ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯನ್ನು ಪ್ರತಾಪ ಸಿಂಹ ಒಬ್ಬನೇ ಅಭಿವೃದ್ಧಿ ಮಾಡುತ್ತಿಲ್ಲ: ವಿಶ್ವನಾಥ್

Last Updated 25 ಜುಲೈ 2022, 14:34 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ಜಿಲ್ಲೆಯಲ್ಲಿಸಂಸದ ಪ್ರತಾಪ ಸಿಂಹ ಒಬ್ಬನೇ ಅಭಿವೃದ್ಧಿ ಕೆಲಸಗಳೆಲ್ಲವನ್ನೂ ಮಾಡುತ್ತಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ತಮ್ಮ 75ನೇ ವರ್ಷದ ಹುಟ್ಟಹಬ್ಬಕ್ಕೆ ರಾಯಚೂರು ಮೂಲದ ಅಭಿಮಾನಿ ನಂದಾ ಎನ್ನುವವರು ನೀಡಿದ ಆಂಬ್ಯುಲೆನ್ಸ್ ವಾಹನವನ್ನು ನಗರದ ಕೆ.ಆರ್.ಆಸ್ಪತ್ರೆಯ ನೆಪ್ರೋಲಜಿ ವಿಭಾಗದ ಮುಖ್ಯಸ್ಥರಿಗೆ ಸೋಮವಾರ ಹಸ್ತಾಂತರಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಯಾವುದೇ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಎಲ್ಲರೂ ನಾನೇ ಮಾಡಿದ್ದು, ನಾನೇ ಮಾಡಿದ್ದು ಎನ್ನುತ್ತಿದ್ದಾರೆ. ಪ್ರತಾಪ ಅಲ್ಲದೇ, ಪ್ರತಿಯೊಬ್ಬರೂ ಕ್ರೆಡಿಟ್‌ ಪಡೆದುಕೊಳ್ಳುವ ಕಸರತ್ತಿನಲ್ಲಿ (ಕ್ರೆಡಿಟ್ ವಾರ್) ತೊಡಗಿದ್ದಾರೆ. ಸರ್ಕಾರಕ್ಕೆ ಜನರು ನೀಡುವ ತೆರಿಗೆಯಿಂದ ಖಜಾನೆಗೆ ಹಣ ಬರುತ್ತದೆ. ಜನಪ್ರತಿನಿಧಿಗಳಾದ ನಾವು ಟ್ರಸ್ಟಿಗಳಾಗಿ ಕೆಲಸ ಮಾಡುತ್ತೇವೆಯಷ್ಟೆ. ಆದ್ದರಿಂದ ಅಭಿವೃದ್ಧಿ ವಿಚಾರದಲ್ಲಿ ಕ್ರೆಡಿಟ್‌ ವಾರ್‌ ಸರಿಯಲ್ಲ’ ಎಂದು ತಿಳಿಸಿದರು.

---

ದೇವೇಗೌಡರ ಕುಟುಂಬವನ್ನೇಕೆ ಪ್ರಶ್ನಿಸುವುದಿಲ್ಲ: ವಿಶ್ವನಾಥ್

ಮೈಸೂರು: ಬಿ.ಎಸ್. ಯಡಿಯೂರಪ್ಪ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೇಳಿರುವುದನ್ನು ಸಮರ್ಥಿಸಿಕೊಂಡ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನೆ ಮಂದಿಯೆಲ್ಲಾ ರಾಜಕಾರಣದಲ್ಲಿದ್ದಾರೆ. ಅದನ್ನೇಕೆ ಯಾರೂ ಪ್ರಶ್ನಿಸುವುದಿಲ್ಲ’ ಎಂದು ಕೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಸತತ 8 ಬಾರಿ ಪ್ರತಿ‌ನಿಧಿಸಿರುವ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಕೋರಿದ್ದರಲ್ಲಿ ತಪ್ಪೇನಿಲ್ಲ’ ಎಂದು ಹೇಳಿದರು.

‘ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಅವರ ಕೊಡುಗೆ ಅಪಾರವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅವಶ್ಯವಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು’ ಎಂದರು.

ಕಾಂಗ್ರೆಸ್ ಪುಂಗಿ ಊದುವವರಾರು?

‘ಬರೇ ಸಿದ್ದರಾಮಯ್ಯ ಪುಂಗಿ ಊದಿದರೆ ಕಾಂಗ್ರೆಸ್ ಪುಂಗಿ ಊದುವವರು ಯಾರು?’ ಎಂದು ಕಟುವಾಗಿ ಪ್ರಶ್ನಿಸಿದ ವಿಶ್ವನಾಥ್, ‘ಕಾಂಗ್ರೆಸ್ಸಿನ ಉತ್ಸವ ನಡೆಯಬೇಕಿತ್ತು. ಇಂದಿರಾ ಗಾಂಧಿ, ಡಿ.ದೇವರಾಜ ಅರಸು ಸ್ಮರಿಸಿ ನಾಡು–ದೇಶಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಮಾತನಾಡಬೇಕಿತ್ತು’ ಎಂದರು.

‘ಕಲಾಮಂದಿರದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರೇಳಲಿಲ್ಲ. ಎಲ್ಲವನ್ನೂ ಮಾಡಿದ್ದು ತಾನೇ ಎಂದು ಬಿಂಬಿಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇರಬಾರದು’ ಎಂದರು.

‘ಸಮಾಜಕ್ಕೆ ನ್ಯಾಯ ಒದಗಿಸಿಕೊಡಲು ಜಾತಿ ರಾಜಕಾರಣ ಅವಶ್ಯವಿದೆ. ಅದು ಅತಿಯಾದರೆ ಒಳ್ಳೆಯದಲ್ಲ. ಎಲ್ಲಾ ಸಮಾಜದವರು ಮತ್ತು ಧರ್ಮೀಯರು ಬೆಂಬಲಿಸಿದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಕಾಂಗ್ರೆಸ್‌ನಲ್ಲಿ ಒಕ್ಕಲಿಗ ವರ್ಸಸ್ ಅಲ್ಪಸಂಖ್ಯಾತ ರಾಜಕಾರಣ ಮುನ್ನೆಲೆಗೆ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿ ಹೆಸರಿನಲ್ಲಿ ಸಮಾಜ ಒಡೆಯುವುದು ಸರಿಯಲ್ಲ’ ಎಂದು ಹೇಳಿದರು.

ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಸಾ.ರಾ.ಮಹೇಶ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್‌ನಲ್ಲಿ ಪುತ್ರೋತ್ಸವಕ್ಕೆ ಎಲ್ಲವೂ ಸಿದ್ಧವಾಗಿದೆ. ಅದರಲ್ಲಿ ಹೊಸತೇನಿಲ್ಲ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ತಮ್ಮ ಪುತ್ರ ಅಮಿತ್ ದೇವರಹಟ್ಟಿ ಭಾಗಿಯಾಗಿದ್ದು ಆತನ ವೈಯಕ್ತಿಕ ನಿರ್ಧಾರ’ ಎಂದಷ್ಟೆ ವಿಶ್ವನಾಥ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT