ಶನಿವಾರ, ಮಾರ್ಚ್ 25, 2023
22 °C
ಚಿತ್ರಮಂದಿರಗಳ ಮುಂದೆ ಶ್ರದ್ಧಾಂಜಲಿ; ಚಿತ್ರರಂಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಕನಸು ಕಂಡಿದ್ದ ಅಪ್ಪು

ನಟ ಪುನೀತ್‌ ನೆನೆದು ದೀಪಗಳೂ ಮರುಗಿದವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಾಂಸ್ಕೃತಿಕ ನಗರಿಯ ಎಲ್ಲ ಚಿತ್ರಮಂದಿರಗಳ ಮುಂದೆ ಭಾನುವಾರ ಸಂಜೆ ದೀಪಗಳು ಬೆಳಗಿದವು. ಕೆಲವರು ಮೋಂಬತ್ತಿ ಬೆಳಗಿದರೆ, ಮತ್ತೆ ಹಲವರು ದೀಪಗಳನ್ನಿಡಿದು ನಿಂತರು. ಮೌನಕ್ಕೆ ಜಾರಿದ ಎಲ್ಲರೂ ನಟ ಪುನೀತ್‌ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ಕರ್ನಾಟಕ ಚಿತ್ರಮಂದಿರಗಳು, ಪ್ರೇಕ್ಷಕರು ಹಾಗೂ ಅಭಿಮಾನಿಗಳಿಂದ ಚಿತ್ರಮಂದಿರಗಳಲ್ಲಿ ಹಮ್ಮಿಕೊಂಡಿದ್ದ ‘ಪುನೀತ್‌ ರಾಜ್‌ಕುಮಾರ್ ಅವರಿಗೆ ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ ಹಾಗೂ ಭಾಷ್ಪಾಂಜಲಿ’ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಕಂಡು ಬಂದವು.

ಸಂಜೆ 6 ಗಂಟೆಯಾಗುತ್ತಿದ್ದಂತೆ ಚಿತ್ರಮಂದರಿಗಳ ಮುಂದೆ ಪುನೀತ್‌ ರಾಜ್‌ಕುಮಾರ್ ಅವರ ಭಾವಚಿತ್ರವನ್ನಿಟ್ಟು, ವಿವಿಧ ಬಗೆಯ ಹೂವುಗಳನ್ನು ಅರ್ಪಿಸಲಾಯಿತು. ಎಲ್ಲರೂ ದೀಪಗಳನ್ನು ಬೆಳಗಿದರು. ಪುನೀತ್ ನಟನೆಯ ಚಿತ್ರಗಳ ಗೀತೆಗಳನ್ನು ಹಾಡುವ ಮೂಲಕ ಹಾಗೂ ಚಿತ್ರಮಂದಿರದಲ್ಲಿ ಪ್ರದರ್ಶಿಸುವ ಮೂಲಕ ಭಾವಪೂರ್ಣವಾದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಗಾಯತ್ರಿ ಚಿತ್ರಮಂದಿರ, ಉಡ್‌ಲ್ಯಾಂಡ್, ಲಿಡೊ, ಸಂಗಮ್, ಸ್ಟರ್ಲಿಂಗ್, ಡಿಆರ್‌ಸಿ ಸೇರಿದಂತೆ ಅನೇಕ ಚಿತ್ರಮಂದಿರಗಳಲ್ಲಿ ಈ ದೃಶ್ಯಗಳು ಕಂಡು ಬಂದವು. ಚಿತ್ರಮಂದಿರಗಳ ಕಾರ್ಮಿಕರು, ಮಾಲೀಕರೊಂದಿಗೆ ಪುನೀತ್‌ ಅಭಿಮಾನಿಗಳೂ ಜತೆಯಾಗಿ ಮೌನ ಆಚರಿಸಿದರು.

ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದ ಉಪಾಧ್ಯಕ್ಷ ಎಂ.ಆರ್.ರಾಜರಾಂ ಅವರು ತಮ್ಮ ಗಾಯತ್ರಿ ಚಿತ್ರಮಂದಿರ ಮುಂದೆ ಪುಷ್ಪನಮನ ಸಲ್ಲಿಸಿದರು. ನಂತರ ಮಾತ ನಾಡಿದ ಅವರು, ‘ಪುನೀತ್‌ ಅವರು ಸಂಸ್ಥೆಯೊಂದನ್ನು ಸ್ಥಾಪಿಸುವ ಮೂಲಕ ಯುವ ಪ್ರತಿಭೆಗಳನ್ನು ಹೊರ ತರುವ ಕೆಲಸಕ್ಕೆ ಮುಂದಾಗಿದ್ದರು. ಅಷ್ಟರಲ್ಲಿ ವಿಧಿ ಅವರನ್ನು ಕರೆದು ಕೊಂಡು ಬಿಟ್ಟಿತು’ ಎಂದು ವಿಷಾದಿಸಿದರು.

ಗಾಯತ್ರಿ ಚಿತ್ರಮಂದಿರದಲ್ಲಿ ಈಗಾಗಲೇ ಡಾ.ರಾಜ್‌ಕುಮಾರ್ ಅವರ ಭಾವಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸದ್ಯದಲ್ಲೇ ಪುನೀತ್‌ ರಾಜ್‌ ಕುಮಾರ್ ಅವರ ಭಾವಚಿತ್ರಗಳನ್ನೂ ಪ್ರದರ್ಶನಕ್ಕಿಡ ಲಾಗುವುದು ಎಂದರು.

ಡಿಆರ್‌ಸಿ ಚಿತ್ರಮಂದಿರದ ಮಾಲೀಕ ಸಿ.ಆರ್.ಹನುಮಂತು ಮಾತನಾಡಿ, ‘ಪುನೀತ್‌ರಾಜ್‌ಕುಮಾರ್ ಅವರಂತಹ ಸಮಾಜಮುಖಿ ವ್ಯಕ್ತಿತ್ವವುಳ್ಳರು ಮತ್ತೆ ಸಿಗುವುದಿಲ್ಲ. ಅವರು ಮತ್ತೆ ಹುಟ್ಟಿ ಬಂದು ನಮ್ಮೊಂದಿಗೆ ಬೆರೆಯಲಿ’ ಎಂದು ಆಶಿಸಿದರು.

‘ಕನ್ನಡ ಚಿತ್ರರಂಗವನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕು ಎಂಬುದು ಪುನೀತ್ ಅವರ ಕನಸಾಗಿತ್ತು’ ಎಂದು ಸ್ಮರಿಸಿದ ಚಿತ್ರಮಂದಿರದ ವೈಶಾಲಿ ಹನುಮಂತು, ‘ಅವರ ಕನಸು ಈಡೇರಿಸಲು ಎಲ್ಲರೂ ಶ್ರಮಿಸಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು