ್ನು ಭೋಗದ ವಸ್ತುವಿನಂತೆ ನೋಡುವ ಸಮಾಜಕ್ಕೆ ಧಿಕ್ಕಾರ ಧ್ವನಿಯಾಗಿ ಡಾ.ಜಿ.ಮಾರಪ್ಪ ಅವರ ‘ನಾಚಿಕೆಯಾಗುವುದಿಲ್ಲವೇ ನಿಮಗೆ’ ಕವಿತೆ ಮೂಡಿಬಂದಿದೆ.

‘ಕಾವಿ ಉಟ್ಟ ಬುದ್ಧ ಜಗತ್ತಿನಲ್ಲಿ ಅರಿವಿನ ಬೀಜ ಬಿತ್ತಿದ್ದ. ಅದೇ ರೀತಿ ಅಂಬೇಡ್ಕರ್‌ ಅವರು ಕೋಟು ತೊಟ್ಟು ದಮನಿತರಿಗೆ ಬೆಳಕಿನ ದಿವ್ಯದರ್ಶನ ಮಾಡಿಸಿದ್ದರು’ ಎಂಬುದನ್ನು ಡಾ.ಕುಪ್ನಳ್ಳಿ ಎಂ. ಬೈರಪ್ಪ ಅವರ ‘ಕೋಟು ತೊಟ್ಟು ಬಂದ ಬುದ್ಧತಾಯಿ’ ಎಂಬ ಕವಿತೆ ಸಾದರಪಡಿಸಿತು.

ಉಷಾ ನರಸಿಂಹನ್‌ ಅವರ ‘ಘನ ಮಹಿಮೆ’, ಪ್ರೊ.ಡಿ.ಸುಂದರಿ ಅವರ ‘ಅಬ್ಬೆಯ ಅಳಲು’, ಆರ್‌.ಸಿ.ರಾಜಲಕ್ಷ್ಮಿ ಅವರ ‘ವಿಭಿನ್ನ ನಿಲುವುಗಳು’, ಡಾ.ಎ.ಎನ್‌. ಮದನ್‌ ಕುಮಾರ್ ಅವರ ‘ಕಾವ್ಯಾಂಗನೆ’, ಎ.ಹೇಮಗಂಗಾ ಅವರ ಗಜಲ್‌, ಪ್ರೊ.ಡಿ.ಪುರುಷೋತ್ತಮ್‌ ಅವರ ‘ನಮ್ಮೊಳಗಿನ ಬುದ್ಧ’, ಎಸ್‌.ಶಶಿರಂಜನ್‌ ಅವರ ‘ಚುಕ್ಕಿ ಕನಸುಗಳ ಕ್ಯಾನ್‌ವಾಸ್‌’, ಅನುರಾಧ ಕೆ. ಸಿಂಗನಲ್ಲೂರು ಅವರ ‘ಮಾತನಾಡಬೇಕಿತ್ತು ನೀವು’, ವಿ.ತೇಜಶ್ರೀ ಅವರ ‘ಬದಲಾವಣೆ’ ಕವಿತೆಗಳು ಗಮನ ಸೆಳೆದವು.

ಜೆ.ವಿಜಯನಾಗ್‌, ನಾಗೇಂದ್ರ ಹೆಬ್ಬಾರ್‌, ಶೋಭ ನಾಗಶಯನ, ಸುಜಾತ ರವೀಶ್‌, ರಾಹುಲ್‌ ಕುಂಬರಹಳ್ಳಿ, ಲೋಹಿತ್‌ ಚ. ಕೊಣನೂರು, ಕೆ.ಪಿ.ಭಾರತಿ, ಸಿ.ಎಂ. ಶ್ವೇತ ಚಿನಕುರಳಿ, ಲಕ್ಷ್ಮಿ ಕಿಶೋರ್‌ ಅರಸ್‌, ಎನ್‌.ನವೀನ್‌ ಕುಮಾರ್‌, ನಂದಿನಿ ಶಿ.ರ. ಕೊಣನೂರು ಕವಿತೆ ವಾಚಿಸಿದರು.

ಸಾಹಿತಿ ಹಡವನಹಳ್ಳಿ ವೀರಣ್ಣಗೌಡ ಮಾತನಾಡಿ, ‘ಕವಿಗಳು ಜನರ ಸಂಕಷ್ಟವನ್ನು ಚಿತ್ರಿಸಬೇಕು. ಆಡಳಿತಶಾಹಿಯ ವೈಫಲ್ಯಗಳನ್ನು ಸಮಾಜಕ್ಕೆ ಎತ್ತಿ ತೋರಿಸಬೇಕು’ ಎಂದು ಸಲಹೆ ನೀಡಿದರು.

ವಿಮರ್ಶಕಿ ಪ್ರೊ.ಪ್ರೀತಿ ಶುಭಚಂದ್ರ ಅಧ್ಯಕ್ಷತೆ ವಹಿಸಿದ್ದರು. ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಕೆ.ಕಾಳಚನ್ನೇಗೌಡ, ಕ್ರಿಯಾ ಅಭಿವ್ಯಕ್ತಿ ಸಂಸ್ಥೆಯ ಸಂಸ್ಥಾಪಕ ಪ್ರಸನ್ನಕುಮಾರ್‌ ಕೆರಗೋಡು, ಸ್ಪಂದನ ಸಾಂಸ್ಕೃತಿಕ ಪರಿಷತ್‌ನ ಕಾರ್ಯದರ್ಶಿ ಡಾ.ಬಿ.ಬಸವರಾಜು, ಲೋಕೇಶ್‌ ಹುಣಸೂರು ಇದ್ದರು.

ಹಿಂದಿ ಭಾಷೆ ಹೇರಿಕೆಗೆ ಖಂಡನೆ

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ‘ಕೇಂದ್ರ ಸರ್ಕಾರವು ಸ್ಥಳೀಯ ಭಾಷೆಗಳ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಿದೆ. ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಹಿಂದಿ ಭಾಷಿಕರನ್ನೇ ನೇಮಿಸಲಾಗುತ್ತಿದೆ. ಇದರ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು’ ಎಂದರು.

‘ಸರಳ ದಸರಾ ಆಚರಣೆ ನೆಪದಲ್ಲಿ ದಸರಾ ಕವಿಗೋಷ್ಠಿಯನ್ನು ರದ್ದುಪಡಿಸಬಾರದಿತ್ತು. ಮುಂದಿನ ವರ್ಷಗಳಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲೇಬೇಕು’ ಎಂದು ಆಗ್ರಹಿಸಿದರು.

***

ವರ್ತಮಾನದ ಬದುಕು, ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿ ಕಾವ್ಯ ಇದೆ. ಸಮಸ್ಯೆಗಳಿಗೆ ಔಷಧಿಯಾಗಿಯೂ ಕೆಲಸ ಮಾಡುತ್ತಿದೆ.

–ಟಿ.ಸತೀಶ್‌ ಜವರೇಗೌಡ, ಸ್ಪಂದನ ಸಾಂಸ್ಕೃತಿಕ ಪರಿಷತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT