ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಸ್ ಬೆನ್ನತ್ತಿ ಚಿಕಿತ್ಸೆ: ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರಿನ ಎನ್.ಆರ್. ಕ್ಷೇತ್ರದ ಕೆಲವು ಕಡೆ ಲಾಕ್‌ಡೌನ್‌: ಧಾರಾವಿ ಮಾದರಿ ಬಳಕೆ
Last Updated 13 ಜುಲೈ 2020, 15:45 IST
ಅಕ್ಷರ ಗಾತ್ರ

ಮೈಸೂರು: ’ಎನ್‌.ಆರ್.ಕ್ಷೇತ್ರದ ಕೆಲವು ಪ್ರದೇಶಗಳನ್ನು ಲಾಕ್‌ಡೌನ್‌ ಮಾಡಲಾಗುವುದು. ಸೋಂಕು ಹೆಚ್ಚುತ್ತಿರುವ ಕಡೆ ವೈರಸ್‌ನ ಬೆನ್ನತ್ತಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ‘ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೋಮವಾರ ಇಲ್ಲಿ ತಿಳಿಸಿದರು.

’ಮರಣದ ಪ್ರಮಾಣ ಕಡಿಮೆ ಮಾಡಲಿಕ್ಕಾಗಿ ಇದೀಗ ಕೆಲ ಪ್ರದೇಶಗಳಲ್ಲಿ ಲಾಕ್‌ಡೌನ್‌ ಮಾಡಲಾಗುತ್ತಿದೆ. ಇಲ್ಲಿ ಸರ್ವೆ ನಡೆಸುತ್ತೇವೆ. ಇದೇ ಸಂದರ್ಭ ಆಂಟಿಜೆನ್ ಟೆಸ್ಟ್‌ ಮಾಡಿ, ಸ್ಥಳದಲ್ಲೇ ವರದಿ ಪಡೆಯುತ್ತೇವೆ. ಮುಂಬಯಿಯ ಧಾರಾವಿ ಮಾದರಿ ಬಳಸಲಿದ್ದೇವೆ‘ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

’ಇನ್ನೆರೆಡು ದಿನದಲ್ಲಿ ಸರ್ವೆ ಆರಂಭವಾಗಲಿದ್ದು, ವಾರದೊಳಗೆ ಮುಗಿಯಲಿದೆ. ಸರ್ವೆ ಸಂದರ್ಭ ಎಲ್ಲರೂ ಮನೆಯಲ್ಲಿದ್ದರೆ ಒಳ್ಳೆಯದು. ಇದರಿಂದ ಪರೀಕ್ಷೆಗೆ ಅನುಕೂಲವಾಗಲಿದೆ‘ ಎಂದು ಅವರು ತಿಳಿಸಿದರು.

’ಜನರು ಪರೀಕ್ಷೆಗಾಗಿ ಹುಡುಕಿಕೊಂಡು ಹೋಗುವುದು ಬೇಡ. ನಾವೇ ಜನರಿದ್ದಲ್ಲಿಗೆ ಹೋಗಿ ಪರೀಕ್ಷೆ ಮಾಡುತ್ತೇವೆ. ಇದರಿಂದ ಜನರಿದ್ದಲ್ಲಿಯೇ ಸೋಂಕು ಪತ್ತೆ ಹಚ್ಚಲು ಸಹಕಾರಿಯಾಗಲಿದೆ‘ ಎಂದರು.

’ಮೈಸೂರು ಜಿಲ್ಲೆಯಲ್ಲಿ ಲಾಕ್‌ಡೌನ್‌ ಸದ್ಯಕ್ಕಿಲ್ಲ. ಅಗತ್ಯಕ್ಕನುಗುಣವಾಗಿ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಗತ್ಯವಿದ್ದರೆ ಮಾತ್ರ ಲಾಕ್‌ಡೌನ್‌ ಮಾಡಲಾಗುವುದು‘ ಎಂದು ಅವರು ಹೇಳಿದರು.

’ಸ್ವಯಂ ಲಾಕ್‌ಡೌನ್‌ಗೆ ನಾವೂ ಬೆಂಬಲ ಕೊಡ್ತೀವಿ. ಕೆಲವು ಕಡೆ ಸ್ಥಳೀಯರ ಸಹಕಾರದಿಂದ ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರಯತ್ನ ಪಡುತ್ತಿದ್ದೇವೆ‘ ಎಂದು ತಿಳಿಸಿದರು.

3,500 ಜನರಿಗೆ ಚಿಕಿತ್ಸೆ: ’ಜಿಲ್ಲೆಯಲ್ಲಿ ಕೋವಿಡ್–19 ಪೀಡಿತ 3,500 ಜನರಿಗೆ ಚಿಕಿತ್ಸೆ ಕೊಡುವಷ್ಟು ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಇನ್ನೂ 1 ಸಾವಿರ ಜನರಿಗೆ ಚಿಕಿತ್ಸೆ ಕೊಡಲು ಚಾಮುಂಡಿ ವಿಹಾರ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಾಗಿ ಸೂಕ್ತ ಸಿದ್ಧತೆ ನಡೆಸುತ್ತೇವೆ‘ ಎಂದು ಅಭಿರಾಮ್ ಹೇಳಿದರು.

’ಮುಂದಿನ ಹಂತದಲ್ಲಿ ಹಾಸ್ಟೆಲ್, ಸಮುದಾಯ, ಕಲ್ಯಾಣ ಮಂಟಪವನ್ನು ಬಳಸಿಕೊಳ್ಳುತ್ತೇವೆ. ಸೋಂಕು ನಿಯಂತ್ರಣಕ್ಕಾಗಿ ಮೈಸೂರಿನಲ್ಲೂ ವಲಯವಾರು ಸಮಿತಿ ರಚಿಸುತ್ತೇವೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರವನ್ನು ಪಡೆಯುತ್ತೇವೆ‘ ಎಂದು ತಿಳಿಸಿದರು.

ಲಾಕ್‌ಡೌನ್‌ ಸಮಸ್ಯೆಗೆ ಪರಿಹಾರ ಅಲ್ಲ: ಬಿಎಸ್‌ವೈ

’ಲಾಕ್‌ಡೌನ್‌ ಈ ಸಮಸ್ಯೆಗೆ ಪರಿಹಾರ ಅಲ್ಲರೀ. ಕಂಟ್ರೋಲ್ ಮಾಡಬೇಕು. ಹೇಗೆ ಮಾಡಬೇಕು ಎಂಬುದನ್ನು ನೋಡಿ‘ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ವಿಡಿಯೊ ಸಂವಾದದಲ್ಲಿ ಮೈಸೂರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾಡಳಿತದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದ ಸಿಎಂ, ’ಲಾಕ್‌ಡೌನ್‌ ಮಾಡೋದ್ರಿಂದ ಸಮಸ್ಯೆ ಬಗೆಹರಿಯುತ್ತೆ ಎಂಬ ಭ್ರಮೆ ಬೇಡ. ನಾನು ಲಾಕ್‌ಡೌನ್‌ಗೆ ವಿರೋಧ ಇರೋನು. ಬೆಂಗಳೂರಿನಲ್ಲಿ ವಿಶೇಷ ಕಾರಣಕ್ಕೆ ಒಂದು ವಾರ ಲಾಕ್‌ಡೌನ್‌ ಮಾಡುತ್ತಿದ್ದೇವೆ‘ ಎಂದರು.

’ಅನಗತ್ಯವಾಗಿ ಲಾಕ್‌ಡೌನ್‌ ಬಗ್ಗೆ ಯೋಚಿಸಬೇಡಿ. ನಿಯಂತ್ರಿಸೋ ಬಗ್ಗೆಯಷ್ಟೇ ಯೋಚಿಸಿ‘ ಎಂದು ಜಿಲ್ಲಾಡಳಿತದ ಅಧಿಕಾರಿಗಳಿಗೆ ವಿಡಿಯೊ ಸಭೆಯಲ್ಲಿ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಡಿ ಗ್ರೂಪ್ ನೌಕರರ ನೇಮಕಾತಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ, ಮುಖ್ಯ ಕಾರ್ಯದರ್ಶಿಗೆ ’ಮೊದಲು ನೋಡಿ‘ ಎಂದು ಬಿಎಸ್‌ವೈ ಆದೇಶಿಸಿದರು.

ಕೊರೊನಾ: ಮನೆ ಮನೆ ಸಮೀಕ್ಷೆ

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ಹರಡುವಿಕೆ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರ ಜೊತೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ ಚರ್ಚಿಸಲಾಯಿತು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ’ಎನ್.ಆರ್.ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ರಾಜೇಂದ್ರನಗರ, ಬನ್ನಿಪಂಟಪ ಹಾಗೂ ಶಾಂತಿನಗರ ಸೇರಿದಂತೆ ಅನೇಕ ಕಡೆ ಸೋಂಕು ಹೆಚ್ಚಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ, ಹತ್ತಿರವಾಗುವಂತೆ ಕೋವಿಡ್ ಪರೀಕ್ಷಾ ಕೇಂದ್ರ ತೆರೆದು ಪರೀಕ್ಷೆ ನಡೆಸಲಾಗುವುದು‘ ಎಂದು ಸಭೆಗೆ ಮಾಹಿತಿ ನೀಡಿದರು.

ಡಿಸಿಪಿ ಪ್ರಕಾಶ್‍ಗೌಡ ಮಾತನಾಡಿ, ’ಜಿಲ್ಲಾಡಳಿತ ಕೈಗೊಳ್ಳುವ ಕ್ರಮಕ್ಕೆ ಪೊಲೀಸ್ ಇಲಾಖೆ ಬದ್ದವಾಗಿದ್ದು, ಲಾಕ್‍ಡೌನ್ ಮಾಡುವ ಪ್ರದೇಶಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದರೆ, ನಮ್ಮ ಸಿಬ್ಬಂದಿ ನಿಯೋಜಿಸಲಾಗುತ್ತದೆ‘ ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್‌ ಮಿಶ್ರಾ, ಪಾಲಿಕೆ ವೈದ್ಯರಾದ ಡಾ.ನಾಗರಾಜು, ಡಾ.ಜಯಂತ್, ಡಿಡಿಪಿಐ ಡಾ.ಪಾಂಡುರಂಗ, ನಗರ ಪಾಲಿಕೆ ಸದಸ್ಯ ಅಯೂಬ್ ಖಾನ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT