ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ರಾಮಕೃಷ್ಣ ವಿದ್ಯಾಶಾಲೆ

ಪ್ರಜಾವಾಣಿ ಕ್ವಿಜ್‌: ಮೈಸೂರು ವಲಯಮಟ್ಟದ ಸ್ಪರ್ಧೆ
Last Updated 13 ಜನವರಿ 2020, 10:42 IST
ಅಕ್ಷರ ಗಾತ್ರ

ಮೈಸೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ, ‘ದೀಕ್ಷಾ’ ಸಂಸ್ಥೆ ಸಹಯೋಗದಲ್ಲಿ ಸೋಮವಾರ ನಡೆದ ಮೈಸೂರು ವಲಯಮಟ್ಟದ ‘ಪ್ರಜಾವಾಣಿ ಕ್ವಿಜ್‌’ ಸ್ಪರ್ಧೆಯಲ್ಲಿ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಚಾಂಪಿಯನ್‌ ಆಗಿದೆ.

ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಶಾಲೆಯ ಗೌರವ್‌ ಚಂದನ್‌ ಮತ್ತು ಗಗನ್‌ ಚಂದನ್‌ ಅಗ್ರಸ್ಥಾನ ಪಡೆದುಕೊಂಡರು. ಮೊದಲ ಮೂರು ಸ್ಥಾನಗಳನ್ನೂ ರಾಮಕೃಷ್ಣ ವಿದ್ಯಾಶಾಲೆ ಪಡೆದದ್ದು ವಿಶೇಷ.

ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧ ಶಾಲೆಗಳ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು. ಮೊದಲು ಎಲ್ಲ ತಂಡಗಳಿಗೆ ಪ್ರಾಥಮಿಕ ಸುತ್ತಿನ ಲಿಖಿತ ಪರೀಕ್ಷೆ ನಡೆಸಲಾಯಿತು. 20 ಪ್ರಶ್ನೆಗಳನ್ನು ಕೇಳಲಾಯಿತು. ಹೆಚ್ಚು ಅಂಕ ಪಡೆದ ಆರು ತಂಡಗಳ 12 ವಿದ್ಯಾರ್ಥಿಗಳನ್ನು ಪ್ರಧಾನ ಹಂತಕ್ಕೆ ಆಯ್ಕೆ ಮಾಡಲಾಯಿತು.

ಕೌಟಿಲ್ಯ ವಿದ್ಯಾಲಯದ ಒಂದು ತಂಡ, ಸದ್ವಿದ್ಯಾ ಪ್ರೌಢಶಾಲೆಯ ಎರಡು ತಂಡಗಳು ಮತ್ತು ರಾಮಕೃಷ್ಣ ವಿದ್ಯಾಶಾಲೆಯ ಮೂರು ತಂಡಗಳು ಪ್ರಧಾನ ಸುತ್ತಿನಲ್ಲಿ ಪೈಪೋಟಿ ನಡೆಸಿದವು.

ಪ್ರಧಾನ ಹಂತದಲ್ಲಿ ಐದು ಸುತ್ತುಗಳಲ್ಲಿ ಪ್ರಶ್ನೆಗಳನ್ನು ಕೇಳಲಾಯಿತು. ರಾಮಕೃಷ್ಣ ವಿದ್ಯಾಶಾಲೆಯ ಎರಡು ತಂಡಗಳು ತಲಾ 55 ಅಂಕಗಳನ್ನು ಪಡೆದು ಸಮಬಲ ಸಾಧಿಸಿದವು. ಇದರಿಂದ ವಿಜೇತರನ್ನು ನಿರ್ಣಯಿಸಲು ಮತ್ತೊಂದು ಪ್ರಶ್ನೆ ಕೇಳಲಾಯಿತು. ಸರಿಯಾದ ಉತ್ತರ ನೀಡಿದ ಗೌರವ್‌ ಮತ್ತು ಗಗನ್‌ ಚಾಂಪಿಯನ್‌ ಆಗಿ ಜ.30ರಂದು ಬೆಂಗಳೂರಿನಲ್ಲಿ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆದುಕೊಂಡರು.

ಇದೇ ಶಾಲೆಯ ಸಂಕಲ್ಪ್‌ ಮತ್ತು ವಿಹಾನ್‌ ‘ರನ್ನರ್‌ ಅಪ್‌’ ಆದರು. ಶ್ರೀರಾಂ ರೆಡ್ಡಿ ಹಾಗೂ ಸಿದ್ದಾರ್ಥ್‌ ಮೂರನೇ ಸ್ಥಾನ ಗಳಿಸಿದರು. ಸದ್ವಿದ್ಯಾ ಪ್ರೌಢಶಾಲೆಯ ಚಿರಾಗ್‌–ದೀಪಕ್ 4ನೇ ಸ್ಥಾನ , ಧ್ಯಾನ್‌–ಸುಹಾಸ್‌ 5ನೇ ಸ್ಥಾನ ಹಾಗೂ ಕೌಟಿಲ್ಯ ವಿದ್ಯಾಲಯದ ಪರೀಕ್ಷಿತ್‌–ಪ್ರಣವ್‌ 6ನೇ ಸ್ಥಾನ ತಮ್ಮದಾಗಿಸಿಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಡಿಪಿಐ ಪಾಂಡುರಂಗ, ನವೋದಯ ಫೌಂಡೇಷನ್‌ನ ರವಿ, ಜೀನಿಯಸ್‌ ಕಾಲೇಜಿನ ಪ್ರಾಂಶುಪಾಲರಾದ ಸುರೇಖಾ ಪ್ರಭು, ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್‌) ಮಾರುಕಟ್ಟೆ ವ್ಯವಸ್ಥಾಪಕ ರಾಜ್‌ಕುಮಾರ್‌ ಪಾಲ್ಗೊಂಡರು. ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌ ಕ್ವಿಜ್‌ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT