ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸಂಸ್ಕೃತ ಪಾಠಶಾಲೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

Last Updated 20 ಜೂನ್ 2022, 16:31 IST
ಅಕ್ಷರ ಗಾತ್ರ

ಮೈಸೂರು: ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಕನ್ನಡ, ತಮಿಳು, ತೆಲುಗು ಮೊದಲಾದ ಪ್ರಾದೇಶಿಕ ಭಾಷೆಗಳೊಂದಿಗೆ ಸಂಸ್ಕೃತಕ್ಕೂ ಉತ್ತೇಜನ ನೀಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ಚಾಮುಂಡಿ ಬೆಟ್ಟ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ನಿರ್ಮಿಸಿರುವ ಕೆಎಸ್ಎಸ್ (ಕ್ಯಾತನಹಳ್ಳಿ ಸಾಹುಕಾರ್ ಸಿದ್ದಲಿಂಗಯ್ಯ) ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಗಳನ್ನು ಉದ್ಘಾಟಿಸಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಇಂಗ್ಲಿಷ್‌ನಲ್ಲಿ ವ್ಯಾಖ್ಯಾನಿಸಿರುವ ‘ಪತಂಜಿಲಿ ಯೋಗ ಸೂತ್ರಾಸ್’, ‘ಶಿವ ಸೂತ್ರಾಸ್’ ಹಾಗೂ ‘ನಾರದ ಭಕ್ತಿ ಸೂತ್ರಾಸ್’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ದೇಶದ ಎಲ್ಲರಿಗೂ ಶುದ್ಧ ಆಹಾರ ಸಿಗುವಂತಾಗಬೇಕು ಎನ್ನುವುದು ನಮ್ಮ ಆಶಯ. ಶುದ್ಧ ಆಹಾರ ದೊರೆತರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವಾಗಲಿದೆ. ಇದರೊಂದಿಗೆ, ಭಾರತಮಾತೆಯನ್ನು ಕೆಮಿಕಲ್‌ಗಳಿಂದ ಮುಕ್ತಗೊಳಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಮಾಡುವುದು ಬಹಳಷ್ಟಿದೆ; ಸಂತರು, ಶ್ರೀಗಳ ಆಶೀರ್ವಾದದೊಂದಿಗೆ ಜನರ ಅಪೇಕ್ಷೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ಕನ್ನಡದಲ್ಲಿ ಮಾತು... ಚಾಮುಂಡಿ ಕೃಪೆಯಿಂದ:ಕನ್ನಡದಲ್ಲಿ ಮಾತು ಆರಂಭಿಸಿದ ಅವರು, ಸುತ್ತೂರು ಮಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಾಮುಂಡಿಯ ಕೃಪೆಯಿಂದಾಗಿ‌ ಇಲ್ಲಿಗೆ‌ ಬಂದಿದ್ದೇನೆ. ಸಂತರ ಆಶೀರ್ವಾದ ಪಡೆದು ಧನ್ಯತೆಯನ್ನು ಅನುಭವಿಸಿದ್ದೇನೆ. ರಾಜ್ಯದಲ್ಲಿರುವ ಮಠಗಳ ಪರಂಪರೆಗೆ‌ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು. ವಿವಿಧ ಮಠಗಳ ಹೆಸರನ್ನೂ ಅವರು ಉಲ್ಲೇಖಿಸಿದರು.

‘ಸಮಾಜ ವಿಜ್ಞಾನದ ಉತ್ಕೃಷ್ಟ ಸಂಪುಟ ನಮ್ಮ‌ ಬಳಿ ಇದೆ. ನಾರದ ಸೂತ್ರದ ಮೂಲಕ ಮಾನವೀಯ ಮೌಲ್ಯಗಳನ್ನು ಅದರಲ್ಲಿ ಕಾಣಬಹುದು’ ಎಂದರು.

‘ಜ್ಞಾನಕ್ಕಿಂತ ಸಮಾನವಾದುದು ಯಾವುದೂ ಇಲ್ಲ. ಈ ನಿಟ್ಟಿನಲ್ಲಿ ಯುಗಗಳೇ ಬದಲಾದರೂ ಭಾರತದ ಚೇತನ ಕಡಿಮೆ ಆಗುವುದಿಲ್ಲ.‌ ಸಂತ, ಋಷಿ, ಮುನಿ, ಆಚಾರ್ಯ, ಭಗವಂತನ ಮೂಲಕ ದೇಶವು ಪುನರ್ಜೀವಿಸುತ್ತಿರುತ್ತದೆ. ಮಂದಿರ ಹಾಗೂ ಮಠಗಳ ಮೂಲಕ ದೇಶದ ಜ್ಞಾನ ಪ್ರಜ್ವಲಿಸುತ್ತಿರುತ್ತದೆ. ಹಲವು ಮಠಗಳನ್ನು ಹೊಂದಿರುವ ಕರ್ನಾಟಕವು ವಿದ್ಯಾದಾನವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ’ ಎಂದು ಹೇಳಿದರು.

‘ಸತ್ಯದ ಅಸ್ತಿತ್ವವು ಸಂಶೋಧನೆಯಿಂದ ಅಗುವುದಿಲ್ಲ; ಸೇವೆಯಿಂದ ಆಗುತ್ತದೆ. ಈ ನಿಟ್ಟಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಆಧ್ಯಾತ್ಮಿಕ, ಧಾರ್ಮಿಕ ಅಲ್ಲದೆ‌ ಶಿಕ್ಷಣ ಕ್ಷೇತ್ರದಲ್ಲೂ ದೊಡ್ಡ ಯೋಗದಾನ ನೀಡುತ್ತಿದೆ. ಭಗವಾನ್ ಬಸವೇಶ್ವರರ ಪ್ರೇರಣೆಯಂತೆ ನಾಡಿನ ಮಠಗಳು‌ ತ್ರಿವಿಧ ದಾಸೋಹ ಮಾಡುತ್ತಿವೆ’ ಎಂದು ಶ್ಲಾಘಿಸಿದರು.

ಮೈಸೂರಿನಿಂದ ಪ್ರಕಟವಾಗುವ ದೇಶದ ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ ಬಗ್ಗೆಯೂ ಪ್ರಧಾನಿ ಉಲ್ಲೇಖಿಸಿದರು.

ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಧ್ಯಕ್ಷತೆ‌ ವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ,‌ ಸಂಸದ ಪ್ರತಾಪ ಸಿಂಹ ಪಾಲ್ಗೊಂಡಿದ್ದರು.

ತಾಯಿ ಜೊತೆಗಿನ ಕಲಾಕೃತಿ ಉಡುಗೊರೆ
ಸುತ್ತೂರು ಶ್ರೀಗಳು ಮೋದಿ ಅವರಿಗೆ ರುದ್ರಾಕ್ಷಿ ಮಾಲೆ, ದೊಡ್ಡದಾದ ಹೂವಿನ ಹಾರ ಹಾಗೂ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಬಸವಣ್ಣನವರ ಫೋಟೊ ಕೂಡ ನೀಡಿದರು. ಆ ಫೋಟೊಗೆ ಮೋದಿ ನಮಸ್ಕಾರ ಮಾಡಿದ್ದು ವಿಶೇಷವಾಗಿತ್ತು.ಮೋದಿ ತಮ್ಮ ತಾಯಿಯೊಂದಿಗೆ ಕುಳಿತಿರುವ ಚಿತ್ರದ ದೊಡ್ಡ ಕಲಾಕೃತಿಯನ್ನು ಶ್ರೀಗಳು ಸ್ಮರಣಿಕೆಯಾಗಿ ನೀಡಿದ್ದು ಗಮನಸೆಳೆಯಿತು.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಂಸ್ಕೃತವು ಪ್ರಾಚೀನ ಭಾಷೆ. ಅನೇಕ ಭಾಷೆಗಳ ಮಾತೃ ಭಾಷೆಯೂ ಹೌದು. ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಪ್ರಾಚೀನ ಸಂಸ್ಕೃತಿ ಬಗ್ಗೆ ಹೊಂದಿರುವ ಅಭಿಮಾನದ ಸಂಕೇತವಾಗಿದೆ ಎಂದರು.

ಸುತ್ತೂರು ಶ್ರೀಮಠವು ಶಾಂತಿ, ಸಮಾನತೆ, ಸಹಬಾಳ್ವೆ ಮೂಡಿಸುವ ಕೆಲಸವನ್ನು ಮಾಡುತ್ತಿದೆ. 85 ವರ್ಷಗಳ ಹಿಂದೆ ಕ್ಯಾತನಹಳ್ಳಿ ಸಾಹುಕಾರ್ ಸಿದ್ದಲಿಂಗಯ್ಯ (ಕೆಎಸ್ಎಸ್) ಅವರು ಸಂಸ್ಕೃತ ಶಾಲೆಗೆ ಕಟ್ಟಡ ನೀಡಿದ್ದರು. ಹೀಗಾಗಿ ಅವರ ಹೆಸರನ್ನೇ ಮುಂದುವರಿಸಿಕೊಂಡು ಬರಲಾಗುತ್ತಿದೆ. ಈಗ ಆ ಕಟ್ಟಡವನ್ನು ನವೀಕರಿಸಲಾಗಿದೆ. 15ರಿಂದ ಪ್ರಾರಂಭವಾದ ಶಾಲೆಯಲ್ಲಿ ಈಗ 450 ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.

ಮೋದಿ ಅವರು ಒಮ್ಮೆ ಸುತ್ತೂರು, ನಂತರ ರಾಜೇಂದ್ರ ಶ್ರೀಗಳ ಶತಮಾನೋತ್ಸವಕ್ಕೆ ಬಂದಿದ್ದರು. ಈಗ 3ನೇ ಬಾರಿಗೆ ಮಠಕ್ಕೆ ಭೇಟಿ ನೀಡಿದ್ದಾರೆ ಎಂದರು.

ದೇಶವು ಹಿಂದೆಂದೂ ಕಾಣದಷ್ಟು ಅಭಿವೃದ್ಧಿಯನ್ನು ಅವರ ಅವಧಿಯಲ್ಲಿ ಕಂಡಿದೆ. ಕಳೆದ ಎಂಟು ವರ್ಷಗಳಿಂದ ರಜೆಯನ್ನೇ ಪಡೆಯದೆ ಪ್ರಧಾನಿ ಕೆಲಸ ಮಾಡಿದವರು ಯಾರಾದರೂ ಇದ್ದರೆ ಅವರು ಮೋದಿ ಮಾತ್ರ. ಇಂತಹ ನಾಯಕನನ್ನು ವಿಶ್ವವು ಇತ್ತೀಚಿನ ದಿನಗಳಲ್ಲಿ ಕಂಡಿಲ್ಲ. ಮೋದಿ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಅವರು ನಿರೂಪಿಸಿದ್ದಾರೆ. ಕಾಶ್ಮೀರ, ಶ್ರೀರಾಮ‌‌ ಮಂದಿರ‌ ಮೊದಲಾದ ಜಟಿಲ ಸಮಸ್ಯೆಗಳನ್ನು ಅವರು ಬಗೆಹರಿಸಿದ್ದಾರೆ ಎಂದು ಶ್ರೀಗಳು ಶ್ಲಾಘಿಸಿದರು.

ವಿಜಯಪುರ ಜ್ಞಾನಯೋಗಾಶ್ರಮದಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮೋದಿ ಅವರನ್ನು ನೋಡುವುದೇ ಸೌಭಾಗ್ಯ. ಇಂತಹ ಪ್ರಧಾನಿ ದೊರೆತದ್ದು ದೇಶದ ಸುದೈವ. ಜಗತ್ತಿನ ಅನೇಕ ರಾಷ್ಟ್ರಗಳ ಜನರು ಅವರನ್ನು ಪ್ರೀತಿಸುವುದು ಮಹತ್ವದ್ದು. ಇಷ್ಟೆಲ್ಲ ಕಾರ್ಯಕ್ರಮಗಳ ನಡುವೆಯೂ ಅವರ ಪ್ರಸನ್ನತೆ ಕಡಿಮೆ ಆಗುವುದಿಲ್ಲ ಎಂದು ಹೊಗಳಿದರು.

ಮೋದಿ ಅವರಿಗೆ ಕಿಸೆಗಳಿವೆ. ಆದರೆ ಅವುಗಳನ್ನು ತುಂಬುವ ಮನಸ್ಸಿಲ್ಲ. ತಮ್ಮ ಮಾತುಗಳ ಮೂಲಕ ಜನರ ಮನಸ್ಸನ್ನು ಅರಳಿಸುತ್ತಾರೆ. ದೇಶ ಕಂಡ ಬಹಳ ಅಪರೂಪದ ಪ್ರಧಾನಿ. ಅವರು ನೂರು ವರ್ಷ ಚೆನ್ನಾಗಿ ಬದುಕಲಿ ಎಂದು ಹಾರೈಸಿದರು.

ನಿಮ್ಮನ್ನು, ನಿಮ್ಮ ಜನರನ್ನು ಹಾಗೂ ಜಗತ್ತನ್ನೆಲ್ಲ ಪ್ರೀತಿಸುವುದೇ ಯೋಗ ಎಂದು ವ್ಯಾಖ್ಯಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT