ಬುಧವಾರ, ಜನವರಿ 19, 2022
23 °C

ಕನ್ನಡದ ದಾರಿಯಲ್ಲಿ–18: ಅಂಚೆ ಪಾಲಕ; ಕನ್ನಡ ಪತ್ರಿಕೋದ್ಯಮಕ್ಕೆ ಪ್ರೇರಕ!

ಮೋಹನ್‌ ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇವರು ಅಮ್ಮಸಂದ್ರ ಸುರೇಶ್‌. ಅಂಚೆ ಕಚೇರಿಯಲ್ಲಿ ಉಪ ಪಾಲಕರು. ಕೆಲಸದ ನಂತರ ಉಳಿದೆಲ್ಲ ಸಮಯ ಕನ್ನಡ ಪತ್ರಿಕೋದ್ಯಮ ಬರಹಕ್ಕೆ ಮೀಸಲು!

ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಕೃಷಿ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೃತಿಗಳನ್ನು ಅಂಬೇಡ್ಕರ್‌ ಚಿಂತನೆಯ ಬೆಳಕಿನಲ್ಲಿ ರಚಿಸಿರುವುದು ವಿಶೇಷ.

ಇಲಾಖೆಯಲ್ಲಿ ಎರಡೂವರೆ ದಶಕಗಳಿಂದ ಕೆಲಸ ಮಾಡುತ್ತಲೇ ಕನ್ನಡ ಪತ್ರಿಕೋದ್ಯಮಕ್ಕೆ ಮಹತ್ವದ 7 ಕೃತಿಗಳನ್ನು ನೀಡಿರುವ ಸುರೇಶ್‌, 500ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.

‘ಅಂಬೇಡ್ಕರ್‌ ಬೆಳಕಿನಲ್ಲಿ ಪತ್ರಿಕೋದ್ಯಮ’, ‘ಧೀಮಂತ ಪತ್ರಕರ್ತ ಡಾ.ಬಿ.ಆರ್‌.ಅಂಬೇಡ್ಕರ್‌’, ‘ಅಭಿವೃದ್ಧಿ ಸಂವಹನ’, ‘ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಪತ್ರಿಕೋದ್ಯಮ’, ‘ಕೊರೊನಾ ತಂದ ಅನಿವಾರ್ಯತೆಗಳು’ ಕೃತಿಗಳು ಬಿಡುಗಡೆಗೊಂಡಿದ್ದು, ‘ಮಹಾನಾಯಕನ ಮಹಾ ಕೊಡುಗೆಗಳು’ ಹಾಗೂ ‘ಕನ್ನಡ ಪತ್ರಿಕೋದ್ಯಮದ ತೇರನ್ನೆಳೆದವರು’ ಕೃತಿಗಳು ಡಿಸೆಂಬರ್‌ನಲ್ಲಿ ಪ್ರಕಟಗೊಳ್ಳಲಿವೆ.

ದಶಕಗಳ ಹಿಂದೆ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದ ಕುರಿತು ಕನ್ನಡ ಕೃತಿಗಳು ಹೆಚ್ಚಿರಲಿಲ್ಲ. ಕನ್ನಡ ಮಾಧ್ಯಮದಲ್ಲಿ ಓದುವವರು ತರಗತಿಯ ಪಾಠಗಳನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಕೃಷಿ ಪತ್ರಿಕೋದ್ಯಮಕ್ಕೆ ಗ್ರಂಥಾಲಯಗಳಲ್ಲಿ ಪತ್ರಿಕೆಗಳನ್ನು ಅಧ್ಯಯನಿಸಬೇಕಿತ್ತು. ಹೀಗಾಗಿಯೇ ಮೈಸೂರು ವಿಶ್ವವಿದ್ಯಾಲಯದ ಪಿಎಚ್‌.ಡಿ ಪದವಿಗೆ ‘ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ಸುದ್ದಿ’ ವಿಷಯವನ್ನು ಸುರೇಶ್‌ ಆಯ್ದುಕೊಂಡರು. ಅದು ಪುಸ್ತಕವಾಗಿ ಪ್ರಕಟಗೊಂಡಿದೆ.

ಎರಡೂವರೆ ದಶಕಗಳ ಅವಧಿಯಲ್ಲಿ ದೇಶದ ಪತ್ರಿಕೋದ್ಯಮದ ಬೆಳವಣಿಗೆಯನ್ನು ಅಂಬೇಡ್ಕರ್‌ ಚಿಂತನೆಗಳ ಮೂಲಕ ವಿಮರ್ಶಿಸಿರುವುದು ವಿಶೇಷ. ‘ಬಾಬಾ ಸಾಹೇಬರನ್ನು ಅರ್ಥ ಮಾಡಿಕೊಂಡರೆ ದೇಶದ ಎಲ್ಲ ಸಮಸ್ಯೆಗಳು ಪರಹಾರವಾಗುತ್ತದೆ’ ಎಂಬುದು ಸುರೇಶ್ ಅಭಿಮತ.

‘ಮಾಧ್ಯಮ ಲೋಕ’ ಎಂಬ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವರ್ತಮಾನದ ವಿಶ್ಲೇಷಣೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ನವಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿರುವ ಸುರೇಶ್‌, ಹಂಪಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕ, ಸಂಪನ್ಮೂಲ ವ್ಯಕ್ತಿಯೂ ಹೌದು.

‘ತುಮಕೂರಿನ ಅಮ್ಮಸಂದ್ರ ಹುಟ್ಟೂರು. ಸಿದ್ಧಾರ್ಥ ಕಾಲೇಜಿನಲ್ಲಿ ಪತ್ರಿಕೋದ್ಯಮ ಬಿ.ಎ ಓದುವಾಗ ಅಂಬೇಡ್ಕರ್‌ ವಿಚಾರಗಳಿಂದ ಪ್ರೇರಿತನಾದೆ. ಬಡವರ, ಶೋಷಿತರಿಗೆ ದನಿಯಾಗುವ, ವ್ಯವಸ್ಥೆಯನ್ನು ತಿದ್ದುವ ಜವಾಬ್ದಾರಿ ಪತ್ರಕರ್ತರದ್ದು. ಹೀಗಾಗಿಯೇ 1995ರಲ್ಲಿ ಅಂಚೆ ಇಲಾಖೆ ಸೇರಿದರೂ ಪತ್ರಿಕೆಗ
ಳಿಗೆ ಲೇಖನ ಬರೆಯುವುದನ್ನು ನಿಲ್ಲಿಸಲಿಲ್ಲ’ ಎಂದು ಸುರೇಶ್‌ ಹೇಳುತ್ತಾರೆ.

‘ಅಂಬೇಡ್ಕರ್ ಅರ್ಥಶಾಸ್ತ್ರಜ್ಞ, ರಾಜಕೀಯ ಚಿಂತಕರಷ್ಟೇ ಆಗಿದ್ದಿಲ್ಲ. ಪತ್ರಕರ್ತರೂ ಆಗಿದ್ದರು. ವಿದ್ಯಾರ್ಥಿಗಳು ಅಂಬೇಡ್ಕರ್‌ ಪತ್ರಿಕಾ ಬರೆಹಗಳನ್ನು ಓದಬೇಕು’ ಎಂಬುದು ಅವರ ಪ್ರತಿಪಾದನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು